ADVERTISEMENT

ವಸ್ತುಸ್ಥಿತಿ ವರದಿಗೆ ಎನ್‌ಟಿಸಿಎ ನಿರ್ದೇಶನ

ಖಾಸಗಿ ವನ್ಯಜೀವಿಧಾಮ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2018, 10:27 IST
Last Updated 18 ಜುಲೈ 2018, 10:27 IST

ಬೆಂಗಳೂರು: ರಾಜ್ಯದ ಸಂರಕ್ಷಿತ ಅರಣ್ಯಗಳ ಪಕ್ಕದಲ್ಲೇ ಖಾಸಗಿ ವನ್ಯಜೀವಿಧಾಮಗಳ ಸ್ಥಾಪನೆ ಕುರಿತಂತೆ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ (ಪಿಸಿಸಿಎಫ್‌) ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ನಿರ್ದೇಶನ ನೀಡಿದೆ.

‘ಕರ್ನಾಟಕ ಖಾಸಗಿ ವನ್ಯಜೀವಿ ಧಾಮ ನಿಯಮ–2018’ರ ಪ್ರಕಾರ ಸಂರಕ್ಷಿತ ಅರಣ್ಯದ ಪಕ್ಕದಲ್ಲಿರುವ ಜಾಗದ ಮಾಲೀಕರು ಈ ಧಾಮಗಳನ್ನು ಸ್ಥಾಪಿಸಬಹುದು. ಪರಿಸರ ಪ್ರವಾಸೋದ್ಯಮದ ಉದ್ದೇಶಕ್ಕಾಗಿ ಇಲ್ಲಿನ ಶೇ 5 ಜಾಗದಲ್ಲಿ ಕಟ್ಟಡ (ರೆಸಾರ್ಟ್‌ಗಳು, ಹೋಟೆಲ್‌ಗಳು, ಹೋಮ್‌ಸ್ಟೇಗಳು) ಕಟ್ಟಬಹುದು. ಉಳಿದ ಜಾಗವನ್ನು ಸಸ್ಯ ಸಂಪತ್ತು ಹಾಗೂ ಪ್ರಾಣಿಗಳಿಗೆ ಮೀಸಲಿಡಬೇಕು. ಕೃಷಿ, ತೋಟಗಾರಿಕೆ, ಪ್ಲಾಂಟೇಷನ್‌ಗಳಲ್ಲಿ ಇದನ್ನು ಸ್ಥಾಪಿಸಬಹುದು. ಅರಣ್ಯ, ವನ್ಯಜೀವಿ ಹಾಗೂ ಪರಿಸರಕ್ಕೆ ಸಂಬಂಧಿಸಿದ ಎಲ್ಲ ಕಾನೂನುಗಳು ಈ ಧಾಮಗಳಿಗೆ ಅನ್ವಯವಾಗಲಿವೆ. ಒಂದು ವೇಳೆ ವನ್ಯಜೀವಿಗಳಿಂದ ಮನುಷ್ಯರಿಗೆ ಹಾಗೂ ಆಸ್ತಿಗೆ ಹಾನಿ ಉಂಟಾದರೆ ಮಾಲೀಕರಿಗೆ, ನೌಕರರು ಅಥವಾ ಅತಿಥಿಗಳಿಗೆ ಹಾನಿ ಉಂಟಾದರೆ ಪರಿಹಾರ ನೀಡಲು ಅವಕಾಶ ಇಲ್ಲ.

ಈ ಯೋಜನೆಯ ಸಾಧಕ–ಬಾಧಕಗಳ ಬಗ್ಗೆ ಅರಣ್ಯ ಇಲಾಖೆ ನಿವೃತ್ತ ಪಿಸಿಸಿಎಫ್‌ಗಳು, ವನ್ಯಜೀವಿ ಮಂಡಳಿಯ ಸದಸ್ಯರ ಜತೆಗೆ ಇತ್ತೀಚೆಗೆ ಸಭೆ ನಡೆಸಿತ್ತು. ಈ ಯೋಜನೆಗೆ ಸಭೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಎನ್‌ಟಿಸಿಎ ಅನುಮತಿ ಪಡೆಯದೆ ವನ್ಯಜೀವಿಧಾಮ ಸ್ಥಾಪನೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಅದರ ಬೆನ್ನಲ್ಲೇ, ಪ್ರಾಧಿಕಾರದ ಡಿಐಜಿ ನಿಶಾಂತ್‌ ವರ್ಮ ವರದಿ ಕೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.