ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಡೆಂಗಿ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದರು.
ಡೆಂಗಿ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಾಗರಿಕರು ಹಾಗೂ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ‘ಡೆಂಗಿ ವಾರಿಯರ್’ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮಂಗಳವಾರ ಬಹುಮಾನ ವಿತರಿಸಿ ಅವರು ಮಾತನಾಡಿದರು.
ನಗರದಲ್ಲಿ ಜುಲೈನಿಂದ ಹೆಚ್ಚು ಡೆಂಗಿ ಪ್ರಕರಣಗಳು ಕಂಡು ಬಂದವು. ಪಾಲಿಕೆ ವತಿಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಆರೋಗ್ಯ ವಿಭಾಗದ ಎಲ್ಲಾ ಅಧಿಕಾರಿಗಳು ಶ್ರಮಿಸಿರುವ ಪರಿಣಾಮ ಡೆಂಗಿ ನಿಯಂತ್ರಿಸಲು ಸಾಧ್ಯವಾಯಿತು ಎಂದರು.
ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಸಮುದಾಯವು ಆಡಳಿತದೊಂದಿಗೆ ಕೈಜೋಡಿಸಿದರೆ ತ್ವರಿತ, ಪರಿಣಾಮಕಾರಿಯಾಗಿ ತಡೆಗಟ್ಟಬಹುದಾಗಿದೆ. ಸಾಮಾಜಿಕ ಜಾಲತಾಣ ಬಳಸಿಕೊಂಡು ಜಾಗೃತಿ ಮೂಡಿಸಿದರೆ ಹೆಚ್ಚು ಮಂದಿಗೆ ವಿಷಯ ತಲುಪಲಿದೆ ಎಂದು ಹೇಳಿದರು.
ಡೆಂಗಿ ನಿಯಂತ್ರಣಕ್ಕೆ ನಾಗರಿಕರು, ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಏನೆಲ್ಲಾ ಕ್ರಮಗಳನ್ನು ಕೈಗೊಂಡಿದ್ದಾರೆ, ಯಾವ ರೀತಿ ಇತರರಿಗೆ ಅರಿವು ಮೂಡಿಸಿದ್ದಾರೆ ಎಂಬ ಬಗ್ಗೆ ಕಿರುಚಿತ್ರಗಳನ್ನು (ರೀಲ್ಸ್) ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಅಪ್‌ಲೋಡ್ ಮಾಡಲು ತಿಳಿಸಲಾಗಿತ್ತು. ಈ ಸ್ಪರ್ಧೆಯಲ್ಲಿ 250ಕ್ಕೂ ಹೆಚ್ಚು ವಾರಿಯರ್‌ಗಳು ಭಾಗವಹಿಸಿದ್ದರು ಎಂದು ವಿಕಾಸ್ ಮಾಹಿತಿ ನೀಡಿದರು.
ಡೆಂಗಿ ವಾರಿಯರ್ಸ್ ಸಿದ್ಧಪಡಿಸಿದ ವಿಡಿಯೊಗಳಿಗೆ 58 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ನಾಲ್ಕು ಲಕ್ಷಕ್ಕೂ ಹೆಚ್ಚು ‘ಲೈಕ್ಸ್’ ಬಂದಿವೆ. ಬೆಸ್ಟ್ ಕ್ಲಸ್ಟರ್, ಎನ್‌ಸಿಬಿಎಸ್, ಫೋರಂ ಸೌತ್ ಮಾಲ್, ಮಂತ್ರಿ ಸ್ಕ್ವೇರ್, ನೆಕ್ಸಸ್ ಮಾಲ್ ಹಾಗೂ ಮಾಲ್ ಆಫ್ ಏಷ್ಯಾಗಳ ಸಹಯೋಗದಲ್ಲಿ ವಿಜೇತರಿಗೆ ‘ಗಿಫ್ಟ್ ವೋಚರ್’ ನೀಡಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.