ADVERTISEMENT

‘ಜಾತಿ, ಹಣದ ಬಲೆಯಿಂದ ಹೊರಬನ್ನಿ’

ಚುನಾವಣೆ ಮತ್ತು ಮಾಧ್ಯಮ ಸಂವಾದದಲ್ಲಿ ನ್ಯಾಯಮೂರ್ತಿ ನಾಗಮೋಹನದಾಸ್

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 20:12 IST
Last Updated 13 ಏಪ್ರಿಲ್ 2019, 20:12 IST
ವಿಚಾರ–ಮಂಥನದಲ್ಲಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್‌ ಮಾತನಾಡಿದರು. ಸಂಘದ ಖಜಾಂಚಿ ಉಮೇಶ್ವರ, ಅಧ್ಯಕ್ಷ ಶಿವಾನಂದ ತಗಡೂರು, ಹಿರಿಯ ಪ‌ತ್ರಕರ್ತ ಮಲ್ಲಿಕಾರ್ಜುನಯ್ಯ ಇದ್ದರು –ಪ್ರಜಾವಾಣಿ ಚಿತ್ರ
ವಿಚಾರ–ಮಂಥನದಲ್ಲಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್‌ ಮಾತನಾಡಿದರು. ಸಂಘದ ಖಜಾಂಚಿ ಉಮೇಶ್ವರ, ಅಧ್ಯಕ್ಷ ಶಿವಾನಂದ ತಗಡೂರು, ಹಿರಿಯ ಪ‌ತ್ರಕರ್ತ ಮಲ್ಲಿಕಾರ್ಜುನಯ್ಯ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಧರ್ಮ, ಜಾತಿ ಮತ್ತು ಹಣವೇ ಚುನಾವಣೆಯನ್ನು ನಿಯಂತ್ರಿಸುತ್ತಿದ್ದು, ಈ ಬಲೆಯಿಂದ ಜನರನ್ನು ಹೊರತರುವ ಜವಾಬ್ದಾರಿ ಮಾಧ್ಯಮಗಳ ಮೇಲಿದೆ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅಭಿಪ್ರಾಯಪಟ್ಟರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶನಿವಾರ ಏರ್ಪಡಿಸಿದ್ದ ‘ಚುನಾವಣೆ ಮತ್ತು ಮಾಧ್ಯಮ’ ವಿಚಾರ ಮಂಥನ ಉದ್ಘಾಟಿಸಿ ಅವರು ಮಾತನಾಡಿದರು.

ಅಪರಾಧ ಹಿನ್ನೆಲೆಯುಳ್ಳವರು ಲೋಕಸಭೆ ಪ್ರವೇಶಿಸುವ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. 14ನೇ ಲೋಕಸಭೆಯಲ್ಲಿ ಶೇ 28ರಷ್ಟಿದ್ದ ಇವರ ಸಂಖ್ಯೆ 15ನೇ ಲೋಕಸಭೆಯಲ್ಲಿ ಶೇ 32ಕ್ಕೆ ಏರಿಕೆಯಾಗಿತ್ತು. 16ನೇ ಲೋಕಸಭೆಯಲ್ಲಿ ಶೇ 34ಕ್ಕೆ ಏರಿಕೆ ಆಯಿತು.ಇದು ಪ್ರಜಾಪ್ರಭುತ್ವಕ್ಕೆ ಮಾರಕವಾದ ಬೆಳವಣಿಗೆ ಎಂದು ಹೇಳಿದರು.

ADVERTISEMENT

ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಾತನಾಡಿ, ಭಾರತದಲ್ಲಿ ಎಲ್ಲಾ ಚುನಾವಣೆಗಳು ‌ಜಾತಿ, ದುಡ್ಡು ಮತ್ತು ಸಿದ್ಧಾಂತಗಳ ಮೇಲೆ ನಡೆಯುತ್ತದೆ. ಈ ಬಾರಿಯ ಚುನಾವಣೆಯನ್ನು ಗಮನಿಸಿದರೆ ಅನಕ್ಷರಸ್ತರು ಕೂಡ ರಾಜಕೀಯ ವಿದ್ಯಮಾನಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಇದಕ್ಕೆ ಮಾಧ್ಯಮಗಳು ಕಾರಣ ಎಂದರು.

ಮತದಾರರು ಈ ಬಾರಿ ಧ್ರುವೀಕರಣಗೊಂಡಿದ್ದಾರೆ. ಯಾರೂ ಡೋಲಾಯಮಾನ ಸ್ಥಿತಿಯಲ್ಲಿ ಇಲ್ಲ. ಎಲ್ಲರೂ ಒಂದಿಲ್ಲೊಂದು ಪಕ್ಷಕ್ಕೆ ಮತ ಹಾಕಲು ಸಿದ್ಧರಾಗಿದ್ದಾರೆ. ಚುನಾವಣಾ ಸಮೀಕ್ಷೆ ಹಿಂದಿಗಿಂತ ಈಗ ಸುಲಭವಾಗಿದೆ, ಪತ್ರಕರ್ತರು ಸ್ವಲ್ಪ ಆಳಕ್ಕಿಳಿದರೆ ಸಾಕು ಎಂದು ಹೇಳಿದರು.

ಆದರೆ, ಸಮಸ್ಯೆ ಏನೆಂದರೆ ಚುನಾವಣೆಯನ್ನು ಹೇಗೆ ವರದಿ ಮಾಡಬೇಕು ಎಂಬುದರ ಬಗ್ಗೆ ಎಲ್ಲಯೂ ಸರಿಯಾದ ತರಬೇತಿ ಇಲ್ಲ. ಸಮೂಹ ಮಾಧ್ಯಮ ಶಿಕ್ಷಣದಲ್ಲಿ ಸರಿಯಾದ ಪಠ್ಯವೂ ಇದ್ದಂತಿಲ್ಲ. ಹೀಗಾಗಿ ಪತ್ರಕರ್ತರಿಗೆ ಚುನಾವಣಾ ಶಾಸ್ತ್ರದ ತರಬೇತಿ ಬೇಕಾಗಿದೆ ಎಂದರು.

‘ಮಾಧ್ಯಮಗಳು ನನ್ನ ಮಾನಹಾನಿ ಆಗುವಂತ ಯಾವುದೇ ಸುದ್ದಿ ಪ್ರಕಟಿಸಬಾರದು ಎಂದು ಅಭ್ಯರ್ಥಿಯೊಬ್ಬರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದರು. ಇದು ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ. ಅಭ್ಯರ್ಥಿ ಯಾವುದೇ ಪಕ್ಷವಿರಲಿ ಈ ತಡೆಯಾಜ್ಞೆ ಪ್ರಶ್ನಿಸಿ ಪತ್ರಕರ್ತರ ಸಂಘಟನೆಗಳು ಅಥವಾ ಪತ್ರಿಕಾ ಸಂಸ್ಥೆಗಳು ನ್ಯಾಯಾಲಯಕ್ಕೆ ಹೋಗಬೇಕಿತ್ತು. ಹೋಗದಿರುವುದು ಬೇಸರದ ಸಂಗತಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.