ಕೆಂಗೇರಿ: ರಾಮೋಹಳ್ಳಿ ಸಂಪರ್ಕ ರಸ್ತೆಯ ದುಃಸ್ಥಿತಿ ಮತ್ತು ರೈಲ್ವೆ ಲೆವೆಲ್ ಕ್ರಾಸಿಂಗ್‌ನಿಂದಾಗಿ ಆರ್.ಆರ್. ಎಂಜಿನಿಯರಿಂಗ್ ಕಾಲೇಜು ವ್ಯಾಪ್ತಿಯಲ್ಲಿ ದಟ್ಟಣೆ ಹೆಚ್ಚಿದ್ದು, ವಾಹನ ಸವಾರರು ಹೈರಾಣಾಗುತ್ತಿದ್ದಾರೆ.
ಆರ್.ಆರ್.ಎಂಜಿನಿಯರಿಂಗ್ ಕಾಲೇಜು ಬಳಿ ರೈಲ್ವೆ ಲೆವೆಲ್ ಕ್ರಾಸಿಂಗ್ ಇದೆ. ಮೈಸೂರು ರಸ್ತೆಯಿಂದ ರಾಮೋಹಳ್ಳಿ ಕಡೆಗೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ರಾಮೋಹಳ್ಳಿ ವ್ಯಾಪ್ತಿಯಲ್ಲಿ ಹತ್ತಾರು ಕ್ವಾರಿಗಳಿವೆ. ಕುಂಬಳಗೋಡು ಕೈಗಾರಿಕಾ ಪ್ರದೇಶವಿದೆ. ಹೀಗಾಗಿ, ಭಾರಿ ವಾಹನಗಳ ಸಂಚಾರ ಅಧಿಕವಾಗಿದೆ.
ಮೂರ್ನಾಲ್ಕು ನಿಮಿಷ ರೈಲ್ವೆ ಗೇಟ್ ಮುಚ್ಚಿದರೂ ಇಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ಸಾಲು ಒಮ್ಮೊಮ್ಮೆ ಕುಂಬಳಗೋಡು ಠಾಣೆವರೆಗೂ ಇರಲಿದೆ. ರೈಲ್ವೆ ಗೇಟ್ ದಾಟುವ ಧಾವಂತದಲ್ಲಿ ಸಣ್ಣ ಪುಟ್ಟ ಅಪಘಾತಗಳು ಸಂಭವಿಸುತ್ತಿವೆ.
ಆರ್.ಆರ್.ಎಂಜಿನಿಯರಿಂಗ್ ಕಾಲೇಜು ಎದುರಿನ ರಸ್ತೆಯೂ ಹದಗೆಟ್ಟಿದ್ದು, ಸಮಸ್ಯೆ ಹೆಚ್ಚಿಸಿದೆ. ರಸ್ತೆಯ ಒಂದು ಬದಿಯಲ್ಲಿ ಡಾಂಬರು ಕಿತ್ತು ಬಂದಿದ್ದರೆ, ಮತ್ತೊಂದು ಬದಿಯಲ್ಲಿ ಗುಂಡಿಗಳಾಗಿವೆ. ಭಾರಿ ವಾಹನಗಳು ಮಂದಗತಿಯಲ್ಲಿ ಚಲಿಸುತ್ತವೆ. ದಟ್ಟಣೆ ಸಮಸ್ಯೆಯನ್ನು ದುಪ್ಪಟ್ಟಾಗಿಸುತ್ತಿದೆ. ವಿದ್ಯಾರ್ಥಿಗಳು ಕಾಲೇಜು ಗೇಟ್ ದಾಟಿ ಮೈಸೂರು ರಸ್ತೆ ತಲುಪಲು ಹರಸಾಹಸಪಡಬೇಕಿದೆ.
‘ರೈಲ್ವೆ ಗೇಟ್ ತೆರೆದಾಗ ಉಂಟಾಗುವ ದಿಢೀರ್ ವಾಹನ ದಟ್ಟಣೆಯು ಅಪಘಾತಗಳಿಗೆ ಕಾರಣವಾಗುತ್ತಿದೆ. ಸಮರ್ಪಕ ರಸ್ತೆ ಹಾಗೂ ರೈಲ್ವೆ ಕೆಳಸೇತುವೆ ನಿರ್ಮಾಣಕ್ಕೆ ಸರ್ಕಾರ ಶೀಘ್ರ ಕ್ರಮ ವಹಿಸಬೇಕು ಎಂದು ಚಳ್ಳೇಘಟ್ಟ ನಿವಾಸಿ ಮಂಜುನಾಥ್ ಬಿ.ಎನ್.ಆಗ್ರಹಿಸಿದರು.
ರೈಲ್ವೆ ಗೇಟ್ ತೆಗೆಯುತ್ತಿದ್ದಂತೆ ವಾಹನಗಳು ನುಗ್ಗುತ್ತವೆ. ಹೊಗೆ ದೂಳಿನಿಂದ ಸಮೀಪದ ಬಸ್ ನಿಲ್ದಾಣದಲ್ಲಿದ್ದವರು ತೀವ್ರ ಕಿರಿಕಿರಿ ಅನುಭವಿಸುತ್ತಿದ್ದಾರೆ. ನವೀನ್ ಕಾಲೇಜು ವಿದ್ಯಾರ್ಥಿನವೀನ್ ಕಾಲೇಜು ವಿದ್ಯಾರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.