ADVERTISEMENT

ರಸ್ತೆ ಗುಂಡಿ: ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕೊಲೆ ಸಂಚಿನ ಪ್ರಕರಣ ದಾಖಲಿಸಿ –AAP

ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2022, 20:43 IST
Last Updated 19 ನವೆಂಬರ್ 2022, 20:43 IST
ರಸ್ತೆಗಳಲ್ಲಿ ಬಿದ್ದಿರುವ ಗುಂಡಿ ಮುಚ್ಚದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಆಗ್ರಹಿಸಿ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು
ರಸ್ತೆಗಳಲ್ಲಿ ಬಿದ್ದಿರುವ ಗುಂಡಿ ಮುಚ್ಚದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಆಗ್ರಹಿಸಿ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು   

ಬೆಂಗಳೂರು: ಕಳಪೆ ಕಾಮಗಾರಿ ನಡೆಸಿ ರಸ್ತೆ ಗುಂಡಿಗಳಿಗೆ ಕಾರಣರಾದ ಹಾಗೂ ಗುಂಡಿ ಮುಚ್ಚಲು ನಿರ್ಲಕ್ಷ್ಯ ತೋರಿದ ಗುತ್ತಿಗೆದಾರರು ಹಾಗೂ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಆಮ್‌ ಆದ್ಮಿ ಪಕ್ಷದ (ಎಎಪಿ) ಕಾರ್ಯಕರ್ತರು ಶನಿವಾರ ನಗರದಲ್ಲಿ ಪ್ರತಿಭಟಿಸಿದರು. ಅವರ ವಿರುದ್ಧ ಕೊಲೆ ಸಂಚಿನ ಪ್ರಕರಣ ದಾಖಲಿಸಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.

ರಸ್ತೆ ಗುಂಡಿಗಳಿಂದ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ₹ 25 ಲಕ್ಷ ಪರಿಹಾರ ನೀಡಬೇಕು. ಆ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಸಂಚರಿಸಿದ ಮಾರ್ಗದಲ್ಲಿ ಗುಂಡಿ ಮುಚ್ಚಲಾಗಿತ್ತು. ಅದೇ ರೀತಿ ಎಲ್ಲ ರಸ್ತೆಗಳ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪಕ್ಷದ ರಾಜ್ಯ ಅಧ್ಯಕ್ಷ ಪೃಥ್ವಿರೆಡ್ಡಿ ಮಾತನಾಡಿ, ‘ಗುಂಡಿಗಳಿಗೆ ಕಾರಣರಾದವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ 71 ದೂರು ನೀಡಿದ್ದೆವು. ಆದರೂ ಸರ್ಕಾರ ಕ್ರಮ ಕೈಗೊಂಡಿಲ್ಲ. ಬೆಂಗಳೂರಿನ ಜನರಿಗೆ ಉತ್ತಮ ಗುಣಮಟ್ಟದ ರಸ್ತೆಗಳು ಸಿಗಬೇಕೆಂದು ಎಎಪಿ ಹಲವು ಚಳವಳಿ ನಡೆಸಿದೆ’ ಎಂದರು.

ADVERTISEMENT

‘ರಸ್ತೆ ಗುಂಡಿ ಸಮಸ್ಯೆಯನ್ನು ಅತ್ಯಂತ ಗಂಭೀರವಾಗಿ ಆಮ್‌ ಆದ್ಮಿ ಪಕ್ಷ ಪರಿಗಣಿಸಿದೆ. ರಸ್ತೆ ಗುಂಡಿ ಮುಚ್ಚಲು ಸರ್ಕಾರಕ್ಕೆ ಹಣದ ಕೊರತೆ ಇಲ್ಲ. ಆದರೆ, ನಿಯತ್ತಿನ ಕೊರತೆ ಇದೆ’ ಎಂದು ಉಪಾಧ್ಯಕ್ಷ ಭಾಸ್ಕರ್‌ ರಾವ್‌ ಹೇಳಿದರು.

ನಗರ ಅಧ್ಯಕ್ಷ ಮೋಹನ್‌ ದಾಸರಿ ಮಾತನಾಡಿ, ‘ಬೆಂಗಳೂರಿನಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಶೇ 40ರಷ್ಟಿದ್ದ ಕಮಿಷನ್‌ ಈಗ ಏರಿಕೆಯಾಗುತ್ತಿದೆ. ಶಾಸಕರು ಲೂಟಿಗೆ ಇಳಿದಿದ್ದಾರೆ. ಇದರ ಪರಿಣಾಮವಾಗಿ ಕರ್ನಾಟಕದ ಇತಿಹಾಸವು ಹಿಂದೆಂದೂ ಕಾಣದಷ್ಟು ರಸ್ತೆಗುಂಡಿಗಳನ್ನು ಈಗ ಕಾಣುತ್ತಿದ್ದೇವೆ’ ಎಂದುದೂರಿದರು.

ಮುಖಂಡರಾದ ಕೆ.ಮಥಾಯಿ, ಬ್ರಿಜೇಶ್‌ ಕಾಳಪ್ಪ, ಬಿ.ಟಿ.ನಾಗಣ್ಣ, ಜಗದೀಶ್‌ ವಿ. ಸದಂ, ಕುಶಲಸ್ವಾಮಿ, ಉಷಾ ಮೋಹನ್‌, ಸಂಚಿತ್‌ ಸವ್ಹಾನಿ, ದರ್ಶನ್‌ ಜೈನ್‌, ಸುರೇಶ್‌ ರಾಥೋಡ್‌, ಜಗದೀಶ್‌ ಚಂದ್ರ, ರಾಜಶೇಖರ್‌ ದೊಡ್ಡಣ್ಣ ಮೊದಲಾದವರು ಪ್ರತಿಭಟನೆಯಲ್ಲಿ ಹಾಜರಿದ್ದರು.

*

ಬಿಬಿಎಂಪಿ ಚುನಾವಣೆ ನಡೆದರೆ ಲೂಟಿಗೆ ಅವಕಾಶ ಸಿಗುವುದಿಲ್ಲ ಎಂಬ ಕಾರಣಕ್ಕೆ ಬೆಂಗಳೂರಿನ ಶಾಸಕರು ಚುನಾವಣೆಯನ್ನೇ ನಡೆಯದಂತೆ ಮಾಡುತ್ತಿದ್ದಾರೆ.
–ಭಾಸ್ಕರ್‌ ರಾವ್‌, ಉಪಾಧ್ಯಕ್ಷ, ಎಎಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.