ಕೆ.ಆರ್.ಪುರ: ನೂತನವಾಗಿ ನಿರ್ಮಾಣಗೊಂಡು ಎರಡು ತಿಂಗಳ ಹಿಂದೆ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದ್ದ ಕುಂದಲಹಳ್ಳಿ ಕೆಳಸೇತುವೆಯ ಬಳಿಯೇ ಕಾವೇರಿ ನೀರಿನ ಪೈಪ್‌ಗೆ ಹಾನಿಯಾಗಿರುವುದ
ರಿಂದ 100 ಅಡಿಗೂ ಹೆಚ್ಚು ರಸ್ತೆ ಕುಸಿದು, ಹಾನಿಯಾಗಿದೆ.
ಮಾರತ್‌ಹಳ್ಳಿಯಿಂದ ವೈಟ್‌ಫೀಲ್ಡ್ ಹಾಗೂ ವರ್ತೂರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದ್ದು, ಪ್ರತಿ ದಿನ ಲಕ್ಷಾಂತರ ವಾಹನಗಳು ಈ ಭಾಗದಲ್ಲಿ ಸಂಚರಿಸುತ್ತವೆ. ಎರಡು ತಿಂಗಳ ಹಿಂದೆ ಸಂಚಾರಕ್ಕೆ ಮುಕ್ತಗೊಳಿಸಿರುವ ಮುಖ್ಯರಸ್ತೆಯಲ್ಲಿ ಪೈಪ್ ಒಡೆದಿರುವುದರಿಂದ ದಿಢೀರ್ ಸಮಸ್ಯೆಯಾಗಿವಾಹನ ಸವಾರರು ತೊಂದರೆಅನುಭವಿಸುವಂತಾಗಿದೆ.
ಕುಂದಲಹಳ್ಳಿ ಕೆಳಸೇತುವೆ ನಿರ್ಮಿಸುವ ವೇಳೆ ಎಇಸಿಎಸ್ ಹಾಗೂ ಬೆಮೆಲ್ ಬಡಾವಣೆಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಬಿಡಬ್ಲ್ಯೂಎಸ್ಎಸ್‌ಬಿ ಕಾವೇರಿ ನೀರಿನ ಪೈಪ್‌ಗಳನ್ನು ಅಳವಡಿಸಲಾಗಿತ್ತು. ಈಗ ಇದ್ದಕ್ಕಿದ್ದಂತೆ ಪೈಪ್‌ಲೈನ್ ಒಡೆಯಲು ಕಳಪೆ ಕಾಮಗಾರಿಯೇ ಕಾರಣ ಎಂದು ಸ್ಥಳೀಯ ನಿವಾಸಿಗಳು ದೂರಿದರು.
ಕಾವೇರಿ ಪೈಪ್ ಒಡೆದಿದ್ದರಿಂದ ಎಇಸಿಎಸ್ ಹಾಗೂ ಬೆಮೆಲ್ ಬಡಾವಣೆ ಜನರು ಸುಮಾರು ಎಂಟು ಗಂಟೆಗಳ ಕಾಲ ದಿನಬಳಕೆಗೆ ಹಾಗೂ ಕುಡಿಯಲು ನೀರಿಲ್ಲದೆ ಪರದಾಡುವ ಸ್ಥಿತಿನಿರ್ಮಾಣವಾಗಿತ್ತು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ. ವೈಜ್ಞಾನಿಕವಾಗಿ ಪೈಪ್‌ಗಳನ್ನು ಅಳವಡಿಸಿದರೆ ಸಾರ್ವಜನಿಕರ ಲಕ್ಷಾಂತರ ರೂಪಾಯಿ ತೆರಿಗೆ ಹಣ ಪೋಲಾಗುವುದನ್ನು ತಡೆಯಬಹುದಿತ್ತು ಎಂದು ಸ್ಥಳೀಯರು ಹೇಳಿದರು.
‘ಶನಿವಾರ ಬೆಳಿಗ್ಗೆ ಕಾವೇರಿ ಪೈಪ್ ಒಡೆದು ರಸ್ತೆಗೆ ಹಾನಿಯಾಗಿರುವ ಸುದ್ದಿ ತಿಳಿದ ತಕ್ಷಣ ನೀರು ಪೋಲಾಗದಂತೆ ಕ್ರಮ ಕೈಗೊಂಡು ವಾಹನ ಸಂಚಾರ ಮಾರ್ಗ ಬದಲಾಯಿಸಲಾಗಿತ್ತು. ಭಾನುವಾರ ಸಂಜೆ ವೇಳೆಗೆ ಎಲ್ಲವನ್ನೂ ಸರಿಪಡಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಯಿತು’ ಎಂದು ಮಹದೇವಪುರ ವಲಯದ ಬಿಡಬ್ಲ್ಯೂ
ಎಸ್ಎಸ್‌ಬಿ ಕಾರ್ಯನಿರ್ವಾಹಕ ಎಂಜಿನಿಯರ್ ಮಿರ್ಜಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.