ಬೆಂಗಳೂರು: ಕ್ರಿಕೆಟ್‌ನಲ್ಲಿ ಕೊನೇ ಬಾಲ್‌ಗೆ ಸಿಕ್ಸ್ ಹೊಡೆದು ಪಂದ್ಯ ಗೆಲ್ಲಿಸಿದಂತೆ ಕೊನೇ ಪ್ರಶ್ನೆಗೆ ‘ಸ್ಟೆಪ್ ಅಪ್’ ತೆಗೆದುಕೊಂಡು ಉತ್ತರಿಸಿ, 15 ಅಂಕ ಬಾಚುವ ಮೂಲಕ ರಾಜರಾಜೇಶ್ವರಿ ನಗರದ ಜ್ಞಾನಾಕ್ಷಿ ವಿದ್ಯಾನಿಕೇತನ ಪ್ರೌಢಶಾಲೆಯ ಆರ್ಯನ್ ಸುಬ್ರಹ್ಮಣ್ಯ ಹಾಗೂ ಅಕ್ಷಯ್ ರಾವ್ ತಂಡವು ‘ಪ್ರಜಾವಾಣಿ’ ರಸಪ್ರಶ್ನೆಯಲ್ಲಿ ಬೆಂಗಳೂರು ವಲಯ ಮಟ್ಟದ ಚಾಂಪಿಯನ್ ಆಗಿ ಹೊರ ಹೊಮ್ಮಿತು.
ಪರಿಶ್ರಮ ಪಿಯು ಕಾಲೇಜು ಮತ್ತು ಭೀಮಾ ಗೋಲ್ಡ್ ಸಹಯೋಗದಲ್ಲಿ ಶನಿವಾರ ಜಯನಗರದ ವಿವೇಕ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಸಪ್ರಶ್ನೆ ಈ ರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು.
ಬೆಂಗಳೂರು ಸಿಟಿ ಕೊ–ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಡ್ಯುಕ್ಸ್ ವೆಫಿ, ಎಂಎಸ್‌ಐಎಲ್ ವಿದ್ಯಾ ಆ್ಯಂಡ್ ಲೇಖಕ್ ಸಹಕಾರ ನೀಡಿದರು. ಟಿವಿ ಸಹಯೋಗವನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಜ್ಞಾನ ಸಹಯೋಗವನ್ನು ಕ್ಯೂರಿಯೊಸಿಟಿ ಸೊಲ್ಯುಷನ್ಸ್ ಸಂಸ್ಥೆಗಳು ನೀಡಿದವು.
ವಲಯಮಟ್ಟದ ಅಂತಿಮ ಸುತ್ತಿನ ಕೊನೆಯ ಪ್ರಶ್ನೆಗಿಂತ ಮೊದಲು ಆರ್ಯನ್– ಅಕ್ಷಯ್ ತಂಡವು 30 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿತ್ತು. ಜ್ಞಾನಾಕ್ಷಿ ವಿದ್ಯಾನಿಕೇತನ ಪ್ರೌಢಶಾಲೆಯವರೇ ಆಗಿರುವ 8ನೇ ತರಗತಿಯ ಖುಷಿ– ಸಂಹಿತ್ ರಾಘವನ್ ತಂಡವು 43 ಅಂಕಗಳೊಂದಿಗೆ ಭಾರಿ ಮುನ್ನಡೆಯಲ್ಲಿದ್ದು, ಬಹುತೇಕ ಇದೇ ತಂಡ ಪ್ರಥಮ ಸ್ಥಾನಗಳಿಸಲಿದೆ ಎಂದು ಭಾವಿಸಲಾಗಿತ್ತು.
ಈ ಸುತ್ತಿನಲ್ಲಿ ‘ಡಿಫಾಲ್ಟ್’ ಆರಿಸಿಕೊಂಡು ಸರಿ ಉತ್ತರ ನೀಡಿದರೆ 10 ಅಂಕ, ತಪ್ಪು ಉತ್ತರ ನೀಡಿದರೆ, 5 ಅಂಕ ಕಡಿತ ಇತ್ತು. ‘ಸ್ಟೆಪ್ ಅಪ್’ ತೆಗೆದುಕೊಂಡು ಸರಿ ಉತ್ತರ ನೀಡಿದರೆ 15 ಅಂಕ, ತಪ್ಪು ಉತ್ತರ ನೀಡಿದರೆ 7 ಅಂಕ ಕಡಿತ ಇತ್ತು. ಈ ಸಂದರ್ಭದಲ್ಲಿ ಆರ್ಯನ್– ಅಕ್ಷಯ್ ‘ಸ್ಟೆಪ್ ಅಪ್’ ತೆಗೆದುಕೊಂಡು ಒಮ್ಮೆಲೇ 15 ಅಂಕ ಪಡೆಯುವ ಮೂಲಕ ರೋಚಕ 2 ಅಂಕಗಳ ಅಂತರದಿಂದ ಜಯಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದರು.
ರಾಜ್ಯಮಟ್ಟಕ್ಕೆ ಆಯ್ಕೆಯಾಗದ ನೋವಿದ್ದರೂ ತಮ್ಮದೇ ವಿದ್ಯಾಸಂಸ್ಥೆಯ 9ನೇ ತರಗತಿಯ ಗೆಳೆಯರು ಗೆದ್ದಿರುವುದನ್ನು ಕಂಡು ಸೋಲಿನಲ್ಲೂ ಸಂತೃಪ್ತಿಯೊಂದಿಗೆ ಖುಷಿ– ಸಂಹಿತ್ ದ್ವಿತೀಯ ಸ್ಥಾನದ ಪ್ರಶಸ್ತಿ ಸ್ವೀಕರಿಸಿ ತೆರಳಿದರು.
ಶ್ರೀಅಯ್ಯಪ್ಪ ಎಜುಕೇಷನ್ ಟ್ರಸ್ಟ್‌ನ ಅನುಷಾ–ಹರ್ಷಾ ತಂಡವು 30 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದರು. ಎಸ್‌ಜೆಆರ್ ಕೆಂಗೇರಿ ಪಬ್ಲಿಕ್ ಸ್ಕೂಲ್‌ನ ಸಮೀರ್– ವರುಣ್ ತಂಡ ನಾಲ್ಕನೇ ಸ್ಥಾನ, ಶ್ರೀಅಯ್ಯಪ್ಪ ಎಜುಕೇಷನ್ ಟ್ರಸ್ಟ್‌ನ ವಿದ್ಯಾಸಂಸ್ಥೆಯ ಪ್ರವೀಣ್–ಮನೋಜ್ ತಂಡ ಐದನೇ, ನ್ಯೂ ಕೇಂಬ್ರಿಜ್ ಹೈಸ್ಕೂಲ್‌ನ ಮಧುಮಿತ– ಪ್ರಾಪ್ತಿ ಆರನೇ ಸ್ಥಾನ ಗಳಿಸಿದರು.
ಪ್ರಾಥಮಿಕ ಆಯ್ಕೆ: ಬೆಂಗಳೂರು ನಗರ ಮತ್ತು ಸುತ್ತಮುತ್ತಲ ಜಿಲ್ಲೆಗಳ ಹಲವು ತಂಡಗಳು ಭಾಗವಹಿಸಿದ್ದವು. ಅದರಲ್ಲಿ ಆರು ತಂಡಗಳನ್ನು ಆಯ್ಕೆ ಮಾಡಲು ಪ್ರಾಥಮಿಕ ಹಂತದ ರಸಪ್ರಶ್ನೆ ನಡೆಸಲಾಯಿತು.
ಪ್ರಾಥಮಿಕ ಹಂತದಲ್ಲಿ ಇಪ್ಪತ್ತು ಪ್ರಶ್ನೆಗಳಿಗೆ ಸ್ಪರ್ಧಿಗಳು ಉತ್ತರ ಬರೆಯಬೇಕಿತ್ತು. ಅದರಲ್ಲಿ 19 ಪ್ರಶ್ನೆಗಳಿಗೆ ತಲಾ ಒಂದು ಅಂಕ ಹಾಗೂ ಒಂದು ಪ್ರಶ್ನೆಗೆ 2 ಅಂಕ ನೀಡಲಾಗಿತ್ತು. ಹೆಚ್ಚು ಅಂಕ ಗಳಿಸಿದ ಆರು ತಂಡಗಳನ್ನು ಆಯ್ಕೆ ಮಾಡಲಾಯಿತು.
ಐದು ಸುತ್ತಿನ ಸ್ಪರ್ಧೆ: ‘ವಸುಧೈವ ಕುಟುಂಬಕಂ’ ಮೊದಲ ಸುತ್ತು ಆಗಿದ್ದು, ಭಾರತದ ಕುರಿತಾದ ಪ್ರಶ್ನೆಗಳಿರುವ ಸುತ್ತು ಆಗಿತ್ತು. ನೇರ ಉತ್ತರಕ್ಕೆ 10 ಅಂಕ, ಪಾಸ್ ಆದ ಉತ್ತರಕ್ಕೆ 5 ಅಂಕ, ಯಾವುದೇ ಮೈನಸ್ ಅಂಕ ಇರಲಿಲ್ಲ.
‘ದೃಶ್ಯ’ ಎರಡನೇ ಸುತ್ತು ಆಗಿತ್ತು. ಚಿತ್ರ ನೋಡಿ ಪ್ರಶ್ನೆಗೆ ಉತ್ತರಿಸಬೇಕಿತ್ತು. ಒಂದನೇ ಸುತ್ತಿನ ನಿಯಮವೇ ಇದಕ್ಕೂ ಅನ್ವಯವಾಗಿತ್ತು. ‘ಮಿಕ್ಸ್ ಬ್ಯಾಗ್’ ಮೂರನೇ ಸುತ್ತು ಆಗಿದ್ದು, ಯಾವುದೇ ಪ್ರಶ್ನೆಗೆ ಬಜರ್ ಒತ್ತಿ ಉತ್ತರಿಸಬೇಕಿತ್ತು. ಮೊದಲು ಬಜರ್ ಒತ್ತಿದವರ ಉತ್ತರ ಸರಿ ಇಲ್ಲದೇ ಇದ್ದರೆ, ಎರಡನೇಯವರಿಗೆ ಅವಕಾಶ ಇತ್ತು. ಅದೂ ತಪ್ಪಾದರೆ ಪ್ರೇಕ್ಷಕರಿಗೆ ಅವಕಾಶ ನೀಡಲಾಗಿತ್ತು.
‘ನಿಮ್ಮ ಆಯ್ಕೆ– ನಮ್ಮ ಪ್ರಶ್ನೆ’ ನಾಲ್ಕನೇ ಸುತ್ತಿನಲ್ಲಿ ವಿಷಯಗಳನ್ನು ಆಯ್ಕೆ ಮಾಡಲು ಸ್ಪರ್ಧಿಗಳಿಗೆ ಅವಕಾಶ ನೀಡಲಾಗಿತ್ತು. ಆಯ್ಕೆ ಮಾಡಿದ ವಿಷಯದ ಮೇಲೆ ಪ್ರಶ್ನೆಗಳಿದ್ದವು. ‘ರ‍್ಯಾಪಿಡ್ ಫೈರ್’ ಐದನೇ ಸುತ್ತು ಫಲಿತಾಂಶವನ್ನೇ ಮೇಲೆ ಕೆಳಗೆ ಮಾಡುವಂತದ್ದಾಗಿತ್ತು. ‘ಡಿಫಾಲ್ಟ್’ ಸರಿ ಉತ್ತರಕ್ಕೆ 10 ಅಂಕ, ತಪ್ಪು ಉತ್ತರಕ್ಕೆ ಮೈನಸ್ 5, ‘ಸ್ಟೆಪ್ ಅಪ್’ ತೆಗೆದುಕೊಂಡರೆ ಸರಿ ಉತ್ತರಕ್ಕೆ 15 ಅಂಕ, ತಪ್ಪು ಉತ್ತರಕ್ಕೆ ಮೈನಸ್ 7 ಅಂಕಗಳಿದ್ದವು.
ಸ್ಪರ್ಧಿಗಳು ಉತ್ತರಿಸಲಾಗದೇ ಪ್ರೇಕ್ಷಕರ ಕಡೆಗೆ ಬಂದ ಪ್ರಶ್ನೆಗಳಿಗೆ ಮತ್ತು ಪ್ರೇಕ್ಷಕರಿಗಾಗಿಯೇ ಸೀಮಿತವಾದ ಪ್ರಶ್ನೆಗಳಿಗೆ ಉತ್ತರಿಸಿ ಹಲವರು ಸ್ಥಳದಲ್ಲೇ ಬಹುಮಾನ ಪಡೆದು. ‘ಕ್ಯೂರಿಯೊಸಿಟಿ ಸೊಲ್ಯುಷನ್ಸ್’ ಸಂಸ್ಥೆಯ ಕ್ವಿಜ್ ಮಾಸ್ಟರ್ ಮೇಘವಿ ಮಂಜುನಾಥ್ ಆಕರ್ಷಕವಾಗಿ ಕ್ವಿಜ್ ನಡೆಸಿಕೊಟ್ಟರು.
‘ಆ ಕ್ಷಣದ ಅನಿವಾರ್ಯ ನಿರ್ಧಾರ’
ನಾವು ಕೊನೇ ಪ್ರಶ್ನೆಗೆ ಉತ್ತರಿಸಿದರೆ ಸಾಕಾಗುತ್ತಿರಲಿಲ್ಲ. ‘ಸ್ಟೆಪ್ ಅಪ್’ ತೆಗೆದುಕೊಂಡು ಸರಿ ಉತ್ತರ ನೀಡಿದರಷ್ಟೇ ರಾಜ್ಯಮಟ್ಟಕ್ಕೆ ಆಯ್ಕೆಯಾಗಬಹುದಾಗಿತ್ತು. ತಪ್ಪು ಉತ್ತರ ನೀಡಿದ್ದರೆ ನಾವು ಮೂರನೇ ಸ್ಥಾನಕ್ಕೆ ಹೋಗುತ್ತಿದ್ದೆವು. ಆಗ ಸ್ಟೆಪ್ ಅಪ್ ತೆಗೆದುಕೊಳ್ಳುವುದು ಅನಿವಾರ್ಯವಿತ್ತು. ನಾವು ನೀಡಿದ ಉತ್ತರ ಸರಿಯಾಗಿತ್ತು. ನಾವು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದೇವೆ ಎಂದು ತಿಳಿದಾಗ ಏನು ಹೇಳಬೇಕು ಎಂಬುದೇ ಗೊತ್ತಾಗದಷ್ಟು ಆನಂದವಾಯಿತು. ಆರ್ಯನ್ ಸುಬ್ರಹ್ಮಣ್ಯ– ಅಕ್ಷಯ್ ರಾವ್ ರಾಜರಾಜೇಶ್ವರಿ ನಗರದ ಜ್ಞಾನಾಕ್ಷಿ ವಿದ್ಯಾನಿಕೇತನ ಪ್ರೌಢಶಾಲೆ ವಿದ್ಯಾರ್ಥಿಗಳು
‘ಗೆಲ್ಲಲೇಬೇಕು ಎಂದು ಪ್ರಯತ್ನಿಸಬೇಕು. ಆದರೆ ಗೆಲ್ಲುವುದು ಒಂದೇ ತಂಡ. ಹಾಗಾಗಿ ಸೋಲಿಗೆ ತಯಾರಾಗಿರಬೇಕು. ಸೋತಾಗ ಕುಗ್ಗದೇ ಅದನ್ನು ಸವಾಲಾಗಿ ತೆಗೆದುಕೊಂಡು ಮತ್ತೆ ಗೆಲುವಿಗೆ ಪ್ರಯತ್ನಿಸಬೇಕು’ ಎಂದು ಪರಿಶ್ರಮ ಪಿಯು ಕಾಲೇಜು ಸಂಸ್ಥಾಪಕ ಶಾಸಕ ಪ್ರದೀಪ್ ಈಶ್ವರ್ ಸಲಹೆ ನೀಡಿದರು.
ವಲಯ ಮಟ್ಟದ ಕ್ವಿಜ್‌ಗೆ ಚಾಲನೆ ನೀಡಿ ಮಾತನಾಡಿದ ಅವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ‘ಪ್ರಜಾವಾಣಿ’ ಬಹಳದ ದೊಡ್ಡ ಪಾತ್ರವನ್ನು ವಹಿಸಿಕೊಂಡು ಬಂದಿದೆ. ‘ಪ್ರಜಾವಾಣಿ’ಯ ಸಂಪಾದಕೀಯ ಪುಟವನ್ನು ಓದದೇ ಸ್ಪರ್ಧಿಗಳು ಮುಂದಕ್ಕೆ ಹೋಗಲು ಸಾಧ್ಯವೇ ಇಲ್ಲ. ಜ್ಞಾನ ಪಡೆಯಲು ‘ಪ್ರಜಾವಾಣಿ’ಯನ್ನು ಓದಬೇಕು ಎಂದು ಶ್ಲಾಘಿಸಿದರು.
ತಂದೆ– ತಾಯಿಯನ್ನು ಪ್ರೀತಿಸಿ. ಅವರು ಬೈದರೆ ಕೆಟ್ಟ ನಿರ್ಧಾರ ಮಾಡಬೇಡಿ. ನಿಮ್ಮಲ್ಲಿ ಪ್ರತಿಭೆ ಪರಿಶ್ರಮ ಮತ್ತು ಆತ್ಮಸ್ಥೈರ್ಯ ಇದ್ದರೆ ಸಾಧನೆ ಮಾಡಬಹುದು. ಕಷ್ಟಪಟ್ಟು ಓದಿ ಇಷ್ಟಪಟ್ಟು ಓದಿ ಹೆತ್ತವರಿಗಾಗಿ ಓದಿ. ನಿಮ್ಮ ಸಾಧನೆ ಹೇಗಿರಬೇಕು ಎಂದರೆ ಪರೀಕ್ಷೆ ಮುಗಿದ ಮೇಲೆ ಫಲಿತಾಂಶ ಬಂದಾಗ ನಿಮ್ಮ ಬಗ್ಗೆ ಜನರು ಪತ್ರಿಕೆಯಲ್ಲಿ ಓದುವಂತಿರಬೇಕು ಎಂದು ಸ್ಪೂರ್ತಿ ತುಂಬಿದರು.
ದೇವರ ಕೋಣೆಯಲ್ಲಿರುವ ದೇವರು ಒಳ್ಳೆಯದನ್ನು ಮಾಡುತ್ತಾನೋ ಇಲ್ವೊ ಗೊತ್ತಿಲ್ಲ. ಆದರೆ ನಿಮ್ಮ ಕೈಯಲ್ಲಿ ಇರುವ ಪುಸ್ತಕ ಒಳ್ಳೆಯದನ್ನು ಮಾಡಲಿದೆ ಎಂದು ತಿಳಿಸಿದರು. ಟಿಪಿಎಂಎಲ್ ನ್ಯಾಷನಲ್ ಸೇಲ್ಸ್ ಹೆಡ್ ಆನಂದ್ ಬಿಲ್ಡಿಕರ್ ಭಾಗವಹಿಸಿದ್ದರು.
ಬಹುಮಾನ ವಿತರಣೆ: ವಲಯ ಮಟ್ಟದ ವಿಜೇತರಿಗೆ ‘ಪ್ರಜಾವಾಣಿ’ ಸುದ್ದಿ ಸಂಪಾದಕ ನಾಗೇಶ್ ಶೆಣೈ ಬ್ರ್ಯಾಂಡ್ ಮತ್ತು ಆ್ಯಕ್ಟಿವೇಷನ್ಸ್ ಹೆಡ್ ಪಾರ್ಥ ಜೋಷಿ ಮತ್ತು ಇವೆಂಟ್ಸ್ ಸೇಲ್ಸ್ ನ್ಯಾಷನಲ್ ಹೆಡ್ ಮತ್ತು ಬೆಂಗಳೂರು ರೀಜನಲ್ ಸೇಲ್ಸ್ ಹೆಡ್ ಮಂಜುಳಾ ಮೆನನ್ ಬಹುಮಾನ ವಿತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.