ಬೆಂಗಳೂರು: ಕನಕಪುರ ರಸ್ತೆಯ ವಸಂತಪುರದಲ್ಲಿ ಇಸ್ಕಾನ್ ವತಿಯಿಂದ ನಿರ್ಮಿಸಲಾಗಿರುವ ‘ರಾಜಾಧಿರಾಜ ಗೋವಿಂದ’ ದೇವಾಲಯವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮಂಗಳವಾರ ಉದ್ಘಾಟಿಸಿದರು.
'ವೈಕುಂಠ ಗಿರಿ' ಎಂದು ಹೆಸರಿಟ್ಟಿರುವ 24 ಎಕರೆ ಬೆಟ್ಟದ ಪರಿಸರದಲ್ಲಿ ದೇವಾಲಯ ಹಾಗೂ ಸಾಂಸ್ಕೃತಿಕ ಕಟ್ಟಡ ನಿರ್ಮಿಸಲಾಗಿದ್ದು, ತಿರುಪತಿ ತಿರುಮಲ ವೆಂಕಟೇಶ್ವರ ದೇವಾಲಯದ ವಾಸ್ತುಶೈಲಿಯಲ್ಲೇ ಈ ನೂತನ ದೇವಾಲಯ ರೂಪುಗೊಂಡಿದೆ.
ತಿರುಮಲದ ಮೂಲ ವಿಗ್ರಹಕ್ಕೆ ಹೋಲಿಕೆಯಾಗುವ ರೀತಿಯಲ್ಲಿ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಆದರೆ, ಇಲ್ಲಿಯ ವಿಗ್ರಹದ ಎತ್ತರವನ್ನು 1 ಸೆಂ.ಮೀ. ಕಡಿಮೆ ಮಾಡಲಾಗಿದೆ. ಇಸ್ಕಾನ್ ಸಂಸ್ಥಾಪಕ ಶ್ರೀಲ ಪ್ರಭುಪಾದರ 125ನೇ ಜನ್ಮ ವಾರ್ಷಿಕೋತ್ಸವ ಸ್ಮರಣಾರ್ಥ ಈ ದೇವಸ್ಥಾನ ನಿರ್ಮಿಸಲಾಗಿದೆ. ಸೋಮವಾರ ವಿಗ್ರಹ ಪ್ರತಿಷ್ಠಾಪನೆಯಾಗಿದ್ದು, ಮಂಡಲ ಪೂಜೆ ಹಾಗೂ ವಿಧಿ–ವಿಧಾನಗಳು ಆರಂಭಗೊಂಡಿವೆ. ಆಗಸ್ಟ್ 1ರಿಂದ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 1ರವರೆಗೆ, ಮಧ್ಯಾಹ್ನ 4 ಗಂಟೆಯಿಂದ ರಾತ್ರಿ 8.30ರವರೆಗೆ ಸಾರ್ವ
ಜನಿಕರ ಪ್ರವೇಶಕ್ಕೆ ಮುಕ್ತವಾಗಲಿದೆ.
ದಂಪತಿ ಸಮೇತ ಪೂಜೆ: ರಾಷ್ಟ್ರಪತಿ ರಾಮನಾಥ ಕೋವಿಂದ್ ಹಾಗೂ ಅವರ ಪತ್ನಿ ಸವಿತಾ ದೇವಸ್ಥಾನವನ್ನು ಉದ್ಘಾಟಿಸಿ ಪೂಜೆ ಸಲ್ಲಿಸಿದರು. ಬಳಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ರಾಜ್ಯಪಾಲ ಥಾವರಚಂದ್ ಗೆಹಲೋತ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ,ಇಸ್ಕಾನ್ ಅಧ್ಯಕ್ಷ ಮಧುಪಂಡಿತ ದಾಸ, ಹಿರಿಯ ಉಪಾಧ್ಯಕ್ಷ ಚಂಚಲಪತಿ ದಾಸ ಇದ್ದರು.
‘ಇದೊಂದು ಸುಂದರ ಆಧ್ಯಾತ್ಮಿಕ ತಾಣ. ಇಲ್ಲಿಯ ವಿಗ್ರಹ, ತಿರುಪತಿ ಬಾಲಾಜಿ ದೇವರ ಪ್ರತಿರೂಪದಂತಿದೆ. ಇದು ಮಾದರಿ ದೇವಾಲಯ ಆಗಲಿದೆ’ ಎಂದು ರಾಷ್ಟ್ರಪತಿ ಪ್ರತಿಕ್ರಿಯಿಸಿದರು.
‘ರಾಜಾಜಿನಗರದ ಇಸ್ಕಾನ್ ಕೃಷ್ಣ ದೇವಾಲಯಕ್ಕೆ ಹೋಗಿದ್ದಾಗ ವಿಗ್ರಹ ನೋಡಿ ಆಕರ್ಷಿತನಾದೆ. ಅನ್ನ
ದಾಸೋಹ ಹಾಗೂ ಆಧ್ಯಾತ್ಮಿಕ ವಿಚಾರ ಪಸರಿಸುವ ಇಸ್ಕಾನ್ ಕೆಲಸ ಅಭೂತ
ಪೂರ್ವ’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಭಕ್ತಿ ಚೈತನ್ಯದ ದಿನವಿದು. ದೇವಾಲಯ ಲೋಕಾರ್ಪಣೆಗೊಂಡು, ಶ್ರೀಲ ಪ್ರಭುಪಾದರ ಲೋಕ ಕಲ್ಯಾಣದ ಸಂಕಲ್ಪ ಈಡೇರಿದೆ' ಎಂದರು.
₹105 ಕೋಟಿ ವೆಚ್ಚದಲ್ಲಿ ನಿರ್ಮಾಣ
‘ಎಂಟು ವರ್ಷ ಶ್ರಮದಿಂದ 24 ಎಕರೆ ಜಾಗವನ್ನು ಅಭಿವೃದ್ಧಿಪಡಿಸಲಾಗಿದ್ದು, ಇದಕ್ಕಾಗಿ ₹ 105 ಕೋಟಿ ವೆಚ್ಚ ಮಾಡಲಾ ಗಿದೆ. ಜಾಗ ಖರೀದಿಗೆ ಸರ್ಕಾರ ರಿಯಾಯಿತಿ ನೀಡಿದೆ. 5,000 ಮಂದಿ ಸರದಿಯಲ್ಲಿ ನಿಲ್ಲಲು ಅವಕಾಶವಿದ್ದು, ಭಕ್ತರಿಗೆ ಉಚಿತ ಪ್ರಸಾದ ವ್ಯವಸ್ಥೆ ಇರಲಿದೆ’ ಎಂದು ಚಂಚಲಪತಿ ದಾಸ ಹೇಳಿದರು.
‘ಒತ್ತಡಗಳಿಗೆ ಸಿಲುಕಿ ಇಂದಿನ ಯುವಜನತೆ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಅವರಲ್ಲಿ ಜೀವನ ಉತ್ಸಾಹ ತುಂಬಲು ಕೃಷ್ಣಲೀಲಾ ಉದ್ಯಾನ ನಿರ್ಮಿಸಲಾಗುತ್ತಿದ್ದು, ಅದರ ಕೆಲಸ ಪ್ರಗತಿಯಲ್ಲಿದೆ’ ಎಂದೂ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.