ಬೆಂಗಳೂರು: ಯುವತಿಯೊಬ್ಬರ ಫೋಟೊ ಹಾಗೂ ವಿಡಿಯೊವನ್ನು ಅಶ್ಲೀಲವಾಗಿ ಮಾರ್ಪಡಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟು ಬ್ಲ್ಯಾಕ್‌ಮೇಲ್ ಮಾಡಲಾಗಿದ್ದು, ಈ ಬಗ್ಗೆ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘ನಗರದ ಕಾಲೇಜೊಂದರಲ್ಲಿ ಓದುತ್ತಿರುವ 23 ವರ್ಷ ವಯಸ್ಸಿನ ಯುವತಿಯೊಬ್ಬರು ದೂರು ನೀಡಿದ್ದಾರೆ. ಬ್ಲ್ಯಾಕ್‌ಮೇಲ್ ಮಾಡುತ್ತಿರುವ ಅಪರಿಚಿತ ಯಾರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಇನ್‌ಸ್ಟಾಗ್ರಾಂನಲ್ಲಿ ನಕಲಿ ಖಾತೆ ತೆರೆದಿರುವ ಆರೋಪಿ, ದೂರುದಾರರ ಭಾವಚಿತ್ರ ಹಾಗೂ ವಿಡಿಯೊವನ್ನು ಅಶ್ಲೀಲವಾಗಿ ಮಾರ್ಪಡಿಸಿದ್ದೇನೆ. ಅದೇ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾನೆ. ಯುವತಿಗೆ ವಿಡಿಯೊ ಲಿಂಕ್ ಕಳುಹಿಸಿರುವ ಆರೋಪಿ, ₹ 5,000 ನೀಡುವಂತೆ ಬ್ಲ್ಯಾಕ್‌ಮೇಲ್ ಮಾಡಿದ್ದ. ಆದರೆ, ಯುವತಿ ಹಣ ನೀಡಿಲ್ಲ’ ಎಂದು ಮೂಲಗಳು ತಿಳಿಸಿವೆ.
‘ವಿಡಿಯೊ ಪೋಸ್ಟ್ ಅಳಿಸದಿದ್ದರೆ ಪೊಲೀಸರಿಗೆ ದೂರು ನೀಡುವುದಾಗಿ ಯುವತಿ ಹೇಳಿದ್ದರು. ಆರೋಪಿ, ‘ಪೊಲೀಸರು ನನ್ನ ಮನೆಗೆ ದಿನವೂ ಬಂದು ಹೋಗುತ್ತಾರೆ. ನನಗೆ ಯಾರೂ ಏನು ಮಾಡುವುದಿಲ್ಲ’ ಎಂದು ಸಂದೇಶ ಕಳುಹಿಸಿದ್ದ. ಬ್ಲ್ಯಾಕ್‌ಮೇಲ್ ವಿಷಯವನ್ನು ಪೋಷಕರಿಗೆ ತಿಳಿಸಿದ್ದ ಯುವತಿ, ಠಾಣೆಗೆ ದೂರು ನೀಡಿದ್ದಾರೆ ಎಂದು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.