ADVERTISEMENT

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಣ್ಣ ಗೋಪಾಲ ಜೋಶಿ ನಾಪತ್ತೆ

ಬಿಜೆಪಿ ಟಿಕೆಟ್‌ ಕೊಡಿಸುವ ಆಮಿಷ, ₹2 ಕೋಟಿ ಸುಲಿಗೆ, ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 15:46 IST
Last Updated 18 ಅಕ್ಟೋಬರ್ 2024, 15:46 IST
ಗೋಪಾಲ ಜೋಶಿ 
ಗೋಪಾಲ ಜೋಶಿ    

ಬೆಂಗಳೂರು: ಲೋಕಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಕೊಡಿಸುವ ಆಮಿಷವೊಡ್ಡಿ ವಿಜಯಪುರ ಜಿಲ್ಲೆಯ ನಾಗಠಾಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದೇವಾನಂದ್‌ ಫೂಲ್‌ ಸಿಂಗ್‌ ಚವ್ಹಾಣ್ ಅವರಿಂದ ₹2 ಕೋಟಿ ಸುಲಿಗೆ ನಡೆಸಿದ್ದ ಆರೋಪದ ಅಡಿ ದಾಖಲಾಗಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಸವೇಶ್ವರನಗರ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಅಥಣಿಯ ಎಂಜಿನಿಯರ್‌ ಸೋಮಶೇಖರ್‌ ನಾಯಕ್‌ ಹಾಗೂ ಬಸವೇಶ್ವರನಗರದ ನಿವಾಸಿ ವಿಜಯಕುಮಾರಿ ಬಂಧಿತರು.

‘ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಅವರ ಅಣ್ಣ ಗೋಪಾಲ ಜೋಶಿ ಹಾಗೂ ಮತ್ತೊಬ್ಬ ಆರೋಪಿ ಅಜಯ್‌ ಜೋಶಿ ತಲೆಮರೆಸಿಕೊಂಡಿದ್ದು, ಶೋಧ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

‘ಗೋಪಾಲ ಜೋಶಿ ಅವರ ಕುಟುಂಬದ ಸ್ನೇಹಿತೆ ವಿಜಯಕುಮಾರಿ ಅವರ ಮನೆಯಲ್ಲಿ ಶೋಧ ನಡೆಸಲಾಗಿದ್ದು, ಕೆಲವು ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಗೋಪಾಲ ಜೋಶಿ ಅವರಿಗೆ ಸೇರಿದ ಕೆಲವು ಸ್ಥಳಗಳಲ್ಲೂ ಪರಿಶೀಲನೆ ನಡೆಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ದೇವಾನಂದ್‌ ಚವ್ಹಾಣ್‌ ಅವರು ಗೋಪಾಲ ಜೋಶಿ ಅವರನ್ನು ಹುಬ್ಬಳ್ಳಿಯ ನಿವಾಸದಲ್ಲಿ ಭೇಟಿ ಮಾಡಿದ್ದರು. ಸೋಮಶೇಖರ್ ನಾಯಕ್ ಭೇಟಿ ಮಾಡಿಸಿದ್ದರು. ಕೇಂದ್ರದಲ್ಲಿ ನನ್ನ ಸಹೋದರ ಪ್ರಲ್ಹಾದ ಜೋಶಿ ಅವರ ವರ್ಚಸ್ಸು ಚೆನ್ನಾಗಿದ್ದು, ವಿಜಯಪುರ ಕ್ಷೇತ್ರದಿಂದ ಬಿಜೆಪಿ ಟೆಕೆಟ್‌ ಕೊಡಿಸುವುದಾಗಿ ಗೋಪಾಲ ಜೋಶಿ ಆಮಿಷವೊಡ್ಡಿದ್ದರು. ಇದಕ್ಕಾಗಿ ₹5 ಕೋಟಿ ಸಿದ್ಧತೆ ಮಾಡಿಕೊಳ್ಳುವಂತೆಯೂ ಸೂಚಿಸಿದ್ದರು. ಅಷ್ಟು ಹಣವಿಲ್ಲ ಎಂದಾಗ ಸದ್ಯಕ್ಕೆ ₹25 ಲಕ್ಷ ಕೊಡುವಂತೆ ತಿಳಿಸಿದ್ದರು. ಆ ಹಣವನ್ನು ಗೋಪಾಲ ಜೋಶಿ ಅವರು ಸೂಚಿಸಿದ ವಿಜಯಕುಮಾರಿ ಅವರ ಮನೆಗೆ ತಲುಪಿಸಲಾಗಿತ್ತು. ಅಲ್ಲದೇ ₹5 ಕೋಟಿ ಮೌಲ್ಯ ನಮೂದಿಸಿದ್ದ ಚೆಕ್‌ ಸಹ ಪಡೆದುಕೊಂಡಿದ್ದರು’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

‘ಟಿಕೆಟ್‌ ಸಂಬಂಧ ಅಮಿತ್‌ ಶಾ ಅವರ ಆಪ್ತ ಸಹಾಯಕರ ಜತೆಗೆ ಮಾತನಾಡಿರುವುದಾಗಿ ಗೋಪಾಲ ಜೋಶಿ ಹೇಳಿದ್ದರು. ಆದರೆ, ಟಿಕೆಟ್‌ ಕೊಡಿಸದೇ ವಂಚಿಸಿದ್ದಾರೆ. ಅದಾದ ಮೇಲೆ ಬಸವೇಶ್ವರನಗರದ ವಿಜಯಕುಮಾರಿ ಅವರ ಮನೆಗೆ ಕರೆಸಿಕೊಂಡು ಚೆಕ್‌ ವಾಪಸ್ ನೀಡಿದ್ದರು. ₹25 ಲಕ್ಷವನ್ನೂ ವಾಪಸ್ ನೀಡುವಂತೆ ಕೇಳಿದಾಗ, ₹200 ಕೋಟಿ ಮೊತ್ತದ ಯೋಜನೆಗಳ ಬಿಲ್‌ ತೋರಿಸಿ ₹1.75 ಕೋಟಿ ನೀಡಿದರೆ 20 ದಿನಗಳಲ್ಲಿ ಎಲ್ಲ ಹಣವನ್ನೂ ವಾಪಸ್ ನೀಡುವುದಾಗಿ ಹೇಳಿದ್ದರು. ಅವರ ಮಾತು ನಂಬಿ ಹಂತ ಹಂತವಾಗಿ ₹1.75 ಕೋಟಿ ನೀಡಿದ್ದೆ’ ಎಂದು ದೇವಾನಂದ್‌ ಚವ್ಹಾಣ್ ಅವರ ಪತ್ನಿ ಸುನಿತಾ ಚವ್ಹಾಣ್‌ ನೀಡಿರುವ ದೂರು ಆಧರಿಸಿ ಎಫ್‌ಐಆರ್‌ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.

- ₹2 ಕೋಟಿ ಸುಲಿಗೆ ಜಾತಿ ನಿಂದನೆ ಹಲ್ಲೆ ನಡೆಸಿದ್ದ ಆರೋಪದಡಿ ಎಫ್‌ಐಆರ್‌ ದಾಖಲಾಗಿದೆ. ಪ್ರಕರಣದ ತನಿಖೆ ನಡೆಸಲಾಗುತ್ತಿದೆ
– ಬಿ.ದಯಾನಂದ ನಗರ ಪೊಲೀಸ್ ಕಮಿಷನರ್‌

ತನಿಖೆ ಬಳಿಕ ಮಾಹಿತಿ: ಜಿ.ಪರಮೇಶ್ವರ

‘ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಪ್ರಕರಣದಲ್ಲಿ ಪ್ರಲ್ಹಾದ ಜೋಶಿ ಅವರ ಪಾತ್ರ ಇರುವುದು ನನಗೆ ತಿಳಿದಿಲ್ಲ. ಬಂಧಿತರ ವಿಚಾರಣೆ ನಡೆಸಿ ಹೇಳಿಕೆ ಪಡೆದಾಗಲೇ ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗಲಿದೆ. ತನಿಖೆಗೆ ಮೊದಲು ಹೇಳುವುದು ಸರಿಯಲ್ಲ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಪ್ರತಿಕ್ರಿಯಿಸಿದರು.

ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ; ಜೋಶಿ ಸ್ಪಷ್ಟನೆ 

‘ಗೋಪಾಲ್ ಜೋಶಿ ಅವರೊಂದಿಗೆ ಕಳೆದ 32 ವರ್ಷಗಳಿಂದ ಯಾವುದೇ ಸಂಪರ್ಕ ಹಾಗೂ ಸಂಬಂಧ ಇಲ್ಲ. ಯಾರೊಂದಿಗೂ ನನ್ನ ಹೆಸರು ಉಲ್ಲೇಖಿಸದಂತೆ 2013ರಲ್ಲೇ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ ತಡೆಯಾಜ್ಞೆ ನೀಡಿದೆ. ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಅದರ ವಿವರವಿದೆ’ ಎಂದು ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿದರು.  ‘ಎಫ್‌ಐಆರ್‌ನಲ್ಲಿ ವಿಜಯಲಕ್ಷ್ಮಿ ಎಂಬುವರನ್ನು ನನ್ನ ಸಹೋದರಿ ಎಂದು ಉಲ್ಲೇಖಿಸಿದ್ದಾರೆ. ವಾಸ್ತವವಾಗಿ ನನಗೆ ಸಹೋದರಿಯೇ ಇಲ್ಲ. ಇದನ್ನೆಲ್ಲ ನೋಡಿದರೆ ಪ್ರಕರಣವೇ ಬೋಗಸ್ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದು ಹೇಳಿದರು. ‘ಪ್ರಕರಣದ ಸಮಗ್ರ ತನಿಖೆ ನಡೆಸಿ ಗೋಪಾಲ್ ಜೋಶಿ ತಪ್ಪೆಸಗಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ’ ಎಂದರು.  ಈ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷ ಅತ್ಯಂತ ಬೌದ್ಧಿಕ ದಿವಾಳಿತನ ಪ್ರದರ್ಶನ ಮಾಡುತ್ತಿದೆ. ನನ್ನನ್ನು ಬಂಧಿಸಬೇಕೆನ್ನುವ ಮೂಲಕ ಕಾಂಗ್ರೆಸ್ ಮುಠ್ಠಾಳತನ ತೋರುತ್ತಿದೆ. ಸತ್ಯಾಸತ್ಯತೆ ವಿಮರ್ಶೆ ಮಾಡದೆ ಹುಂಬತನ ಪ್ರದರ್ಶಿಸುತ್ತಿದೆ ಎಂದು ಲೇವಡಿ ಮಾಡಿದರು. ‘ಕಳೆದ 25 ವರ್ಷಗಳಿಂದ ರಾಜಕೀಯ ಜೀವನದಲ್ಲಿ ಇದ್ದೇನೆ. ಕಲ್ಲಿದ್ದಲು ಖಾತೆ ನಿರ್ವಹಿಸಿಯೂ ಕೈ ಮಸಿ ಮಾಡಿಕೊಂಡಿಲ್ಲ. ಇಂದಿಗೂ ಶುದ್ಧ ಹಸ್ತನಾಗಿದ್ದೇನೆ’ ಎಂದರು. 

ಜೋಶಿ ರಾಜೀನಾಮೆಗೆ ಆಗ್ರಹ 

ಲೋಕಸಭಾ ಚುನಾವಣೆಗೆ ಟಿಕೆಟ್‌ ಕೊಡಿಸಲು ಹಣ ಪಡೆದ ಆರೋಪದ ಮೇಲೆ ಗೋಪಾಲ್‌ ಜೋಶಿ ವಿರುದ್ಧ ಪ್ರಕರಣ ದಾಖಲಾಗಿದ್ದು ಅವರ ಸೋದರ ಕೇಂದ್ರ ಸಚಿವ ಸ್ಥಾನಕ್ಕೆ ಪ್ರಲ್ಹಾದ ಜೋಶಿ ರಾಜೀನಾಮೆ ನೀಡಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಗ್ರಹಿಸಿದರು. ‘ತಮ್ಮ ಸಹೋದರ ₹2 ಕೋಟಿ ಹಣ ಪಡೆದಿದ್ದಾರೆ ಎನ್ನುವ ಪ್ರಕರಣಕ್ಕೂ ತಮಗೂ ಯಾವ ಸಂಬಂಧವೂ ಇಲ್ಲ ಎಂದು ಪ್ರಲ್ಹಾದ ಜೋಶಿ ಹೇಳಿಕೆ ನೀಡಿದ್ದು ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಗೋಪಾಲ್‌ ಜೋಶಿ ಪ್ರಲ್ಹಾದ ಜೋಶಿಯವರ ಜತೆಗೆ ಇದ್ದಾರೆ ಎಂಬುದು ಹುಬ್ಬಳ್ಳಿ ಭಾಗದ ಜನರಿಗೆ ಗೊತ್ತಿರುವ ಸಂಗತಿ. ಸಹೋದರ ಗೋಪಾಲ್ ಜೋಶಿಯವರ ಮೇಲೆ ಬಂದಿರುವ ಆರೋಪದ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು. ಇ.ಡಿ ಐ.ಟಿ ಛೂ ಬಿಟ್ಟು ಹೆದರಿಸಿ ದೇವಾನಂದ ಅವರನ್ನ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡಿದ್ದರು. ಗೋಪಾಲ್‌ ಜೋಶಿ ಆರ್‌ಎಸ್‌ಎಸ್‌ನಲ್ಲಿ ಸಕ್ರಿಯರಾಗಿದ್ದಾರೆ. ಆರ್‌ಎಸ್‌ಎಸ್‌ನ ಕೆಲ ನಾಯಕರು ಈ ರೀತಿಯ ಟಿಕೆಟ್ ದಂಧೆಯಲ್ಲಿ ತೊಡಗಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಆರೋಪಿಸಿದರು. ‘ಜೋಶಿ ಅವರು ಬಾಯಿ ಬಿಟ್ಟರೆ ನೈತಿಕತೆ ಪಾಠ ಹೇಳುವವರು. ಆರೋಪ ಕೇಳಿ ಬಂದ ಕೂಡಲೇ ಮನೆಯವರನ್ನು ದೂರ ಮಾಡುವ ಮಹಾನ್‌ ವ್ಯಕ್ತಿ. ಎಫ್‌ಐಆರ್‌ನಲ್ಲಿ ಜೋಶಿ ಸಹೋದರನ ಹೆಸರಿದೆ. ಜತೆಗೆ ಅಮಿತ್‌ ಶಾ ಹೆಸರು ದುರುಪಯೋಗ ಮಾಡಿಕೊಂಡಿದ್ದಾರೆ ಎಂದೂ ಉಲ್ಲೇಖಿಸಲಾಗಿದೆ. ಆದರೆ ಜೋಶಿ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದು ನಾಚಿಕೆಗೇಡು’ ಎಂದು  ರಾಷ್ಟ್ರೀಯ ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ ಕಿಡಿಕಾರಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.