ADVERTISEMENT

ಪ್ರಜಾವಾಣಿ ಭೂಮಿಕಾ ಕ್ಲಬ್‌ನ 5ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಸಂಗೀತದ ಹೊನಲು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2023, 5:41 IST
Last Updated 16 ಏಪ್ರಿಲ್ 2023, 5:41 IST
ಹಿನ್ನೆಲೆ ಗಾಯಕಿ ದಿವ್ಯಾ ರಾಮಚಂದ್ರ ಅವರ ಜೊತೆಗೆ ಹೆಜ್ಜೆ ಹಾಕಿದ ಸಂಗೀತಾಸಕ್ತರು..
ಹಿನ್ನೆಲೆ ಗಾಯಕಿ ದಿವ್ಯಾ ರಾಮಚಂದ್ರ ಅವರ ಜೊತೆಗೆ ಹೆಜ್ಜೆ ಹಾಕಿದ ಸಂಗೀತಾಸಕ್ತರು..   

ಬೆಂಗಳೂರು: ಯಕ್ಷಗಾನದ ಮೋಡಿ, ಇಳಿ ಸಂಜೆಯಲ್ಲಿ ಸಂಗೀತದ ಹೊನಲು, ಆಭರಣಗಳ ವಿನ್ಯಾಸದ ಮಾಹಿತಿ, ಮಹಿಳಾ ಸಾಧಕಿಯರ ಸಾಧನೆಗಳ ಅನಾವರಣ..

– ಇದು ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ನ ಭೂಮಿಕಾ ಕ್ಲಬ್‌ ಕೋರಮಂಗಲ ಕ್ಲಬ್‌ನಲ್ಲಿ ಶನಿವಾರ ಆಯೋಜಿಸಿದ್ದ 5ನೇ ಆವೃತ್ತಿಯ ‘ಸಮರ್ಥ ಮಹಿಳೆ, ಸಶಕ್ತ ಜಗತ್ತು’ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯಾವಳಿಗಳು.

ಶನಿವಾರ ಕ್ಲಬ್‌ನ ಸಭಾಂಗಣ ಬಹುತೇಕ ಭರ್ತಿಯಾಗಿತ್ತು. ಸಂಗೀತಾಸ್ತಕರು, ಚಿನ್ನಾಭರಣ ಪ‍್ರೇಮಿಗಳು, ಸಾಧಕರ ಸಮಾಗಮವೇ ಆಗಿತ್ತು.

ADVERTISEMENT

ಬೆಂಗಳೂರು ಯಕ್ಷಗಾನ ಕಲಾಕದಂಬ ಆರ್ಟ್‌ ಕೇಂದ್ರದ ಕಲಾವಿದರು ಪ್ರಸ್ತುತಪಡಿಸಿದ ಯಕ್ಷಗಾನ ಪ್ರದರ್ಶನವು ಸಭಿಕರನ್ನು ಮೋಡಿ ಮಾಡಿತು. ಪಾಂಡವರ ರಕ್ಷಣೆಗೆ ತಾಯಿ ಅಪ್ಪಣೆ ಪಡೆದು ಅಭಿಮನ್ಯು ತೆರಳುವ ಸನ್ನಿವೇಶವನ್ನು ಕಲಾವಿದರು ಯಕ್ಷಗಾನದ ಮೂಲಕ ಕಟ್ಟಿಕೊಟ್ಟರು. ಶಾಲಾ– ಕಾಲೇಜು ವಿದ್ಯಾರ್ಥಿಗಳನ್ನು ಒಳಗೊಂಡ ತಂಡವು ಪ್ರದರ್ಶಿಸಿದ ಯಕ್ಷಗಾನವು ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು.

ನಿರ್ದೇಶಕ ಡಾ.ರಾಧಾಕೃಷ್ಣ ಮಾತನಾಡಿ, ‘ಯಕ್ಷಗಾನವನ್ನು ಗಂಡುಕಲೆ ಎಂದು ಹೇಳುತ್ತಿದ್ದೆವು. ಆದರೆ, ಎರಡು ದಶಕದಿಂದ ಈಚೆಗೆ ಹೆಣ್ಣು ಮಕ್ಕಳು ಆ ಮಾತನ್ನು ಸುಳ್ಳಾಗಿಸಿದ್ದಾರೆ. ಯಕ್ಷಗಾನದಲ್ಲಿ ಮಹಿಳೆಯರೂ ಛಾಪು ಮೂಡಿಸುತ್ತಿದ್ದಾರೆ’ ಎಂದು ಹೇಳಿದರು.

ಅಭಿಮನ್ಯು ಪಾತ್ರ ನಿರ್ವಹಿಸಿದ ಪೂಜಾ, ‘ಕೆಲಸಗಳು ಭಾರ ಎನಿಸಿದರೆ ಅದು ಮತ್ತಷ್ಟು ಹೊರೆಯಾಗಲಿವೆ. ಕಲಾ ಪ್ರದರ್ಶನ ಸೇರಿದಂತೆ ಪ್ರತಿ ಕೆಲಸವನ್ನು ಸುಲಭವಾಗಿ ಮಾಡುತ್ತೇನೆಂದು ಮುನ್ನಡೆಯಬೇಕು’ ಎಂದರು.

ಸ್ವಂತ ಉದ್ದಿಮೆಗಳನ್ನು ಸ್ಥಾಪಿಸಿದ ಮಹಿಳಾ ಸಾಧಕಿಯರ ಜತೆಗೆ ಸುಚಾರಿತ ಈಶ್ವರ್ ಅವರು ಚರ್ಚೆ ನಡೆಸಿದರು.

‘ಯುವರ್‌ ಸ್ಟೋರಿ’ ಸ್ಥಾಪಕಿ ಶ್ರದ್ಧಾ ಶರ್ಮಾ ಮಾತನಾಡಿ, ‘ನಮ್ಮ ಆರೋಗ್ಯಕ್ಕಾಗಿ ಪ್ರತಿನಿತ್ಯ ವ್ಯಾಯಾಮ ಮಾಡಬೇಕಿದೆ. ನಮಗೆ ನಾವೇ ಮೊದಲು ಸುಂದರವಾಗಿ ಕಾಣಬೇಕು. ಧ್ಯಾನ ಮಾಡದಿದ್ದರೆ ನಮ್ಮ ಮನಸ್ಸು ಹಿಡಿತದಲ್ಲಿ ಇರಿಸಲು ಸಾಧ್ಯವಿಲ್ಲ. ಎಲ್ಲರಿಗೂ ಕಷ್ಟಗಳಿರುತ್ತವೆ. ಸ್ವ-ಉದ್ಯೋಗದ ವೇಳೆ ಕಷ್ಟಗಳು ಎದುರಾಗುತ್ತವೆ. ಅವುಗಳನ್ನು ಮೀರಿ ಬೆಳೆಯಬೇಕಿದೆ. ನಾನೇ ಸಾಧಕರ ಸಾವಿರಾರು ಕಥೆಗಳನ್ನು ಹೇಳಿದ್ದೇನೆ. ಅವರೆಲ್ಲರ ಕೆಲಸಗಳೂ ಪ್ರೇರಣಾದಾಯಕ‘ ಎಂದರು.

‘ಸಮೋಸ ಪಾರ್ಟಿ’ ಸಹ ಸ್ಥಾಪಕಿ ದೀಕ್ಷಾ ಪಾಂಡೆ ಅವರು ಕೋವಿಡ್‌ ಸಂಕಷ್ಟದ ನಡುವೆ ಎದುರಿಸಿದ ಸವಾಲು, ಹೊಸ ಉದ್ದಿಮೆ ಸ್ಥಾಪನೆಗೆ ಇರುವ ಅವಕಾಶಗಳು, ಮಹಿಳಾ ಉದ್ದಿಮೆದಾರರ ಬೆಳವಣಿಗೆ ಕುರಿತು ವಿವರಿಸಿದರು.

ಹಿನ್ನೆಲೆ ಗಾಯಕಿ ದಿವ್ಯಾ ರಾಮಚಂದ್ರ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಎವಿಆರ್‌ ಸ್ವರ್ಣ ಮಹಲ್‌ ಜ್ಯೂವೆಲ್ಲರ್ಸ್‌ ಹಾಗೂ ಹಟ್ಟಿ ಕಾಫಿಯವರು ಪ್ರಾಯೋಜಕತ್ವ ವಹಿಸಿದ್ದರು.

‘ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ’

‘ಯಾವುದೇ ಕ್ಷಣದಲ್ಲೂ ಮಹಿಳೆಯರು ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ತಮ್ಮಲ್ಲಿರುವ ಶಕ್ತಿಯನ್ನು ಬಳಸಿಕೊಳ್ಳಬೇಕು. ಅಂಜಿಕೆ ದೂರ ಮಾಡಿ, ಸಾಧನೆ ಹಾದಿಯಲ್ಲಿ ಮುನ್ನಡೆಯಬೇಕು. ಎಲ್ಲರಿಗೂ ಸಮಸ್ಯೆಗಳು ಇರುತ್ತವೆ. ಅದನ್ನು ಮೀರಿ ಬೆಳೆಯುವ ಪ್ರಯತ್ನ ಮಾಡಬೇಕು’ ಎಂದು ನಟಿ ಖುಷಿ ರವಿ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ನನ್ನ ತಂದೆಯೂ ಪತ್ರಿಕಾ ವಿತರಕ ಕೆಲಸ ಮಾಡುತ್ತಿದ್ದರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.