ಬೆಂಗಳೂರು: ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಪ್ರಾಥಮಿಕ ಶಿಕ್ಷಕ ಹುದ್ದೆ ಆಕಾಂಕ್ಷಿಗಳು ಹಾಗೂ ರೈತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು. ವಿಧಾನಮಂಡಲದ ಅಧಿವೇಶನ ಆರಂಭದ ದಿನವೇ ಈ ಪ್ರತಿಭಟನೆಗಳು ನಡೆದವು.
‘ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಪರೀಕ್ಷೆ ಬರೆದು ಆಯ್ಕೆಯಾದವರಿಗೆ ಆದೇಶ ಪ್ರತಿ ನೀಡಬೇಕು’ ಎಂದು ಆಕಾಂಕ್ಷಿಗಳು ಒತ್ತಾಯಿಸಿದರು.
‘2022ರ ಮೇನಲ್ಲಿ ಪರೀಕ್ಷೆ ಬರೆದಿದ್ದ 13,352 ಅಭ್ಯರ್ಥಿಗಳು, ಹುದ್ದೆಗೆ ಆಯ್ಕೆಯಾಗಿದ್ದಾರೆ. ನೇಮಕಾತಿಯಲ್ಲಿ ಗೊಂದಲವಿರುವುದಾಗಿ ಕೆಲವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಆದರೆ, ಯಾವುದೇ ಗೊಂದಲವಿಲ್ಲದೇ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಅನ್ಯಾಯ ಆಗುತ್ತಿದೆ’ ಎಂದು ಅಳಲು ತೋಡಿಕೊಂಡರು.
ಬರಗಾಲ ಘೋಷಣೆಗೆ ಆಗ್ರಹ: ‘ರಾಜ್ಯದಲ್ಲಿ ಮಳೆ ಅಭಾವವಿದ್ದು, ಬರಗಾಲ ಘೋಷಿಸಬೇಕು. ರೈತರ ಸಾಲವನ್ನು ಮನ್ನಾ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಆಗ್ರಹಿಸಿದರು. ‘ಸೂಕ್ತ ಸಮಯಕ್ಕೆ ಮಳೆಯಾಗದೆ ರೈತರು ಕಂಗಾಲಾಗಿದ್ದಾರೆ. ನೀರಾವರಿ ಸಮಸ್ಯೆ ಎದುರಾಗಿದೆ.
ಮುಖ್ಯಮಂತ್ರಿಯವರು ರಾಜ್ಯ ಪ್ರವಾಸ ಕೈಗೊಂಡು ಕೃಷಿ ಸಮಸ್ಯೆಗಳನ್ನು ತಿಳಿದುಕೊಳ್ಳಬೇಕು. ಬರಗಾಲ ಘೋಷಣೆ ಮಾಡಿ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.