ADVERTISEMENT

ರಾಜಕೀಯ ತರಬೇತಿ ಸಂಸ್ಥೆ ಆರಂಭಕ್ಕೆ ಚಿಂತನೆ: ಯು.ಟಿ. ಖಾದರ್‌

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 19:48 IST
Last Updated 5 ಮಾರ್ಚ್ 2024, 19:48 IST
ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯು ಕಾನೂನು ವಿದ್ಯಾರ್ಥಿಗಳಿಗಾಗಿ ವಿಕಾಸಸೌಧದಲ್ಲಿ ಮಂಗಳವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆಯಲ್ಲಿ ಸಚಿವೆಯಾಗಿ ಕಾರ್ಯನಿರ್ವಹಿಸಿದ ವಿದ್ಯಾರ್ಥಿನಿಯೊಬ್ಬರು ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿರುವುದು
–ಪ್ರಜಾವಾಣಿ ಚಿತ್ರ
ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯು ಕಾನೂನು ವಿದ್ಯಾರ್ಥಿಗಳಿಗಾಗಿ ವಿಕಾಸಸೌಧದಲ್ಲಿ ಮಂಗಳವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆಯಲ್ಲಿ ಸಚಿವೆಯಾಗಿ ಕಾರ್ಯನಿರ್ವಹಿಸಿದ ವಿದ್ಯಾರ್ಥಿನಿಯೊಬ್ಬರು ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿರುವುದು –ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಯುವಜನರಿಗೆ ರಾಜಕೀಯ ಮತ್ತು ಆಡಳಿತದ ಕುರಿತು ತರಬೇತಿ ನೀಡಲು ವಿಧಾನಮಂಡಲದಿಂದ ಪ್ರತ್ಯೇಕ ಸಂಸ್ಥೆ ಆರಂಭಿಸುವ ಚಿಂತನೆ ನಡೆದಿದೆ ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್‌ ತಿಳಿಸಿದರು.

ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯಿಂದ ರಾಜ್ಯದ ಕಾನೂನು ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಮಂಗಳವಾರ ಆಯೋಜಿಸಿದ್ದ ಮಾದರಿ ವಿಧಾನಸಭಾ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಯುವಜನರಿಗೆ ಸೂಕ್ತ ತರಬೇತಿ ದೊರೆತರೆ ಉತ್ತಮ ನಾಯಕತ್ವ ಸೃಷ್ಟಿಯಾಗಲು ಸಾಧ್ಯವಾಗುತ್ತದೆ. ಅದಕ್ಕೆ ಪೂರಕವಾಗಿ ತರಬೇತಿ ಆರಂಭಿಸುವ ಪ್ರಸ್ತಾವವಿದೆ. ವಿಧಾನ ಪರಿಷತ್‌ ಸಭಾಪತಿಯವರ ಜತೆಗೂ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ವಿಧಾನಮಂಡಲದ ವತಿಯಿಂದ ‘ಸ್ಕೂಲ್‌ ಆಫ್‌ ಗವರ್ನೆನ್ಸ್‌’ ಎಂಬ ಸಂಸ್ಥೆ ಆರಂಭಿಸುವ ಯೋಚನೆ ಇದೆ’ ಎಂದರು.

ADVERTISEMENT

ವಯೋಮಿತಿಯ ಆಧಾರದಲ್ಲಿ ಎಲ್ಲ ಜನರಿಗೂ ಏಕಕಾಲಕ್ಕೆ ಮತದಾನದ ಹಕ್ಕು ನೀಡಿದ ದೇಶ ಭಾರತ ಮಾತ್ರ. ಇಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆ ಅತ್ಯಂತ ಶ್ರೇಷ್ಠವಾದುದು. ಇತ್ತೀಚಿನ ವರ್ಷಗಳಲ್ಲಿ ಮತದಾರರು ಹಣದ ಪ್ರಭಾವಕ್ಕೆ ಮಣಿಯುತ್ತಿದ್ದಾರೆ. ಜನರಲ್ಲೇ ಸುಧಾರಣೆ ತರುವಂತಹ ಪ್ರಯತ್ನಗಳು ಆಗಬೇಕಿದೆ ಎಂದು ಹೇಳಿದರು.

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ‘ಒಂದು ಕಾಲದಲ್ಲಿ 91 ವಕೀಲರು ವಿಧಾನಸಭೆಯ ಸದಸ್ಯರಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಚುನಾವಣೆಯಲ್ಲಿ ಹಣಬಲದಲ್ಲಿ ಗೆದ್ದು ಬರುವವರ ಸಂಖ್ಯೆ ಹೆಚ್ಚುತ್ತಿದೆ. ಅವರಿಂದ ಯಾವ ಕೆಲಸವೂ ಆಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಈಗ ಇರುವ ಪ್ರಜಾಪ್ರಭುತ್ವದ ಬಗ್ಗೆ ನನಗೆ ಒಳ್ಳೆಯ ಭಾವನೆ ಇಲ್ಲ. ಹಣ ತೆಗೆದುಕೊಂಡು ಮತ ಚಲಾಯಿಸುವವರು ಇರುವವರೆಗೂ ಸುಧಾರಣೆ ಕಷ್ಟ’ ಎಂದರು.

ವಿಧಾನಮಂಡಲದ ವತಿಯಿಂದಲೇ ಯುವಜನರಿಗೆ ಮಾದರಿ ವಿಧಾನಸಭಾ ಅಧಿವೇಶನ ನಡೆಸಲಾಗುವುದು. ದೊಡ್ಡ ಮೊತ್ತದ ನಗದು ಬಹುಮಾನ ನೀಡುವ ಮೂಲಕ ಯುವಜನರನ್ನು ಪ್ರೋತ್ಸಾಹಿಸಲಾಗುವುದು ಎಂದು ಹೇಳಿದರು.

ಕರ್ನಾಟಕ ಕಾನೂನು ಮತ್ತು ಸುಧಾರಣಾ ಸಂಸ್ಥೆಯ ನಿರ್ದೇಶಕ ಕೆ. ದ್ವಾರಕಾನಾಥ್‌ ಬಾಬು ಅಧ್ಯಕ್ಷತೆ ವಹಿಸಿದ್ದರು. ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ, ವಿಧಾನಸಭೆಯ ಅಧ್ಯಕ್ಷರ ಸಲಹೆಗಾರ ಪಿ. ಓಂಪ್ರಕಾಶ್‌, ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ಸಂಶೋಧನಾ ಮುಖ್ಯಸ್ಥ ರೇವಯ್ಯ ಒಡೆಯರ್‌ ಉಪಸ್ಥಿತರಿದ್ದರು.

‘ಮೊಗಸಾಲೆಯಲ್ಲಿ ಹಾಸಿಗೆ ಹಾಕಬೇಕಾಗಬಹುದು’

‘ವಿಧಾನಸಭೆ ಅಧಿವೇಶನದ ಅವಧಿಯಲ್ಲಿ ಶಾಸಕರು ಮಧ್ಯಾಹ್ನದ ವೇಳೆ ನಿದ್ದೆ ಮಾಡುವುದಕ್ಕಾಗಿ ಸದನದಿಂದ ಹೊರ ಹೋಗುತ್ತಾರೆ. ಅವರನ್ನು ಹಿಡಿದಿಟ್ಟುಕೊಳ್ಳಲು ವಿಧಾನಸಭೆಯ ಮೊಗಸಾಲೆಯಲ್ಲೇ 20 ಹಾಸಿಗೆಗಳ ವ್ಯವಸ್ಥೆ ಮಾಡಿದರೆ ಒಳ್ಳೆಯದೇನೋ ಅನಿಸುತ್ತದೆ’ ಎಂದು ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್‌ ಹೇಳಿದರು. ‘ಶಾಸಕರು ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿ ಎಂಬ ಕಾರಣಕ್ಕಾಗಿ ಊಟ ತಿಂಡಿ ವ್ಯವಸ್ಥೆ ಮಾಡಿಸಲಾಯಿತು. ಮಧ್ಯಾಹ್ನ ಸ್ವಲ್ಪ ನಿದ್ದೆ ಮಾಡಬೇಕು ಎಂದು ಹೇಳುತ್ತಾರೆ. 20 ಹಾಸಿಗೆ ಕಂ ಸೋಫಾ ಹಾಕಿಸಿದರೆ ಕೋರಂಗೆ ಬೇಕಾಗುವಷ್ಟು ಶಾಸಕರು ಸದನದ ಮೊಗಸಾಲೆಯಲ್ಲೇ ಇರುತ್ತಾರೆ ಎಂದು ವಿಧಾನಸಭೆಯ ಕಾರ್ಯದರ್ಶಿಯವರಿಗೆ ಹೇಳಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.