ಬೆಂಗಳೂರು: ‘ಯಾರೇ ಠಾಣೆಗೆ ಬಂದು ದೂರು ನೀಡಿದರೆ, ಅದನ್ನು ದಾಖಲಿಸಿ ಕೊಳ್ಳಬೇಕು. ಆಕಸ್ಮಾತ್ ದಾಖಲಿಸಿಕೊಳ್ಳದೇ ನಿರ್ಲಕ್ಷ್ಯ ವಹಿಸಿದರೆ, ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ನೂತನ ಪೊಲೀಸ್ ಕಮಿಷನರ್ ಸಿ.ಎಚ್. ಪ್ರತಾಪ್ ರೆಡ್ಡಿ ಎಚ್ಚರಿಕೆ ನೀಡಿದರು.
ನಗರದ 37ನೇ ಕಮಿಷನರ್ ಆಗಿ ಮಂಗಳವಾರ ಅವರು ಅಧಿಕಾರ ವಹಿಸಿಕೊಂಡರು. ನಿರ್ಗಮಿತ ಕಮಿಷ ನರ್ ಕಮಲ್ ಪಂತ್ ಅವರು ಪ್ರತಾಪ್ ರೆಡ್ಡಿ ಅವರಿಗೆ ಬ್ಯಾಟನ್ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.
ಅಧಿಕಾರ ಸ್ವೀಕರಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರತಾಪ್ ರೆಡ್ಡಿ, ‘ದೂರು ದಾಖಲಾಗಿಲ್ಲ
ವೆಂದು ಹೇಳಿಕೊಂಡು ಯಾರೊಬ್ಬರೂ ಕಮಿಷನರ್ ಕಚೇರಿಗೆ ಬರಬಾರದು. ಈ ಬಗ್ಗೆ ಈಗಾಗಲೇ ಎಲ್ಲ ಡಿಸಿಪಿಗಳಿಗೆ ಸೂಚನೆ ನೀಡಿದ್ದೇನೆ’ ಎಂದರು.
‘ಮಹಿಳೆಯರ ರಕ್ಷಣೆಗೆ ಆದ್ಯತೆ ನೀಡಲಾಗುವುದು. ಗಂಭೀರ ಪ್ರಕರಣ ಗಳಲ್ಲಿ ತ್ವರಿತವಾಗಿ ತನಿಖೆ ಮುಗಿಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಗುವುದು’ ಎಂದೂ ತಿಳಿಸಿದರು.
‘ಬೆಂಗಳೂರು ಕಮಿಷನರೇಟ್ ಎಂಬುದು ದೊಡ್ಡ ಘಟಕ. ಆಡಳಿತದಲ್ಲಿ ನಿತ್ಯವೂ ಬದಲಾವಣೆ ಬೇಕಾಗುತ್ತದೆ. ಸದ್ಯದ ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳುತ್ತೇನೆ. ಇಲಾಖೆಯಲ್ಲಿರುವ ಪ್ರತಿಯೊಬ್ಬರಿಂದಲೂ ಕೆಲಸ ತೆಗೆದುಕೊಳ್ಳುತ್ತೇನೆ. ಸುಧಾರಣೆಗಳು ಅಗತ್ಯವಿದ್ದರೆ ಸೂಕ್ತ ಯೋಜನೆ ರೂಪಿಸುತ್ತೇನೆ’ ಎಂದೂ ಹೇಳಿದರು.
ಪ್ರತಿಯೊಂದು ಠಾಣೆಯಲ್ಲೂ ಕ್ಯಾಮೆರಾ: ‘ಠಾಣೆಗಳಲ್ಲಿ ಪಾರದರ್ಶಕತೆ ತಂದು ಜನಸ್ನೇಹಿಯನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಸುಪ್ರೀಂ ಕೋರ್ಟ್ ಆದೇಶದಂತೆ ಪ್ರತಿಯೊಂದು ಠಾಣೆಯಲ್ಲಿ ಕನಿಷ್ಠ 4 ಸಿ.ಸಿ. ಟಿ.ವಿ ಕ್ಯಾಮೆರಾ ಅಳವಡಿಸಬೇಕು. ನಗರದ ಪ್ರತಿಯೊಂದು ಠಾಣೆಯಲ್ಲೂ ಕ್ಯಾಮೆರಾ ಅಳವಡಿಕೆ ಬಗ್ಗೆ ಗಮನ ಹರಿಸಲಾಗುವುದು’ ಎಂದು ಅವರು ಹೇಳಿದರು.
ಸೈಬರ್ ಅಪರಾಧ ತಡೆಗೆ ಮತ್ತಷ್ಟು ಸುಧಾರಣೆ: ‘ನಗರದಲ್ಲಿ ಈ ಹಿಂದೆ ಒಂದೇ ಸೈಬರ್ ಕ್ರೈಂ ಠಾಣೆ ಇತ್ತು. ಇದೀಗ ಪ್ರತಿಯೊಂದು ವಿಭಾಗಕ್ಕೊಂದು ಠಾಣೆ ಆಗಿದೆ. ಇಂದಿನ ದಿನಮಾನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ಇದರ ತಡೆಗೆ ಮತ್ತಷ್ಟು ಸುಧಾರಣಾ ಕ್ರಮಗಳನ್ನು ಜಾರಿಗೆ ತರಲಾಗುವುದು’ ಎಂದು ಪ್ರತಾಪ್ ರೆಡ್ಡಿ ಅವರು ಹೇಳಿದರು.
‘ಈಗಾಗಲೇ ‘ಗೋಲ್ಡನ್ ಅವರ್’ ಎಂಬ ವ್ಯವಸ್ಥೆ ಜಾರಿಗೆ ತರಲಾಗಿದೆ. ತುರ್ತಾಗಿ ದೂರು ನೀಡುವವರಿಗೆ, ಹಣ ವಾಪಸು ಕೊಡಿಸಲಾಗುತ್ತಿದೆ. ಬೆಂಗಳೂರು ಪೊಲೀಸರ ವ್ಯವಸ್ಥೆ ಇಡೀ ದೇಶಕ್ಕೆ ಮಾದರಿಯಾಗಿದೆ’ ಎಂದು ಹೇಳಿದರು.
‘ಟೋಯಿಂಗ್ ಅಗತ್ಯ’
‘ನಗರದ ಸುಗಮ ಸಂಚಾರ ವ್ಯವಸ್ಥೆಗೆ ಟೋಯಿಂಗ್ ಅಗತ್ಯವಿದೆ. ರಾಜ್ಯ ಸರ್ಕಾರದ ಜೊತೆ ಚರ್ಚಿಸಿ, ಪರಿಷ್ಕೃತ ನಿಯಮಗಳ ರೂಪಿಸಿ ಟೋಯಿಂಗ್ ವ್ಯವಸ್ಥೆ ಜಾರಿಗೆ ತರಲು ಪ್ರಯತ್ನಿಸಲಾಗುವುದು’ ಎಂದು ಪ್ರತಾಪ್ ರೆಡ್ಡಿ ಹೇಳಿದರು.
‘ಅನಧಿಕೃತ ಕ್ಲಬ್‌ಗಳು ಬಂದ್’
‘ನಗರದಲ್ಲಿರುವ ಅನಧಿಕೃತ ಕ್ಲಬ್‌ಗಳನ್ನು ಬಂದ್ ಮಾಡಿಸಿ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಪ್ರತಾಪ್ ರೆಡ್ಡಿ ತಿಳಿಸಿದರು.
‘ಸಿಸಿಬಿ ಹೆಸರಿನಲ್ಲಿ ಕ್ಲಬ್ ಮಾಲೀಕರಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಅಪರಾಧಗಳನ್ನು ಭೇದಿಸಲು ಸಿಸಿಬಿ ಕೆಲಸ ಮಾಡಲಿದೆ’ ಎಂದರು.
ಕೆಲಸ ತೃಪ್ತಿ ತಂದಿದೆ: ಕಮಲ್ ಪಂತ್
‘ಕಮಿಷನರ್ ಆಗಿ ಮಾಡಿದ ಕೆಲಸ ತೃಪ್ತಿ ತಂದಿದೆ. ಪೊಲೀಸ್ ನೇಮಕಾತಿ ವಿಭಾಗದಲ್ಲೂ ಪ್ರಾಮಾಣಿಕವಾಗಿ ಕೆಲಸ ಮಾಡಿ, ವ್ಯವಸ್ಥೆ ಸುಧಾರಣೆ ಮಾಡುತ್ತೇನೆ’ ಎಂದು ಕಮಲ್ ಪಂತ್ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ದೇವರ ಜೀವನಹಳ್ಳಿ (ಡಿ.ಜೆ. ಹಳ್ಳಿ), ಕಾಡುಗೊಂಡನ ಹಳ್ಳಿ (ಕೆ.ಜಿ.ಹಳ್ಳಿ) ಗಲಭೆ ಹಾಗೂ ಇತರೆ ಗಂಭೀರ ಪ್ರಕರಣಗಳನ್ನು ಪೊಲೀಸರು ಸಮರ್ಪಕವಾಗಿ ನಿರ್ವಹಣೆ ಮಾಡಿದರು. ರೌಡಿ ಚಟುವಟಿಕೆ ಹಾಗೂ ಡ್ರಗ್ಸ್ ದಂಧೆಯನ್ನು ನಿಯಂತ್ರಣಕ್ಕೆ ತಂದರು’ ಎಂದರು.
‘ಬಿಟ್ ಕಾಯಿನ್ ಪ್ರಕರಣದಲ್ಲಿ ಕೇಂದ್ರ ತನಿಖಾ ಸಂಸ್ಥೆಗಳಿಗೂ ಮೀರಿ ಪೊಲೀಸರು ತನಿಖೆ ಮಾಡಿದ್ದಾರೆ. ಯಾವುದೇ ಗೊಂದಲ ಹಾಗೂ ಸಂಶಯವಿಲ್ಲ. ಆಕಸ್ಮಾತ್ ಇದ್ದರೆ ಉತ್ತರಿಸಲು ನಾನು ಸಿದ್ಧ’ ಎಂದೂ ಅವರು ತಿಳಿಸಿದರು.
‘ಪೊಲೀಸ್ ನೇಮಕಾತಿ ವಿಭಾಗದ ಮಂಡಳಿಯಲ್ಲಿ ಕೆಲ ತಿಂಗಳು ಕೆಲಸ ಮಾಡಿದ್ದೆ. ಆದರೆ, ನೇಮಕಾತಿ ಪ್ರಕ್ರಿಯೆ ಹೊಸದು. ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ, ವಿಭಾಗದ ಕೆಲಸಗಳನ್ನು ಮುಂದುವರಿಸುವೆ. ಸದ್ಯ ಕೇಳಿಬಂದಿರುವ ಆರೋಪಗಳಿಂದ ವಿಭಾಗವನ್ನು ಮುಕ್ತಗೊಳಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.