ಬೆಂಗಳೂರು: ಪರಿಸರ ಮಾಲಿನ್ಯ ತಡೆಯುವ ಹೆಸರಿನಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶನ ಮೂರ್ತಿಗಳ ಬಳಕೆ ನಿರ್ಬಂಧಿಸಿರುವ ಸರ್ಕಾರದ ನಡೆ ಖಂಡನೀಯ ಎಂದು ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ತಿಳಿಸಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಈ. ಅಶ್ವತ್ಥನಾರಾಯಣ, ‘ಧಾರ್ಮಿಕ ಆಚರಣೆ, ನಂಬಿಕೆ ಮತ್ತು ತಮಗೆ ಇಷ್ಟವಾದ ಮೂರ್ತಿಯನ್ನು ಪೂಜಿಸುವ ಹಕ್ಕು ಪ್ರತಿಯೊಬ್ಬ ಭಕ್ತನಿಗೆ ಇದೆ. ಪರಿಸರಕ್ಕೂ ಹಾನಿಯಾಗದೇ, ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತಹ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು’ ಎಂದು ಆಗ್ರಹಿಸಿದರು.
‘ಇತ್ತೀಚೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯು ತನ್ನ ಆದೇಶದಲ್ಲಿ ಪಿಒಪಿ ಮೂರ್ತಿ, ವಿಗ್ರಹದ ಎತ್ತರ, ಧಾರ್ಮಿಕ ಆಚರಣೆಯ ಬಗ್ಗೆ ಕೆಲವು ನಿರ್ಬಂಧನೆಗಳನ್ನು ವಿಧಿಸಿದೆ. ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಅಡ್ಡಪಡಿಸಲಾಗದು. ಮಂಡಳಿಯ ಈ ಧೋರಣೆಯಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿದೆ’ ಎಂದು ಆರೋಪಿಸಿದರು.
‘ಪಿಒಪಿ ಮೂರ್ತಿಗಳನ್ನು ನೀರು ಮತ್ತು ಪರಿಸರಕ್ಕೆ ಹಾನಿಯಾಗದಂತೆ ನಿಗದಿತ ಕಲ್ಯಾಣಿಗಳಲ್ಲಿ ಮಾತ್ರ ವಿಸರ್ಜಿಸಬೇಕು. ಈ ಮೂರ್ತಿಗಳನ್ನು ಅಲಂಕಾರಕ್ಕೆ ಮಾತ್ರ ಬಳಸಿ, ಮುಂದಿನ ವರ್ಷವೂ ಇದೇ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು. ಪಿಒಪಿ ಮೂರ್ತಿಗಳ ತಯಾರಿಕೆ ಮತ್ತು ಮಾರಾಟಕ್ಕೆ ಯಾವುದೇ ಅಡಚಣೆಯಾಗದಂತೆ ನಿರ್ದೇಶಿಸಬೇಕು’ ಎಂದು ಒತ್ತಾಯಿಸಿದರು.
‘ಉತ್ಸವ ಮೂರ್ತಿ ಬಿಡುವ ಕೆರೆ, ಕಲ್ಯಾಣಿ ಸ್ಥಳಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಅನೇಕ ವರ್ಷಗಳಿಂದ ಸಾರ್ವಜನಿಕ ಗಣೇಶೋತ್ಸವ ಆಚರಿಸುವ ಸಮಿತಿಗಳಿಗೆ ಐದು ವರ್ಷದ ಪರವಾನಗಿ ನೀಡಬೇಕು. ಧ್ವನಿವರ್ಧಕ (ಡಿಜೆ) ಬಳಕೆಗೆ ಯಾವುದೇ ನಿರ್ಬಂಧ ಇರಬಾರದು. ಗೌರಿ–ಗಣೇಶ ಹಬ್ಬದ ಸಂದರ್ಭದಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಪರವಾನಗಿ ಪಡೆದಿರುವ ವ್ಯಕ್ತಿಗಳಿಂದ ಮಾತ್ರ ಪ್ರಸಾದ ವಿನಿಯೋಗಿಸಬೇಕೆಂಬ ಆರೋಗ್ಯ ಇಲಾಖೆ ಆದೇಶ ಕೂಡಲೇ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಯೋಜಕರಾದ ರಾಜಣ್ಣ ಹೊನ್ನೇನಹಳ್ಳಿ, ಗೋಪಾಲಕೃಷ್ಣ ಯಶವಂತಪುರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.