ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಶನಿವಾರ ದಿಢೀರ್ ದಾಳಿಮಾಡಿ ಶೋಧ ನಡೆಸಿರುವ ಪೊಲೀಸರು, 15 ಮೊಬೈಲ್ ಫೋನ್, ಪೆನ್‌ಡ್ರೈವ್, ಚಾಕು, ಎಲೆಕ್ಟ್ರಿಕ್ ಸ್ಟೌ ಸೇರಿದಂತೆ ನಿಷೇಧಿತ ವಸ್ತುಗಳು ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.
ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ಚಿತ್ರನಟ ದರ್ಶನ್ ಹಾಗೂ ಸಹಚರರನ್ನು ಇದೇ ಕಾರಾಗೃಹದಲ್ಲಿ ಇರಿಸಲಾಗಿತ್ತು. ಅವರಿಗೆ ವಿಶೇಷ ಆತಿಥ್ಯ ನೀಡಲಾಗಿದೆ ಎನ್ನಲಾಗಿತ್ತು. ಆ ಕುರಿತ ತನಿಖೆಯ ಭಾಗವಾಗಿ ಶನಿವಾರ ಶೋಧ ಕಾರ್ಯ ನಡೆದಿದೆ.
ಡಿಸಿಪಿ ಸಾರಾ ಫಾತಿಮಾ ಮಾರ್ಗದರ್ಶನದಲ್ಲಿ ಎಸಿಪಿ, ಇಬ್ಬರು ಇನ್‌ಸ್ಪೆಕ್ಟರ್‌ಗಳು, ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗಳು ಸೇರಿದಂತೆ 30 ಸಿಬ್ಬಂದಿ ಜೈಲಿನಲ್ಲಿ ಶೋಧ ನಡೆಸಿದ್ದರು. ಈ ವೇಳೆ 15 ಮೊಬೈಲ್ ಫೋನ್, ಮೊಬೈಲ್ ಚಾರ್ಜರ್‌ಗಳು, ಇಯರ್ ಫೋನ್, ಏಳು ಎಲೆಕ್ಟ್ರಿಕ್ ಸ್ಟೌ, ಬೀಡಿ, ಸಿಗರೇಟ್, ಒಂದು ಪೆನ್ ಡ್ರೈವ್, ಐದು ಚಾಕು ಹಾಗೂ ₹32 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ತವ್ಯಲೋಪದ ಆರೋಪದ ಮೇಲೆ ಜೈಲು ಅಧಿಕಾರಿಗಳು, ಕಾರಾಗೃಹದ ಭದ್ರತಾ ಉಸ್ತುವಾರಿ ಹೊಂದಿರುವ ರಾಜ್ಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ, ವಿಚಾರಣಾಧೀನ ಕೈದಿಗಳು ಮತ್ತು ಸಜಾ ಕೈದಿಗಳ ವಿರುದ್ಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
‘ತಪಾಸಣೆ ವೇಳೆ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಅಲಿಯಾಸ್ ನಾಗರಾಜು ಬಳಿ ಮೊಬೈಲ್ ಫೋನ್ ಪತ್ತೆಯಾಗಿದೆ. ಅಲ್ಲದೇ ನಾಗನ ಸಹಚರರು ಸಹ ಮೊಬೈಲ್ ಬಳಸುತ್ತಿರುವುದು ಗೊತ್ತಾಗಿದೆ. ವಿಚಾರಣಾಧೀನ ಕೈದಿಗಳು ಆಮ್ಲೆಟ್ ತಯಾರಿಸಲು ಹಾಗೂ ಸಾಂಬಾರು ಬಿಸಿ ಮಾಡಿಕೊಳ್ಳಲು ಎಲೆಕ್ಟ್ರಿಕ್ ಸ್ಟೌ ಬಳಸುತ್ತಿದ್ದರು. ಬಿಗಿ ಭದ್ರತೆ ನಡುವೆಯೂ ಇವುಗಳನ್ನು ಜೈಲಿನೊಳಗೆ ಹೇಗೆ ತರಲಾಗಿದೆ ಎಂಬ ಕುರಿತು ತನಿಖೆ ನಡೆಯುತ್ತಿದೆ’ ಎಂದಿದ್ದಾರೆ.
ಕಾರಾಗೃಹದಲ್ಲಿ ಜಪ್ತಿ ಮಾಡಿರುವ ಪೆನ್‌ಡ್ರೈವ್‌ಗಳಲ್ಲಿ ಏನಿದೆ ಎಂಬುದನ್ನು ಕೋರ್ಟ್ ಅನುಮತಿ ಪಡೆದು ಪರಿಶೀಲನೆ ನಡೆಸಬೇಕಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.