ಬೆಂಗಳೂರು: ಅಕ್ಕಿ ಸ್ವಚ್ಛತಾ ಯಂತ್ರಕ್ಕೆ ಸಿಲುಕಿದ್ದರಿಂದ ಒಂದು ಕೈ ಕಳೆದುಕೊಂಡು ಕಷ್ಟದಲ್ಲಿ ಬೆಳೆದು ಉತ್ತರ ಪ್ರದೇಶದಿಂದ ಬಂದ ಯುವಕನೊಬ್ಬ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಕುಟುಂಬವನ್ನು ಪೊರೆಯುತ್ತಿದ್ದಾರೆ.
ಉತ್ತರ ಪ್ರದೇಶದ ಶ್ರಾವಸ್ತಿ ಜಿಲ್ಲೆ ಹರ್ದತ್‌ನಗರದ ಪ್ರಮೋದ್ ಸಿಂಗ್ ಎಂಬ 22ರ ಹರೆಯದ ಯುವಕನೇ ಈ ರೀತಿ ಅಂಗವೈಕಲ್ಯವನ್ನು ಮೀರಿ, ಒಂದೇ ಕೈಯಲ್ಲಿ ದ್ವಿಚಕ್ರ ವಾಹನ ಚಲಾಯಿಸಿ ಕೆಲಸ ಮಾಡುತ್ತಿರುವವರು. ಬನ್ನೇರುಘಟ್ಟದಲ್ಲಿ ಇರುವ ಪ್ರಮೋದ್ ಸಿಂಗ್ ಲಾಲ್‌ಬಾಗ್ ಸುತ್ತಮುತ್ತ ಆಹಾರ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.
ಹೆತ್ತವರು ಕೃಷಿ ಕೂಲಿ ಕಾರ್ಮಿಕರು. ಪ್ರಮೋದ್ ಸಿಂಗ್ 2 ವರ್ಷದ ಮಗುವಾಗಿದ್ದಾಗ ಅಪ್ಪ ಅಮ್ಮ ಕೆಲಸ ಮಾಡುತ್ತಿದ್ದ ಜಾಗದಲ್ಲಿ ಅಕ್ಕಿ ಸ್ವಚ್ಛಗೊಳಿಸುವ ಯಂತ್ರಕ್ಕೆ ಈ ಮಗುವಿನ ಕೈ ಸಿಲುಕಿ ಎಡಗೈ ಪೂರ್ತಿ ತುಂಡಾಗಿತ್ತು. ನಾಲ್ವರು ಮಕ್ಕಳಲ್ಲಿ ಇವರೇ ದೊಡ್ಡವರಾಗಿರುವುದರಿಂದ 10ನೇ ತರಗತಿವರೆಗೆ ಓದಿ ಕೆಲಸ ಆರಂಭಿಸಿದ್ದರು.
ಒಂದು ಕೈ ಇಲ್ಲದ ಕಾರಣ ಕೂಲಿ ಕೆಲಸವೂ ಕಷ್ಟವಾಗಿತ್ತು. ಬೇರೆ ಕಡೆ ಉದ್ಯೋಗವೂ ಸಿಗಲಿಲ್ಲ. ತನ್ನದೇ ಊರಿನ ಸುರೇಶ್ ಕುಮಾರ್ ಎಂಬ ಗೆಳೆಯ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಅವರ ನೆರವಿನಿಂದ ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದರು. ಆನ್‌ಲೈನ್ ಮೂಲಕ ಆಹಾರ ತರಿಸುವವರಿಗೆ ತಲುಪಿಸುವ ಏಜೆನ್ಸಿ ಸ್ವಿಗ್ಗಿಯಲ್ಲಿ ಕೆಲಸ ಸಿಕ್ಕಿತ್ತು.
ಬ್ಯಾಟರಿ ಚಾಲಿತ ದ್ವಿಚಕ್ರ ವಾಹನವನ್ನು ಒಂದೇ ಕೈಯಲ್ಲಿ ಚಲಾಯಿಸುತ್ತಾ ನಿಗದಿತ ಮನೆಗಳಿಗೆ ಆಹಾರ ತಲುಪಿಸುತ್ತಿದ್ದಾರೆ. ದಿನಕ್ಕೆ ಕನಿಷ್ಠ ₹ 600 ದುಡಿಯುತ್ತಿದ್ದು, ಬ್ಯಾಟರಿ ಚಾಲಿತ ದ್ವಿಚಕ್ರ ವಾಹನದ ಬಾಡಿಗೆ ₹ 200 ನೀಡಿ ಉಳಿದ ಆದಾಯದಲ್ಲಿ ತಾನೂ ಜೀವನ ನಡೆಸಿ, ಉತ್ತರ ಪ್ರದೇಶದಲ್ಲಿರುವ ಹೆತ್ತವರಿಗೂ ಪ್ರತಿ ತಿಂಗಳು ಹಣ ಕಳುಹಿಸುತ್ತಿದ್ದಾರೆ.
‘ನನ್ನ ತಮ್ಮಂದಿರು ಮುಂಬೈಯಲ್ಲಿ ದುಡಿಯುತ್ತಿದ್ದಾರೆ. ನಮ್ಮೂರಿನಲ್ಲಿ ದುಡಿಮೆಗೆ ಕೆಲಸವೇ ಸಿಗಲಿಲ್ಲ. ಬೆಂಗಳೂರು ನನಗೆ ಅನ್ನ ನೀಡಿದ ನಗರ. ಒಂದು ಕೈ ಇಲ್ಲದೇ ಇದ್ದರೂ ಕೆಲಸ ಕೊಟ್ಟಿದ್ದಾರೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
‘ದುಡಿದಿರುವುದನ್ನೆಲ್ಲ ನಾನೇ ಖರ್ಚು ಮಾಡಿದರೆ ಅಪ್ಪ ಅಮ್ಮನಿಗೆ ಕಷ್ಟ ಆಗುತ್ತದೆ. ಅದಕ್ಕೆ ಪ್ರತಿತಿಂಗಳು ಹಣ ಉಳಿಸಿ ಕಳುಹಿಸುತ್ತಿದ್ದೇವೆ. ದುಡಿಮೆಯ ಜೊತೆಗೆ ಒಂದಷ್ಟು ಟಿಪ್ಸ್ ಕೂಡ ಸಿಗುತ್ತಿದೆ’ ಎಂದು ಹೇಳಿದರು.
ಎಲ್ಲ ಸರಿ ಇರುವವರಿಗೇ ನಮ್ಮೂರಲ್ಲಿ ಸರಿಯಾಗಿ ಕೆಲಸ ಸಿಗುವುದಿಲ್ಲ. ಇನ್ನು ಕೈ ಇಲ್ಲದವನಿಗೆ ಸಿಗುತ್ತದಾ? ಬೆಂಗಳೂರು ನನಗೆ ಬದುಕು ನೀಡಿದೆ.ಪ್ರಮೋದ್ ಸಿಂಗ್ ಸ್ವಿಗ್ಗಿ ಉದ್ಯೋಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.