ದಾಬಸ್‌ಪೇಟೆ: ರಾಷ್ಟೀಯ ಹೆದ್ದಾರಿ–48ರ ಎಡೆಹಳ್ಳಿ ಬಳಿ ಟಿಪ್ಪರ್ ಮತ್ತು ದ್ವಿಚಕ್ರ ವಾಹನದ ಮಧ್ಯೆ ಬುಧವಾರ ಬೆಳಿಗ್ಗೆ 7.45ರ ಸುಮಾರಿಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಎಂಟು ತಿಂಗಳ ಗರ್ಭಿಣಿ ಸಿಂಚನಾ (30) ಹಾಗೂ ಗರ್ಭದೊಳಗೆ ಇದ್ದ ಮಗು ಮೃತಪಟ್ಟಿದೆ. ಸಿಂಚನಾ ಪತಿ ಮಂಜುನಾಥ್ ಅವರು ಪಾರಾಗಿದ್ದಾರೆ.
ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ಹೋಬಳಿಯ ತೋಟನಹಳ್ಳಿ ಗ್ರಾಮದ ಮಂಜುನಾಥ್ ಸೋಂಪುರ ಕೈಗಾರಿಕಾ ಪ್ರದೇಶದ ಎಲ್.ಎಂ. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಕಂಪನಿಯಿಂದ ಬೇರೆ ರಾಜ್ಯಕ್ಕೆ ವರ್ಗಾವಣೆಯಾಗಿತ್ತು. ವರ್ಗಾವಣೆ ಸ್ಥಳಕ್ಕೆ ತೆರಳುವುದಕ್ಕೂ ಮುನ್ನ ದೇವಸ್ಥಾನದಲ್ಲಿ ಪೂಜೆ ಮಾಡಿಸಲು ಪತ್ನಿ ಸಿಂಚನಾ ಜೊತೆಗೆ ಶಿವಗಂಗೆಯ ತೋಪಿನ ಗಣಪತಿ ದೇವಾಲಯಕ್ಕೆ ಹೋಗಿದ್ದರು. ಪೂಜೆ ಮುಗಿಸಿಕೊಂಡು ತೋಟನಹಳ್ಳಿ ಗ್ರಾಮಕ್ಕೆ ವಾಪಸ್ ಬರುವಾಗ ಈ ಅಪಘಾತ ಸಂಭವಿಸಿದೆ ಎಂದು ಸಂಚಾರ ಠಾಣೆ ಪೊಲೀಸರು ತಿಳಿಸಿದರು.
ಜೈಹಿಂದ್ ಹೋಟೆಲ್ ಬಳಿ ಬರುತ್ತಿದ್ದ ವೇಳೆ ಟಿಪ್ಪರ್ ಡಿಕ್ಕಿಯಾಗಿದೆ. ಕೆಳಕ್ಕೆ ಬಿದ್ದ ಸಿಂಚನಾ ಅವರ ಮೇಲೆ ಟಿಪ್ಪರ್ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ಸಿಂಚನಾ ಅವರ ಹೊಟ್ಟೆಯಿಂದ ಮಗು ಕೂಡ ಹೊರ ಬಂದು ಮೃತಪಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಮತ್ತೊಂದು ಬದಿಗೆ ಬಿದ್ದಿದ್ದ ಮಂಜುನಾಥ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ.
ಕುಟುಂಬಸ್ಥರ ಕಣ್ಣೀರು: ಅಪಘಾತ ನಡೆದ ಸ್ಥಳದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.