ಬೆಂಗಳೂರು: ‘ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯ ಪಡೆದಿರುವ ಫಲಾನುಭವಿಗಳು ಆನ್‌ಲೈನ್ ಮೂಲಕವೇ ಸಾಲ ಮರುಪಾವತಿ ಮಾಡಲು ‘ಮೊಬೈಲ್ ಆ್ಯಪ್’ ಅಭಿವೃದ್ಧಿಪಡಿಸಲಾಗಿದೆ’ ಎಂದು ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್ ತಿಳಿಸಿದರು.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ದೂರದ ಊರುಗಳಲ್ಲಿರುವ ಫಲಾನುಭವಿಗಳು ಸಾಲ ಮರುಪಾವತಿಗೆ ಜಿಲ್ಲಾ ಕಚೇರಿಗಳಿಗೆ ಪ್ರಯಾಣಿಸುವುದನ್ನು ತಪ್ಪಿಸಲು ಹಾಗೂ ಆರ್ಥಿಕ ವೆಚ್ಚದ ಹೊರೆ ತಗ್ಗಿಸುವ ಉದ್ದೇಶದಿಂದ ಡಿಜಿಟಲ್ ಪಾವತಿಗೆ ಅನುವು ಮಾಡಿಕೊಡಲಾಗಿದೆ’ ಎಂದರು.
‘ಗೂಗಲ್ ಪೇ, ಫೋನ್ ಪೇ, ಪೇಟಿಎಂ ಮೂಲಕ ಫಲಾನುಭವಿಗಳು ಡಿಜಿಟಲ್ ಪಾವತಿ ಮಾಡಬಹುದು. ಈ ಮೊಬೈಲ್ ಆ್ಯಪ್ ಪ್ರಾಯೋಗಿಕ ಹಂತದಲ್ಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶೀಘ್ರದಲ್ಲೇ ಚಾಲನೆ ನೀಡಲಿದ್ದಾರೆ’ ಎಂದರು.
‘ನಿಗಮವು ಕಳೆದ ಎರಡು ವರ್ಷಗಳಲ್ಲಿ ₹15.50 ಕೋಟಿ ಅನುದಾನದಲ್ಲಿ 1,565 ಫಲಾನುಭವಿಗಳಿಗೆ ಸಾಲ ಸೌಲಭ್ಯ ಒದಗಿಸಿದೆ. ಮೊದಲ ಸಾಲಿನಲ್ಲಿ ₹1 ಕೋಟಿಯಷ್ಟು ಮರುಪಾವತಿ ಸ್ವೀಕೃತವಾಗಿದೆ’ ಎಂದರು.
ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕೆ.ದೀಪಶ್ರೀ, ‘ನಿಗಮವು 2021-22ನೇ ಸಾಲಿನಲ್ಲಿ ‘ಆರ್ಯ ವೈಶ್ಯ ಆಹಾರ ವಾಹಿನಿ’ ಯೋಜನೆಯಡಿ ಫುಡ್ ಟ್ರಕ್ ಸೌಲಭ್ಯ, ‘ವಾಸವಿ ಜಲಶಕ್ತಿ ಯೋಜನೆ’ಯಡಿ ಕೊಳವೆ ಬಾವಿ ಕೊರೆಸಲು ಸಾಲ, ‘ಜ್ಞಾನ ಜ್ಯೋತಿ ಯೋಜನೆ’ಯಡಿ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆ ಹಾಗೂ ಕೊರೊನಾದಿಂದ ಮೃತಪಟ್ಟ ಫಲಾನುಭವಿಗಳ ಸಾಲ ಮನ್ನಾ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.