ADVERTISEMENT

ಬೆಂಗಳೂರು: ಸುಸಜ್ಜಿತ ಪುಷ್ಪ ಮಾರುಕಟ್ಟೆ ನಿರ್ಮಾಣಕ್ಕೆ ಸಿದ್ಧತೆ

ತೋಟಗಾರಿಕಾ ಕಾಲೇಜು ಆವರಣದ 5 ಎಕರೆ ವಿಸ್ತೀರ್ಣದಲ್ಲಿ ಅಂತರರಾಷ್ಟ್ರೀಯ ಮಟ್ಟದ ಮಾರುಕಟ್ಟೆ

ಗಾಣಧಾಳು ಶ್ರೀಕಂಠ
Published 13 ನವೆಂಬರ್ 2024, 0:49 IST
Last Updated 13 ನವೆಂಬರ್ 2024, 0:49 IST
   

ಬೆಂಗಳೂರು: ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ (ಯುಎಚ್‌ಎಸ್‌) ಅಧೀನದಲ್ಲಿರುವ ಬೆಂಗಳೂರಿನ ತೋಟಗಾರಿಕೆ ಮಹಾವಿದ್ಯಾಲಯದ ಆವರಣದಲ್ಲಿ (ಜಿಕೆವಿಕೆ ಕ್ಯಾಂಪಸ್‌) ಐದು ಎಕರೆ ಪ್ರದೇಶದಲ್ಲಿ ಸುಸಜ್ಜಿತ ಅಂತರರಾಷ್ಟ್ರೀಯ ಮಟ್ಟದ ಪುಷ್ಪ ಮಾರುಕಟ್ಟೆ ತಲೆಎತ್ತಲಿದೆ.

ತೋಟಗಾರಿಕಾ ಇಲಾಖೆ ಹಾಗೂ ಹೂವು, ಹಣ್ಣು ಮತ್ತು ತರಕಾರಿಗಳ (ವಿಶೇಷ) ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮೂಲಕ ಈ ಮಾರುಕಟ್ಟೆ ನಿರ್ಮಾಣಕ್ಕೆ ಸಿದ್ದತೆಗಳು ನಡೆದಿವೆ. ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುವ ತಯಾರಿ ನಡೆದಿದೆ.

ಎಪಿಎಂಸಿ ಕಾರ್ಯದರ್ಶಿ ಮತ್ತು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು, ಹೆಬ್ಬಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಕ್ಯಾಂಪಸ್‌ನಲ್ಲಿರುವ ತೋಟಗಾರಿಕೆ ವಿಜ್ಞಾನಗಳ ಕಾಲೇಜಿನ ಆವರಣದಲ್ಲಿ ಉದ್ದೇಶಿತ ಮಾರುಕಟ್ಟೆ ನಿರ್ಮಾಣವಾಗುವ ಸ್ಥಳ ಪರಿಶೀಲಿಸಿ ವರದಿ ನೀಡಿದ್ದಾರೆ. ಸದರಿ ಜಮೀನು ಪ್ರಸ್ತಾವಿತ ಮಾರುಕಟ್ಟೆ ನಿರ್ಮಾಣಕ್ಕೆ ಸೂಕ್ತವಾಗಿದೆ ಎಂದು ವರದಿಯಲ್ಲಿ ಶಿಫಾರಸು ಮಾಡಿದ್ದಾರೆ. ಈ ವರದಿಯ ಆಧಾರದಲ್ಲಿ, ಮಾರುಕಟ್ಟೆ ನಿರ್ಮಾಣಕ್ಕೆ 5 ಎಕರೆ ಜಮೀನನ್ನು ತೋಟಗಾರಿಕೆ ಇಲಾಖೆಗೆ ಗುತ್ತಿಗೆ ಆಧಾರದಲ್ಲಿ ಹಸ್ತಾಂತರಿಸುವಂತೆ ಬಾಗಲಕೋಟೆಯ ಯುಎಚ್‌ಎಸ್‌ಗೆ ತೋಟಗಾರಿಕೆ ಇಲಾಖೆ ಆದೇಶಿಸಿದೆ.

ADVERTISEMENT

‘ಅಂತರರಾಷ್ಟ್ರೀಯ ಪುಷ್ಪ ಮಾರುಕಟ್ಟೆ ನಿರ್ಮಾಣಕ್ಕೆ ತೋಟಗಾರಿಕೆ ಮಹಾವಿದ್ಯಾಲಯದ ಆವರಣದಲ್ಲಿ ರುವ ಐದು ಎಕರೆ ಜಮೀನನ್ನು ಷರತ್ತು ಗಳೊಂದಿಗೆ ಗುತ್ತಿಗೆ ಆಧಾರದ ಮೇಲೆ ತೋಟಗಾರಿಕೆ ಇಲಾಖೆಗೆ ಹಸ್ತಾಂತರಿಸಲು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲ ಯದ ಮಂಡಳಿ ಸಮ್ಮತಿಸಿದೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ವಿಷ್ಣುವರ್ಧನ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಮೀನು ಹಸ್ತಾಂತರ ಇನ್ನಷ್ಟೇ ಆಗಬೇಕಿದೆ. ಮಾರುಕಟ್ಟೆಯನ್ನು ಖಾಸಗಿ ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ)ದಲ್ಲಿ ನಿರ್ಮಿಸಬೇಕೋ? ಅಥವಾ ನಬಾರ್ಡ್‌ನಂತಹ ಸಂಸ್ಥೆಗಳ ನೆರವಿನೊಂದಿಗೆ ಸರ್ಕಾರವೇ ನಿರ್ಮಿಸಬೇಕೋ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಮಾರುಕಟ್ಟೆ ಯಲ್ಲಿ ಅಂದಾಜು 200 ಮಳಿಗೆಗಳನ್ನು ತೆರೆಯುವ ಪ್ರಸ್ತಾವವಿದೆ. ಇದು ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ, ವಿಶಿಷ್ಟವಾದ ಪುಷ್ಪ ಮಾರುಕಟ್ಟೆ ಆಗಲಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದ್ಯ ರಾಜ್ಯದಲ್ಲಿ 35 ಸಾವಿರ ಹೆಕ್ಟೇರ್‌ ವಿಸ್ತೀರ್ಣದಲ್ಲಿ ಪುಷ್ಪ ಕೃಷಿಯಿದೆ. ಬೆಂಗಳೂರು ಸುತ್ತಮುತ್ತ 10 ರಿಂದ 12 ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹೂವುಗಳನ್ನು ಬೆಳೆಯ ಲಾಗುತ್ತದೆ. ಬೆಂಗಳೂರು ಜಿಲ್ಲೆಯಲ್ಲಿ 535 ಹೆಕ್ಟೇರ್ ಪ್ರದೇಶದಲ್ಲಿ 2,100 ಟನ್ ಹೂವನ್ನು ಬೆಳೆಯಲಾಗು ತ್ತಿದೆ ಎಂದು ಅಂದಾಜಿಸಲಾಗಿದೆ. ಸಾವಿರಾರು ಕೋಟಿ ರೂಪಾಯಿ ವ್ಯವಹಾರವಿರುವ ಪುಷ್ಪ ಕೃಷಿಗೆ ಸರ್ಕಾರ ಸೂಕ್ತ ಮಾರುಕಟ್ಟೆ ಕಲ್ಪಿಸಬೇಕೆಂಬ ಬೇಡಿಕೆ ಇತ್ತು. ಈ ಕಾರಣದಿಂದ ಅಂತರರಾಷ್ಟ್ರೀಯ ಮಟ್ಟದ ಪುಷ್ಪ ಮಾರುಕಟ್ಟೆ ನಿರ್ಮಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸಕ್ತ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಘೋಷಿಸಿದ್ದರು.

ಷರತ್ತುಗಳು ಏನೇನು ?

  • ಉದ್ದೇಶಿತ ಅಂತರರಾಷ್ಟ್ರೀಯ ಪುಷ್ಪ ಮಾರುಕಟ್ಟೆ ನಿರ್ಮಾಣಕ್ಕೆ ಗುರುತಿಸಿರುವ ಜಮೀನಿನಲ್ಲಿರುವ ಹಲಸು, ಗೋಡಂಬಿ, ಮಾವು ಮತ್ತು ತೆಂಗಿನ ಮರಗಳನ್ನು ಆದಷ್ಟು ಕಟಾವು ಮಾಡದೆ ಉಳಿಸಿಕೊಳ್ಳಬೇಕು.

  • ಕೇಂದ್ರ ಕಾರ್ಯಾರಂಭ ಮಾಡಿದ ನಂತರ, ಅದರಿಂದ ಬರುವ ಆದಾಯದ ಶೇಕಡ 50ರಷ್ಟನ್ನು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ನೀಡಬೇಕು.

  • ವಿಶ್ವವಿದ್ಯಾಲಯದ ಹೊರಗಿನ ರಸ್ತೆಗಳು ಮತ್ತು ಕಾಂಪೌಂಡ್ ನಿರ್ಮಾಣದಂತಹ ಇತರ ಕಾಮಗಾರಿಗಳನ್ನು ಮಾಡಿಕೊಡಬೇಕು. ಜೊತೆಗೆ, ಎಪಿಎಂಸಿ ಹೂವು, ಹಣ್ಣು ಮತ್ತು ತರಕಾರಿಗಳ ವಿಭಾಗದ ಕಾರ್ಯದರ್ಶಿಯವರೊಂದಿಗೆ ಒಡಂಬಡಿಕೆ ಮಾಡಿಕೊಳ್ಳಬೇಕೆಂಬ ಷರತ್ತುಗಳನ್ನು ವಿಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.