ಬೆಂಗಳೂರು: ಶಿವಾಜಿನಗರದ ಪೊಲೀಸ್ ವಸತಿಗೃಹಗಳ ಸಮುಚ್ಚಯದ ಆವರಣದಲ್ಲಿ ಕಸಕ್ಕೆ ಹೊತ್ತಿಕೊಂಡಿದ್ದ ಬೆಂಕಿಯಲ್ಲಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಹರ್ಷಾಲಿ ಎಂಬ ಮೂರೂವರೆ ವರ್ಷದ ಮಗು ಮೃತಪಟ್ಟಿದ್ದಾಳೆ.
ಕಬ್ಬನ್‌ಪಾರ್ಕ್ ಸಂಚಾರ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಲೋಕೇಶಪ್ಪ ಹಾಗೂ ಸುಧಾಮಣಿ ದಂಪತಿಯ ಮಗು ಹರ್ಷಾಲಿ. ಮಾರ್ಚ್ 5ರಂದು ಸಂಜೆ ಆಟ
ವಾಡುತ್ತಿದ್ದ ವೇಳೆ ಬೆಂಕಿ ಹೊತ್ತಿಕೊಂಡು ಮಗುವಿನ ದೇಹದ ಶೇ 30ರಷ್ಟು ಭಾಗ ಸುಟ್ಟು ಹೋಗಿತ್ತು.
ಬೌರಿಂಗ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನಂತರ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮಾರ್ಚ್ 13ರಂದು ಮಗು ಅಸುನೀಗಿದೆ. ಆ ಸಂಬಂಧ ಶಿವಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮನಕಲಕುವ ತಂದೆಯ ಪತ್ರ: ಮಗುವಿನ ಸಾವಿನಿಂದ ನೊಂದ ತಂದೆ ಲೋಕೇಶಪ್ಪ, ತಮ್ಮ ಸಹೋದ್ಯೋಗಿ ಪೊಲೀಸರಿಗೆ ಪತ್ರವೊಂದನ್ನು ಬರೆದಿದ್ದಾರೆ. ಆ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಘಟನೆ ಹೇಗಾಯಿತು? ಹೊಣೆ ಯಾರು? ಎಂಬ ಅಂಶಗಳನ್ನು ಪತ್ರದಲ್ಲಿ ಉಲ್ಲೇಖಿಸಿದ್ದು, ಇದು ಮನ ಕಲಕುವಂತಿದೆ.
‘ಮಗಳ ಸಾವು ನನ್ನನ್ನು ಕಾಡುತ್ತಿದೆ. ಈ ಸಾವಿಗೆ ಯಾರು ಹೊಣೆ?. ಆ ದೇವರಾ? ಅಥವಾ ಪೊಲೀಸ್ ವಸತಿಗೃಹದ ಅವ್ಯವಸ್ಥೆಯಾ? ಅಥವಾ ನಮ್ಮ ದೌರ್ಬಲ್ಯವಾ? ಗೊತ್ತಾಗತ್ತಿಲ್ಲ. ನನ್ನ ನೋವಿನ ಕಥೆಯನ್ನು ನಿಮ್ಮ ಮುಂದೆ ಹೇಳುತ್ತಿದ್ದು, ನನಗೆ ಬಂದ ಸ್ಥಿತಿ ನಿಮಗೆ ಬಾರದಿರಲಿ. ಇದು ಎಲ್ಲರಿಗೂ ಎಚ್ಚರಿಕೆಯ ಪಾಠವಾಗಲಿ’ ಎಂದು ಪತ್ರದಲ್ಲಿ ಲೋಕೇಶಪ್ಪ ಹೇಳಿದ್ದಾರೆ.
‘ಕುಟುಂಬ ಸಮೇತ ಕ್ವಾರ್ಟರ್ಸ್‌ನಲ್ಲಿ ವಾಸವಿದ್ದೇನೆ. ಮಾರ್ಚ್ 5ರಂದು ಸಂಜೆ 5.30ಕ್ಕೆ ವಿಧಾನಸೌಧ ಬಳಿಯ ಎಜಿಎಸ್ ಜಂಕ್ಷನ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಸಹೋದ್ಯೋಗಿಯೊಬ್ಬರ ಪತ್ನಿಯು ಕರೆ ಮಾಡಿ, ‘ನಿಮ್ಮ ಮಗು ಚುಕ್ಕಿಗೆ (ಹರ್ಷಾಲಿಯನ್ನು ಪ್ರೀತಿಯಿಂದ ಕರೆಯುವ ಹೆಸರು) ಗಾಯವಾಗಿದೆ. ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾರೆ’ ಎಂದಿದ್ದರು. ಆಸ್ಪತ್ರೆಗೆ ಹೋದಾಗ ಮಗು, ತುರ್ತು ನಿಗಾ ಘಟಕದಲ್ಲಿತ್ತು. ಮೈಯೆಲ್ಲ ಬೆಂಕಿಯಲ್ಲಿ ಬೆಂದು ಹೋಗಿತ್ತು. ಮೈ, ಕೈ ಸೇರಿದಂತೆ ಸಂಪೂರ್ಣ ದೇಹ ಸುಟ್ಟಿತ್ತು. ನನ್ನ ಕಂಡ ಕೂಡಲೇ ‘ಅಪ್ಪ... ಅಪ್ಪ...’ ಅಂತಾ ತಬ್ಬಿಕೊಂಡಿತು.’
‘ಬೆಂಕಿಯಲ್ಲಿ ಬಿದ್ದಿದ್ದ ಮಗುವನ್ನು ಹೊರಗೆ ತೆಗೆದ ವ್ಯಕ್ತಿ, ಘಟನೆ ಬಗ್ಗೆ ಹೇಳಿದರು. ನನ್ನ ಮಗಳು, ಮನೆಯ ಹತ್ತಿರ ಆಟವಾಡುತ್ತಿದ್ದಳು. ಅಲ್ಲಿಯೇ ಕಸ, ಮರದ ಬುಡ ಹಾಗೂ ರೆಂಬೆಗಳಿಗೆ ಬೆಂಕಿ ಹಚ್ಚಲಾಗಿತ್ತು. ಆಟದ ವೇಳೆ ಬಾಲಕನೊಬ್ಬ, ಮಗಳ ಬಳಿ ಇದ್ದ ಚೆಂಡು ಕಿತ್ತುಕೊಳ್ಳಲು ಹೋಗಿ ಆಕೆಯನ್ನು ತಳ್ಳಿದ್ದ. ಆಗ ಆಕೆ, ಬೆಂಕಿಯೊಳಗೆ ಬಿದ್ದಿದ್ದಳು’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
‘ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು, ಮಗು ದಾಖಲಾದ ಬಗ್ಗೆ ಶಿವಾಜಿನಗರ ಠಾಣೆಗೆ ಮೆಮೋ ಕಳುಹಿಸಿದ್ದರು. ಅಲ್ಲಿಯ ಪೊಲೀಸರು, ಸೌಜನ್ಯಕ್ಕಾದರೂ ಆಸ್ಪತ್ರೆಗೆ ಬಂದು ಹೇಳಿಕೆ ಪಡೆಯಲಿಲ್ಲ. ಮಗುವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗಲೂ ಪೊಲೀಸ್ ಅಧಿಕಾರಿಯಾಗಲೀ, ಕ್ವಾರ್ಟರ್ಸ್ ಮೇಲ್ವಿಚಾರಕರಾಗಲಿ ಬರಲಿಲ್ಲ. ಮಗು ಸತ್ತ ನಂತರವೇ ಪೊಲೀಸರು ದೂರು ದಾಖಲಿಸಿಕೊಂಡರು’
‘ಇಂದಿನ ಕ್ವಾರ್ಟರ್ಸ್‌ಗಳು ಹೇಗಿವೆ ಎಂದರೆ, ಅವ್ಯವಸ್ಥೆ ಕೇಳೋರು ಇಲ್ಲ. ಹೇಳೋರು ಇಲ್ಲ. ಮೂರು ದಿನಗಳಿಂದ ಕ್ವಾರ್ಟರ್ಸ್ ಆವರಣದಲ್ಲಿ ಕಸ ಸುಡುತ್ತಿದ್ದರು. ಮಕ್ಕಳು ಆಟ ಆಡುವಾಗಲೂ ಬೆಂಕಿ ಉರಿಯುತ್ತಿತ್ತು. ಅದನ್ನು ಮೇಲ್ವಿಚಾರಕರೂ ನಂದಿಸಿರಲಿಲ್ಲ. ಕ್ವಾರ್ಟರ್ಸ್ ಅವ್ಯವಸ್ಥೆ, ಅಸ್ವಚ್ಛತೆ ಹಾಗೂ ಅಲ್ಲಿಯ ಆಗುಹೋಗುಗಳಿಗೆ ಮೇಲ್ವಿಚಾರಕರೇ ಹೊಣೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
‘ಬೆಂಕಿಯಿಂದ ಸತ್ತು ಹೋದ ನನ್ನ ಕಂದ ವಾಪಸು ಬರುವುದಿಲ್ಲ. ಆದರೆ, ಕ್ವಾರ್ಟರ್ಸ್‌ನಲ್ಲಿರುವ ಬೇರೆ ಯಾವುದೇ ಮಕ್ಕಳಿಗೆ ಈ ಗತಿ ಬರದಂತೆ ಎಚ್ಚರ ವಹಿಸಬೇಕು. ಅಧಿಕಾರಿಗಳು, ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂಬುದೇ ನನ್ನ ಮನವಿ’ ಎಂದು ಲೋಕೇಶಪ್ಪ ಹೇಳಿದ್ದಾರೆ.
ಕ್ವಾರ್ಟರ್ಸ್ ಕಟ್ಟಡ ತೆರವಿಗೆ ನೋಟಿಸ್
‘ಶಿವಾಜಿನಗರದ ಕ್ವಾರ್ಟರ್ಸ್‌ನಲ್ಲಿ ಕಾನ್‌ಸ್ಟೆಬಲ್, ಹೆಡ್ ಕಾನ್‌ಸ್ಟೆಬಲ್ ಹಾಗೂ ಸಹಾಯಕ ಸಬ್ ಇನ್‌ಸ್ಪೆಕ್ಟರ್ ದರ್ಜೆಯ ಸಿಬ್ಬಂದಿ ಕುಟುಂಬಗಳು ವಾಸವಿದೆ. ಕ್ವಾರ್ಟರ್ಸ್‌ನ ಕಟ್ಟಡಗಳು ಶಿಥಿಲಗೊಂಡಿದ್ದರಿಂದಾಗಿ ತೆರವು ಮಾಡಲು ವರ್ಷದ ಹಿಂದೆಯೇ ನಿವಾಸಿಗಳಿಗೆ ನೋಟಿಸ್ ನೀಡಲಾಗಿತ್ತು’ ಎಂದ ನಿವಾಸಿಯೊಬ್ಬರು ತಿಳಿಸಿದರು.
’12 ಬ್ಲಾಕ್‌ಗಳ ಪೈಕಿ ಒಂದು ಬ್ಲಾಕ್‌ನ ಕಟ್ಟಡವನ್ನು ಮಾತ್ರ ಕೆಡವಲಾಗಿದೆ. ಹೊಸದಾಗಿ ಬಿನ್ನಿಮಿಲ್ ಬಳಿ ಕ್ವಾರ್ಟರ್ಸ್ ನಿರ್ಮಿಸಲಾಗಿದ್ದು, ಅಲ್ಲಿಯ ಮನೆಗಳನ್ನು ಇದುವರೆಗೂ ಬಳಕೆಗೆ ನೀಡಿಲ್ಲ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.