ADVERTISEMENT

ರಾಮೇಶ್ವರಂ ಕೆಫೆ ಬಾಂಬ್ ಪ್ರಕರಣ: ಬಿಜೆಪಿ ರಾಜ್ಯ ಕಚೇರಿಗೆ ಪೊಲೀಸ್ ಭದ್ರತೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2024, 15:23 IST
Last Updated 10 ಸೆಪ್ಟೆಂಬರ್ 2024, 15:23 IST
<div class="paragraphs"><p>ಬಿಜೆಪಿ ಧ್ವಜ ( ಸಾಂಕೇತಿಕ ಚಿತ್ರ)</p></div>

ಬಿಜೆಪಿ ಧ್ವಜ ( ಸಾಂಕೇತಿಕ ಚಿತ್ರ)

   

ಬೆಂಗಳೂರು: ಇಲ್ಲಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಘಟಕದ ಕಚೇರಿಗೆ ಬಿಗಿ ಪೊಲೀಸ್​ ಭದ್ರತೆ ಒದಗಿಸಲಾಗಿದ್ದು, ಲೋಹ ಶೋಧಕ (ಮೆಟಲ್ ಡಿಟೆಕ್ಟರ್‌) ಅಳವಡಿಸಿ, ಕಚೇರಿ ಎದುರು ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ.

ಮಲ್ಲೇಶ್ವರ ಪೊಲೀಸ್ ಠಾಣೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ ಬಿ.ಎಲ್.ಜಗದೀಶ್ ಅವರು ಮಂಗಳವಾರ ಭದ್ರತೆ ಪರಿಶೀಲನೆ ನಡೆಸಿದರು. ಕಚೇರಿಗೆ ಬರುವವರನ್ನು ತಪಾಸಣೆ ನಡೆಸಿ ಒಳಗೆ ಕಳುಹಿಸುವಂತೆ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ADVERTISEMENT

ಬ್ರೂಕ್‌ ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟಿಸಿದ್ದ ಶಂಕಿತ ಉಗ್ರರು ಬಿಜೆಪಿ ರಾಜ್ಯ ಘಟಕದ ಕಚೇರಿಯನ್ನೂ ಗುರಿಯಾಗಿಸಿಕೊಂಡಿದ್ದಾಗಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಜೆಪಿ ಕಚೇರಿಗೆ ಭದ್ರತೆ ಒದಗಿಸಿದ್ದಾರೆ.

‘ಪಕ್ಷದ ಸಭೆ, ಸಮಾರಂಭ ಹಾಗೂ ಗಣ್ಯರು ಭೇಟಿ ನೀಡಿದ ಸಂದರ್ಭದಲ್ಲಿ ಮಾತ್ರ ಕಚೇರಿಯಲ್ಲಿ ಮೆಟಲ್‌ ಡಿಟೆಕ್ಟರ್ ಅಳವಡಿಸಲಾಗುತ್ತಿತ್ತು. ಈಗ ಕಾಯಂ ಆಗಿ ಅಳವಡಿಸಿ, ಕಚೇರಿಗೆ ಬರುವವರನ್ನೆಲ್ಲ ತಪಾಸಣೆ ನಡೆಸಿ ಒಳಗೆ ಬಿಡಲಾಗುವುದು. ನಿಷೇಧಿತ ವಸ್ತುಗಳನ್ನು ಪ್ರವೇಶ ದ್ವಾರದಲ್ಲೇ ಪತ್ತೆ ಹಚ್ಚಲಾಗುತ್ತದೆ. ಇದಕ್ಕಾಗಿಯೇ ಒಬ್ಬರು ಸಹಾಯಕ ಪೊಲೀಸ್ ಸಬ್ ಇನ್‌ಸ್ಪೆಕ್ಟರ್, ಮೂವರು ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲಾಗಿದೆ. ಗಂಟೆಗೊಮ್ಮೆ ಠಾಣಾಧಿಕಾರಿ ಭೇಟಿ ನೀಡುತ್ತಾರೆ’ ಎಂದು ಪಿಎಸ್‌ಐ ಜಗದೀಶ್ ತಿಳಿಸಿದರು.

‘ಬಿಜೆಪಿ ಕಚೇರಿ ಮುಂಭಾಗ ಕೆಎಸ್‌ಆರ್‌ಪಿ ವಾಹನ (20 ಸಿಬ್ಬಂದಿ) ನಿಯೋಜಿಸಲಾಗಿದೆ. ಪಕ್ಷದ ವತಿಯಿಂದ ಆರು ಮಂದಿ ಖಾಸಗಿ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ. ಕಚೇರಿ ಸುತ್ತಲೂ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದ್ದು, ಅನುಮಾನಾಸ್ಪದ ವ್ಯಕ್ತಿಗಳನ್ನು ಕಂಡರೆ ತಕ್ಷಣ ಮಾಹಿತಿ ನೀಡುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ. ಕಚೇರಿಗೆ ಬರುವವರಲ್ಲಿ  ಕಾರ್ಯಕರ್ತರು, ಮುಖಂಡರು ಯಾರು ಎಂಬುದನ್ನು ಗುರುತಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಕಚೇರಿಗೆ ಎಲ್ಲಾ ರೀತಿಯ ಭದ್ರತೆ ಒದಗಿಸಲಾಗಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.