ADVERTISEMENT

ಬೆಂಗಳೂರು | ₹1.38 ಕೋಟಿ ಮೌಲ್ಯದ ಕಳಪೆ ಗುಣಮಟ್ಟದ ಬಟ್ಟೆ ಜಪ್ತಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 16:30 IST
Last Updated 2 ಜುಲೈ 2024, 16:30 IST
ಸಿಸಿಬಿ ಕಚೇರಿ
ಸಿಸಿಬಿ ಕಚೇರಿ   

ಬೆಂಗಳೂರು: ಪ್ರತಿಷ್ಠಿತ ಕಂಪನಿಗಳ ಬ್ರ್ಯಾಂಡ್‌ಗಳ ಹೆಸರಿನಲ್ಲಿ ಕಳಪೆ ಗುಣಮಟ್ಟದ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದ ಬಿಇಎಂಎಲ್‌ ಲೇಔಟ್‌ನ ಅಂಗಡಿಯೊಂದರ ಮೇಲೆ ಸಿಸಿಬಿ ಆರ್ಥಿಕ ಅಪರಾಧ ದಳದ ಪೊಲೀಸರು ದಾಳಿ ನಡೆಸಿ, ₹1.38 ಕೋಟಿ ಮೌಲ್ಯದ ಬಟ್ಟೆಗಳನ್ನು ಜಪ್ತಿ ಮಾಡಿದ್ದಾರೆ.

ನೈಕಿ, ಪೂಮಾ, ಅಡಿದಾಸ್‌ ಸೇರಿದಂತೆ ಆರು ಕಂಪನಿಗಳ ಹೆಸರಿನಲ್ಲಿ ಕಳಪೆ ಗುಣಮಟ್ಟದ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

ಕಳಪೆ ಗುಣಮಟ್ಟದ ಬಟ್ಟೆ ಮಾರಾಟ ಮಾಡುತ್ತಿದ್ದ ಬಗ್ಗೆ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದರು. ಆ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಬಿಇಎಂಎಲ್‌ ಲೇಔಟ್‌ನ ನಿವಾಸಿ ನರಸಿಂಹರಾಜು(38) ಎಂಬುವರನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದರು.

ADVERTISEMENT

‘ಆರೋಪಿಯ ವಿರುದ್ಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಹಕ್ಕುಸ್ವಾಮ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಆರೋಪಿ ಎಲ್ಲಿಂದ ಕಳಪೆ ಗುಣಮಟ್ಟದ ಬಟ್ಟೆಗಳನ್ನು ಖರೀದಿಸಿ ತಂದು ಮಾರಾಟ ಮಾಡುತ್ತಿದ್ದರು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.