ಬೆಂಗಳೂರು: ಖಾಸಗಿ ಕಾಲೇಜುಗಳಿಗೆ ಮಾನ್ಯತೆ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವರ ಎದುರೇ ವೈಮನಸ್ಸು ಹೊರಹಾಕಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಪಿ.ಯು ಮಂಡಳಿ ನಿರ್ದೇಶಕಿ ಸಿ. ಶಿಖಾ ಅವರನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.
ಇಬ್ಬರೂ ಅಧಿಕಾರಿಗಳನ್ನು ಗೃಹ ಕಚೇರಿ ಕೃಷ್ಣಾಗೆ ಬುಧವಾರ ಕರೆಸಿಕೊಂಡಿದ್ದ ಮುಖ್ಯಮಂತ್ರಿ, ಈ ರೀತಿಯ ಘಟನೆ ಮರುಕಳಿಸದಂತೆ ಕಾರ್ಯ ನಿರ್ವಹಿಸಬೇಕೆಂದು ಎಚ್ಚರಿಕೆ ನೀಡಿದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ಅವರ ನೇತೃತ್ವದಲ್ಲಿ ಮಂಗಳವಾರ ನಡೆದ ಮಾಧ್ಯಮಗೋಷ್ಠಿ ಸಂದರ್ಭದಲ್ಲಿ ಖಾಸಗಿ ಶಾಲೆಗಳಿಗೆ ಮಾನ್ಯತೆ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಶಾಲಿನಿ ರಜನೀಶ್ ಮತ್ತು ಶಿಖಾ ಅವರ ನಡುವಿನ ಅಸಮಾಧಾನ ಬಹಿರಂಗವಾಗಿತ್ತು.
ಷರತ್ತು ಪೂರೈಸದ ಕಾರಣಕ್ಕೆ 200 ಕಾಲೇಜುಗಳಿಗೆ ಮಾನ್ಯತೆ ನೀಡಲು ಪಿಯು ಮಂಡಳಿ ನಿರ್ದೇಶಕಿ ಶಿಖಾ ನಿರಾಕರಿಸಿದ್ದರು. ಬಳಿಕ ಇದೇ ವೇಳೆ ಶಿಖಾ ಅವರ ಶಿಫಾರಸು ಮೀರಿ ಕೆಲವು ಕಾಲೇಜುಗಳಿಗೆ ಶಾಲಿನಿ ಅನುಮತಿ ನೀಡಿದ್ದರು. ಇದು ಈ ಅಧಿಕಾರಿಗಳ ಮಧ್ಯೆ ವೈಮನಸ್ಸು ಮೂಡಲು ಕಾರಣವಾಗಿತ್ತು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.