ಬೆಂಗಳೂರು: ಬಿಎಂಟಿಸಿ ಪ್ರಯಾಣಿಕರು ತಮ್ಮ ತೊಂದರೆಗಳನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅವರಿಗೆ ಫೋನ್‌ಇನ್ ಕಾರ್ಯಕ್ರಮದಲ್ಲಿ ಮನವರಿಕೆ ಮಾಡಿಸಿದರು. ಬಿಡುವಿಲ್ಲದೆ ಬಂದ ಕರೆಗಳನ್ನು ಸ್ವೀಕರಿಸಿದ ಅನ್ಬುಕುಮಾರ್, ಪ್ರಯಾಣಿಕರ ಅಹವಾಲುಗಳಿಗೆ ಕಿವಿಯಾದರು.
| ಕಾಟನ್‌ಪೇಟೆ ಮಾರ್ಗದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ಬಿಎಂಟಿಸಿ ಬಸ್‌ಗಳೇ ಇಲ್ಲವಾಗಿದೆ. ಲಾರಿಗಳು, ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ಇರುವ ರಸ್ತೆಯಲ್ಲೇ ಸಂಚರಿಸುತ್ತಿವೆ. ಬಿಎಂಟಿಸಿ ಬಸ್‌ಗಳು ಮಾತ್ರ ಇಲ್ಲ. ದುಬಾರಿ ದರ ಭರಿಸಿ ಆಟೋರಿಕ್ಷಾದಲ್ಲಿ ಸಂಚರಿಸಬೇಕಿದೆ.
– ಪ್ರಿಯಾಂಕಾ, ಕಾಟನ್‌ಪೇಟೆ
ಉತ್ತರ: ಕಾಮಗಾರಿ ನಡೆಯುತ್ತಿರುವುದರಿಂದ ಮಿನಿ ಬಸ್‌ಗಳ ಸಂಚಾರಕ್ಕೆ ಸಾಧ್ಯವಿದೆಯೇ ಎಂದು ಪರಿಶೀಲಿಸುತ್ತೇನೆ. ಪೊಲೀಸ್ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ ಸಾಧ್ಯವಿದ್ದರೆ ದೊಡ್ಡ ಬಸ್‌ಗಳ ಸಂಚಾರವನ್ನೂ ಆರಂಭಿಸಲಾಗುವುದು.
*****
l ಮೂಡಲಪಾಳ್ಯದಿಂದ ಮೆಜೆಸ್ಟಿಕ್‌ಗೆ ಹೋಗುವ ಬಸ್‌ಗಳು ವಿಜಯನಗರ ಮಾರ್ಗದಲ್ಲಿ ಸಂಚರಿಸಿದರೆ ಅನುಕೂಲ ಆಗಲಿದೆ.
–ಸಂಪತ್, ಮೂಡಲಪಾಳ್ಯ
ಉ: ಜನರಿಗೆ ಅನುಕೂಲ ಆಗುವಂತೆಯೇ ಮಾರ್ಗ ರೂಪಿಸಲಾಗಿರುತ್ತದೆ. 2–3 ದಿನಗಳಲ್ಲಿ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲಿಸುತ್ತೇನೆ.
*****
l ಕಾಟನ್‌ಪೇಟೆ ಮಾರ್ಗದಲ್ಲಿ ಸಂಚರಿಸುತ್ತಿದ್ದ 45ಜಿ ಮತ್ತು 222 ಬಸ್‌ಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
–ಪಾಪಣ್ಣ, ಮೂಡಲಪಾಳ್ಯ
ಉ: ರಸ್ತೆ ಸರಿಯಾಗಿದ್ದರೆ 3-4 ದಿನಗಳಲ್ಲಿ ಎರಡೂ ಮಾರ್ಗಗಳ ಬಸ್ ಕಾರ್ಯಾಚರಣೆ ಆರಂಭವಾಗಲಿದೆ.
*****
l ಬೆಂಗಳೂರಿನ ಹಲವೆಡೆ ಬಿಬಿಎಂಪಿ ಕಟ್ಟಿರುವ ಶೆಲ್ಟರ್‌ಗಳ ಬಳಿ ಬಸ್‌ಗಳು ನಿಲ್ಲುವುದಿಲ್ಲ. ಶೆಲ್ಟರ್‌ನಲ್ಲಿ ನಿಂತಿರುವ ಜನ ತೊಂದರೆ ಅನುಭವಿಸಬೇಕಿದೆ.
–ಜೀವನ್, ಲಂಚಮುಕ್ತ ಕರ್ನಾಟಕ ವೇದಿಕೆ ಕಾರ್ಯದರ್ಶಿ
ಉ: ಎಲ್ಲೆಲ್ಲಿ ಈ ರೀತಿಯ ತೊಂದರೆ ಇದೆ ಎಂಬುದನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ.
*****
l ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣದಿಂದ ಮೌಂಟ್ ಕಾರ್ಮೆಲ್ ಕಾಲೇಜು ತನಕ ಫೀಡರ್ ಬಸ್ ಸೇವೆ ಅಗತ್ಯವಿದೆ. ನಗರದ ಹಲವೆಡೆ ಬಸ್ ನಿಲುಗಡೆ ಮಾರ್ಗದಲ್ಲಿ(ಬಸ್ ಬೇ) ಬೇರೆ ವಾಹನಗಳನ್ನು ನಿಲ್ಲಿಸಲಾಗುತ್ತಿದೆ.
– ರಾಜಕುಮಾರ್ ದುಗಾರ್, ಹೋರಾಟಗಾರ
ಉ: ಸ್ಮಾರ್ಟ್‌ಸಿಟಿ ಕಾಮಗಾರಿ ಮುಗಿದಿದ್ದರೆ ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣದಿಂದ ಮೌಂಟ್ ಕಾರ್ಮೆಲ್ ಕಾಲೇಜು ಮಾರ್ಗದಲ್ಲಿ ಬಸ್ ಸಂಚಾರ ಆರಂಭಿಸಲಾಗುವುದು. ಬಸ್ ನಿಲುಗಡೆ ಮಾರ್ಗದಲ್ಲಿ ಬೇರೆ ವಾಹನಗಳ ನಿಲುಗಡೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು.
*****
l ರೈಲು ನಿಲ್ದಾಣಗಳಲ್ಲಿ ಬಿಎಂಟಿಸಿ ಬಸ್‌ಗಳು ಯಾವ ಯಾವ ಮಾರ್ಗಕ್ಕೆ ಇವೆ ಎಂಬ ಮಾಹಿತಿಯೇ ಸಿಗುವುದಿಲ್ಲ. ಹೊಸದಾಗಿ ಬರುವ ಪ್ರಯಾಣಿಕರು ಪರದಾಡಬೇಕಾಗುತ್ತದೆ. ರೈಲು ನಿಲ್ದಾಣದಿಂದ ಶಾಂತಿನಗರಕ್ಕೆ ಹೋಗಲು ಆಟೋರಿಕ್ಷಾದಲ್ಲಿ ₹300 ಕೇಳುತ್ತಾರೆ. ಫಲಕ ಇದ್ದರೆ ಬಿಎಂಟಿಸಿ ಬಸ್‌ನಲ್ಲಿ ಕಡಿಮೆ ಖರ್ಚಿನಲ್ಲಿ ತಲುಪಬಹುದು.
– ಐಶ್ವರ್ಯ, ಗೋಕಾಕ
ಉ: ರೈಲು ನಿಲ್ದಾಣಗಳಲ್ಲಿ ಬಿಎಂಟಿಸಿ ಬಸ್‌ಗಳ ಫಲಕ ಬೇಕು ಎಂಬುದು ಒಳ್ಳೆಯ ಸಲಹೆ. ಫಲಕ ಅಳವಡಿಸಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು.
*****
l ಯಲಹಂಕ ಮೂಲಕ ದೇವನಹಳ್ಳಿಗೆ ಹೋಗಲು 298 ಒಂದೇ ಬಸ್ ಇದೆ. ಯಲಹಂಕದಿಂದ ಬೆಟ್ಟಹಲಸೂರಿಗೆ ಹೋಗಲು ಬಸ್‌ಗಳೇ ಇಲ್ಲ. ಗ್ರಾಮಾಂತರ ಪ್ರದೇಶ ಎಂಬ ಕಾರಣಕ್ಕೆ ಹಳೇ ಬಸ್‌ಗಳನ್ನೇ ಕಳುಹಿಸಲಾಗುತ್ತಿದೆ. ಮಳೆ ಬಂದರೆ ಸೋರುತ್ತಿವೆ.
– ವೆಂಕಟಾಚಲಪತಿ, ಮಾರುತಿನಗರ, ಯಲಹಂಕ
ಉ: ದೇವನಹಳ್ಳಿ ಮಾರ್ಗಕ್ಕೆ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗುವುದು. ಹೊಸದಾಗಿ ಬಸ್‌ಗಳನ್ನು ಖರೀದಿಸುತ್ತಿದ್ದು, 2 ತಿಂಗಳಲ್ಲಿ ಹೊಸ ಬಸ್‌ಗಳು ಯಲಹಂಕ ಮಾರ್ಗದಲ್ಲೂ ಸಂಚರಿಸಲಿವೆ.
*****
l ಕೆ.ಆರ್.ಮಾರುಕಟ್ಟೆ ಕಡೆಗೆ ಹೋಗುವ ಬಸ್‌ಗಳು ಇಲ್ಲ. ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಬೇಕು. ರಾತ್ರಿ ವೇಳೆಯಂತೂ ಬಸ್‌ಗಳೇ ಇಲ್ಲ.
–ಕದಿರಪ್ಪ, ಕೆಂಗೇರಿ ಉಪನಗರದ ಒಳಗೇರಹಳ್ಳಿ ನಿವಾಸಿಗಳ ಒಕ್ಕೂಟದ ಅಧ್ಯಕ್ಷ
ಉ: ಕೋವಿಡ್ ಬಳಿಕ ರಾತ್ರಿ ತಂಗುವ ಬಸ್‌ಗಳ ಸಂಖ್ಯೆ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿಸಲಾಗುವುದು. ಹಗಲು ವೇಳೆ ಬಸ್‌ಗಳ ಟ್ರಿಪ್ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು.
ಬಿಎಂಟಿಸಿ ವರಮಾನದ ವಿವರ(₹ಕೋಟಿಗಳಲ್ಲಿ)
ಕೋವಿಡ್ ಪೂರ್ವ; 5.16 ಕೋಟಿ
ಕೋವಿಡ್ ಮೊದಲ ಅಲೆ ಬಳಿಕ; 1.9 ಕೋಟಿ
ಕೋವಿಡ್ ಎರಡನೇ ಅಲೆ ಬಳಿಕ; 2.20 ಕೋಟಿ
ಸದ್ಯದ ವರಮಾನ; 3 ಕೋಟಿ
‘ಟಿಕೆಟ್‌ಗೆ ಎಂಜಲು ಹಚ್ಚುವ ಪದ್ಧತಿ’
ಎಲೆಕ್ಟ್ರಾನಿಕ್ ಟಿಕೆಟಿಂಗ್ ಮಷಿನ್(ಇಟಿಎಂ) ಇಲ್ಲದಿರುವುದರಿಂದ ಎಂಜಲು ಹಚ್ಚಿ ಟಿಕೆಟ್ ಕೊಡುವ ಪದ್ಧತಿ ಈಗಲೂ ಇದೆ ಎಂದು ಬಿಎಂಟಿಸಿ ಪ್ರಯಾಣಿಕ ಕೃಷ್ಣಮೂರ್ತಿ ದೂರಿದರು.
‘ಈ ಬಗ್ಗೆ ಪ್ರಶ್ನೆ ಮಾಡಿದರೆ ನಿರ್ವಾಹಕರು ಉಡಾಫೆಯಿಂದ ವರ್ತಿಸುತ್ತಾರೆ. ಸೌಜನ್ಯ ಇಲ್ಲದೆ ನಡೆದುಕೊಳ್ಳುತ್ತಾರೆ’ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅನ್ಬುಕುಮಾರ್, ‘ಇಟಿಎಂ ಯಂತ್ರಗಳನ್ನು ಒದಗಿಸಲು ಹೊಸದಾಗಿ ಟೆಂಡರ್ ಕರೆಯಲಾಗುತ್ತಿದೆ. ಮೂರು ತಿಂಗಳಲ್ಲಿ ಹೊಸ ಇಟಿಎಂ ಯಂತ್ರಗಳು ಬರಲಿದ್ದು, ಸಮಸ್ಯೆ ಪರಿಹಾರವಾಗಲಿದೆ’ ಎಂದು ಸ್ಪಷ್ಟಪಡಿಸಿದರು.
ಬಸ್ ವ್ಯವಸ್ಥೆ ಇಲ್ಲ: ಆಟೋರಿಕ್ಷಾದಲ್ಲಿ ಸುಲಿಗೆ
ನೆಲಗದರನಹಳ್ಳಿ ಮಾರ್ಗದಲ್ಲಿ ಎರಡೇ ಬಸ್‌ಗಳಿದ್ದು, ಬೇರೆ ಸಂದರ್ಭದಲ್ಲಿ ಬಸ್ ವ್ಯವಸ್ಥೆಯೇ ಇಲ್ಲ. ಇದನ್ನೆ ನೆಪ ಮಾಡಿಕೊಂಡು ಆಟೋರಿಕ್ಷಾ ಚಾಲಕರು ಪ್ರಯಾಣಿಕರಿಂದ ಸುಲಿಗೆ ಮಾಡುತ್ತಿದ್ದಾರೆ ಎಂದು ನೆಲಗದರನಹಳ್ಳಿ ಪ್ರದೀಪ್ ದೂರಿದರು.
‘2–3 ದಿನಗಳಲ್ಲಿ ಬಿಎಂಟಿಸಿ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಅಗತ್ಯ ಇದ್ದರೆ ಹೆಚ್ಚುವರಿ ಬಸ್‌ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು’ ಎಂದು ಅನ್ಬುಕುಮಾರ್ ಉತ್ತರಿಸಿದರು.
ಬಸ್ ಮಾಹಿತಿಗೆ ಮೊಬೈಲ್ ಆ್ಯಪ್
ಬಸ್‌ಗಳ ನೈಜ ಸಮಯದ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ಒದಗಿಸುವ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಫೆಬ್ರುವರಿಯಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು ವಿ.ಅನ್ಬುಕುಮಾರ್ ತಿಳಿಸಿದರು.
‘ಕೆಲವು ಸಂದರ್ಭದಲ್ಲಿ ಗಂಟೆಗಟ್ಟಲೆ ಬಸ್‌ಗಳೇ ಇರುವುದಿಲ್ಲ. ಕೆಲವು ವೇಳೆ ಒಮ್ಮೆಗೆ ಏಳೆಂಟು ಬಸ್‌ಗಳು ಬರುತ್ತವೆ’ ಎಂದು ಕೋಲಾರದ ನರೇಂದ್ರಬಾಬು ಪ್ರಶ್ನಿಸಿದರು. ‘ಒಮ್ಮೆಗೆ ಬರುವ ಬಸ್‌ಗಳೆಲ್ಲವೂ ಒಂದೇ ಮಾರ್ಗದವಲ್ಲ. ಬೇರೆ ಮಾರ್ಗಕ್ಕೆ ಹೋಗುವ ಬಸ್‌ಗಳಿರುತ್ತವೆ. ಯಾವ ಮಾರ್ಗದ ಬಸ್ ಎಲ್ಲಿದೆ, ನೀವಿರುವ ನಿಲ್ದಾಣಕ್ಕೆ ಎಷ್ಟೊತ್ತಿಗೆ ಬರಲಿದೆ ಎಂಬೆಲ್ಲಾ ಮಾಹಿತಿಯೂ ಆ್ಯಪ್‌ನಲ್ಲಿ ಮುಂದೆ ಲಭ್ಯವಾಗಲಿದೆ’ ಎಂದು ಅನ್ಬುಕುಮಾರ್ ವಿವರಿಸಿದರು.
ಶೌಚಾಲಯ ವ್ಯವಸ್ಥೆ ಹೆಚ್ಚಳಕ್ಕೆ ಕ್ರಮ
ಬಸ್ ಪ್ರಯಾಣಿಕರ ಅನುಕೂಲಕ್ಕೆ ಅಲ್ಲಲ್ಲಿ ಶೌಚಾಲಯ ನಿರ್ಮಿಸಲು ಬಿಎಂಟಿಸಿ ಬಜೆಟ್‌ನಲ್ಲಿ ₹3 ಕೋಟಿ ಕಾಯ್ದಿರಿಸಲಾಗಿದ್ದು, ಮಳೆ ಬಿಡುವು ನೀಡಿದ ಕೂಡಲೇ ಕಾಮಗಾರಿ ಆರಂಭವಾಗಲಿದೆ ಎಂದು ಅನ್ಬುಕುಮಾರ್ ತಿಳಿಸಿದರು.
ಶೌಚಾಲಯದ ಕೊರತೆ ಬಗ್ಗೆ ಕೆ.ಆರ್.ಪುರದ ಕೆ.ಪಿ. ಕೃಷ್ಣ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಮುಂದಿನ ಬಜೆಟ್‌ನಲ್ಲೂ ₹3 ಕೋಟಿ ಅನುದಾನ ಮೀಸಲಿರಿಸಿ ಶೌಚಾಲಯ ನಿರ್ಮಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.