ADVERTISEMENT

ಸಹಕಾರ ಕ್ಷೇತ್ರದಲ್ಲಿ ಶಿಕ್ಷಣ ಪಡೆದವರಿಗೆ ಹುದ್ದೆ ಮೀಸಲು: ಸಚಿವ ಕೆ.ಎನ್‌. ರಾಜಣ್ಣ

71ನೇ ಅಖಿಲ ಭಾರತ ಸಹಕಾರ ಸಪ್ತಾಹ–2024 ಉದ್ಘಾಟನೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 15:38 IST
Last Updated 14 ನವೆಂಬರ್ 2024, 15:38 IST
<div class="paragraphs"><p>ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್‌, ಸಹಕಾರ ಸಂಘಗಳ ನಿಬಂಧಕ ಟಿ.ಎಚ್.ಎಂ. ಕುಮಾರ್, ಶಾಸಕ ಎಸ್.ಟಿ. ಸೋಮಶೇಖರ್ ಮತ್ತು ಜಿ.ಟಿ.ದೇವೇಗೌಡ ಅವರು ಸಹಕಾರಿ ಸಂಘಗಳ ಪಿತಾಮಹ ಸಿದ್ದನಗೌಡ ಸಣ್ಣಗೌಡನ ಪಾಟೀಲ್, ಗಾಂಧೀಜಿ ಮತ್ತು ನೆಹರೂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು </p></div>

ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್‌, ಸಹಕಾರ ಸಂಘಗಳ ನಿಬಂಧಕ ಟಿ.ಎಚ್.ಎಂ. ಕುಮಾರ್, ಶಾಸಕ ಎಸ್.ಟಿ. ಸೋಮಶೇಖರ್ ಮತ್ತು ಜಿ.ಟಿ.ದೇವೇಗೌಡ ಅವರು ಸಹಕಾರಿ ಸಂಘಗಳ ಪಿತಾಮಹ ಸಿದ್ದನಗೌಡ ಸಣ್ಣಗೌಡನ ಪಾಟೀಲ್, ಗಾಂಧೀಜಿ ಮತ್ತು ನೆಹರೂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು

   

ಪ್ರಜಾವಾಣಿ ಚಿತ್ರ

ಬೆಂಗಳೂರು: ಸಹಕಾರ ಕ್ಷೇತ್ರದಲ್ಲಿ ಶಿಕ್ಷಣ, ತರಬೇತಿ ಪಡೆದವರಿಗೆ ಸಹಕಾರ ಬ್ಯಾಂಕ್‌ಗಳು ಹಾಗೂ ಈ ಕ್ಷೇತ್ರಕ್ಕೆ ಸಂಬಂಧಿಸಿದ ಹುದ್ದೆಗಳನ್ನು ಮೀಸಲಿಡಲು ಪ್ರಯತ್ನಿಸಲಾಗುವುದು ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ತಿಳಿಸಿದರು.

ADVERTISEMENT

71ನೇ ಅಖಿಲ ಭಾರತ ಸಹಕಾರ ಸಪ್ತಾಹ–2024  ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉತ್ತಮವಾಗಿ ಕೆಲಸ ಮಾಡುವವರಿಗೆ ಸಹಕಾರಿಗಳು ಬೆಂಬಲ ನೀಡಬೇಕು. ರಾಜಕಾರಣ ಬಿಟ್ಟರೆ ಸಹಕಾರಿಗಳ ಅಭ್ಯುದಯ ಸಾಧ್ಯ. ಸಹಕಾರ ಕ್ಷೇತ್ರದಲ್ಲಿ ಉತ್ತಮ ಕೆಲಸವಾಗಲು ಕೆಲವು ಅಡಚಣೆಗಳಿವೆ. ಅದರ ನಿವಾರಣೆಗೆ ಕಾಯ್ದೆಯಲ್ಲಿ ತಿದ್ದುಪಡಿ ತರ‌ಲಾಗುವುದು ಎಂದರು.

‘ಸಹಕಾರ ಪತ್ರಿಕೆ’ಯ ವಿಶೇಷ ಸಂಚಿಕೆ ಬಿಡುಗಡೆ ಮಾಡಿದ ರಾಜಣ್ಣ, ‘ಸಹಕಾರ ಸಚಿವಾಲಯದ ನೂತನ ಪ್ರಯತ್ನಗಳ ಮೂಲಕ ಸಹಕಾರ ಚಳವಳಿ ಬಲಪಡಿಸಲಾಗುತ್ತದೆ. ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಹಕಾರ ಆಂದೋಲನ ನಡೆಯಬೇಕು’ ಎಂದು ಹೇಳಿದರು.

‘ಸಹಕಾರ ಸಪ್ತಾಹದ ಮೂಲಕ ಸಹಕಾರ ತತ್ವ-ಆಚರಣೆ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದೆ. ಸಪ್ತಾಹದ ಸಂದರ್ಭದಲ್ಲಿ ಇನ್ನೂ ಹೆಚ್ಚಿನ ಜನಜಾಗೃತಿ ಕಾರ್ಯಕ್ರಮಗಳು ಇರಬೇಕು’ ಎಂದು ರಾಜ್ಯ ಸಹಕಾರ ಮಹಾಮಂಡಳ ನಿಯಮಿತದ ಅಧ್ಯಕ್ಷ ಜಿ.ಟಿ. ದೇವೇಗೌಡ ಅಭಿಪ್ರಾಯಪಟ್ಟರು.

ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಪಂಚವಾರ್ಷಿಕ ಯೋಜನೆಯಲ್ಲಿ ಸಹಕಾರ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದರು. ದೇಶದ ಆರ್ಥಿಕ ಹೆಬ್ಬಾಗಿಲು ಸಹಕಾರ ಕ್ಷೇತ್ರ ಎಂದು ನಂಬಿದ್ದರು. ಆದ್ದರಿಂದ ಅವರ ಜನ್ಮದಿನದಂದು ಸಹಕಾರ ಸಪ್ತಾಹವನ್ನು ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಸಹಕಾರ ವಸತಿ ಮಹಾಮಂಡಳದ ಅಧ್ಯಕ್ಷ ಎಸ್.ಟಿ.ಸೋಮಶೇಖರ್, ರಾಜ್ಯ, ಜಿಲ್ಲಾ ಮಟ್ಟದ ಸಹಕಾರಿ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯ ನಿವೃತ್ತ ಮುಖ್ಯಸ್ಥ ಡಾ.ಕೆ.ಪಿ.ರಮೇಶ್ ಉಪನ್ಯಾಸ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.