ಬೆಂಗಳೂರು: ಖಾಸಗಿ ವಿಡಿಯೊ ಹಾಗೂ ಫೋಟೊವನ್ನು ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೆದರಿಸಿ ನಗರದ ಪ್ರಾಧ್ಯಾಪಕರೊಬ್ಬರಿಂದ ₹2.25 ಕೋಟಿ ನಗದು ಸುಲಿಗೆ ಮಾಡಿದ್ದ ಆರೋಪದಡಿ ಮಹಿಳೆ ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
46 ವರ್ಷದ ಸಂತ್ರಸ್ತ ವ್ಯಕ್ತಿ ನೀಡಿದ ದೂರಿನ ಆಧಾರದಲ್ಲಿ ಆರೋಪಿಗಳಾದ ಆರ್.ಟಿ. ನಗರದ ತಬಸ್ಸುಮ್ ಬೇಗಂ (38), ಅವರ ಸಹೋದರ ಅಜೀಂ ಉದ್ದೀನ್ (41), ಅಭಿಷೇಕ್ ಅಲಿಯಾಸ್ ಪೊಲೀಸ್ ಅಭಿಷೇಕ್ ಎಂಬುವವರನ್ನು ಬಂಧಿಸಲಾಗಿದೆ.
ಆರೋಪಿಗಳ ವಿರುದ್ಧ ಸುಲಿಗೆ, ವಂಚನೆ ಹಾಗೂ ಜೀವ ಬೆದರಿಕೆ ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತಿದೆ. ಮತ್ತೊಬ್ಬ ಆರೋಪಿ ಆನಂದ್ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರಿನ ವಿವರ: ‘2018ರಲ್ಲಿ ಆರ್.ಟಿ.ನಗರದ ಗ್ರೂಪ್ ಎಕ್ಸ್ ಫಿಟ್ನೆಸ್ ಸೆಂಟರ್‌ಗೆ ದೈಹಿಕ ಕಸರತ್ತು ಮಾಡಲು ತೆರಳುತ್ತಿದ್ದ ವೇಳೆ ಮಾಲೀಕ ಅಜೀಂ ಉದ್ದೀನ್‌ನ ಸಹೋದರಿ ತಬಸ್ಸುಮ್ ಬೇಗಂ ಪರಿಚಯವಾಗಿತ್ತು. ಇಬ್ಬರ ನಡುವೆ ಆತ್ಮೀಯತೆ ಬೆಳೆದು ಸಂಬಂಧ ಏರ್ಪಟ್ಟಿತ್ತು. ತನಗೆ ಮದುವೆ ಆಗಿಲ್ಲ ಎಂದು ಹೇಳಿದ್ದ ತಬುಸ್ಸುಂ, ಮಗುವೊಂದನ್ನು ದತ್ತು ಪಡೆದಿರುವುದಾಗಿ ಹೇಳಿದ್ದಳು. ಮಗು ಪಾಲನೆ ಹಾಗೂ ಉನ್ನತ ಶಿಕ್ಷಣದ ಹೆಸರಿನಲ್ಲಿ ನನ್ನಿಂದ ಹಣ ಪಡೆದುಕೊಂಡಿದ್ದಳು’ ಎಂದು ಸಂತ್ರಸ್ತ ಪ್ರಾಧ್ಯಾಪಕ ದೂರಿನಲ್ಲಿ ತಿಳಿಸಿದ್ದಾರೆ.
‘ಕೆಲ ದಿನಗಳ ಬಳಿಕ ತಬಸ್ಸುಮ್ ವಿವಾಹಿತೆ ಎಂಬ ವಿಚಾರ ಗೊತ್ತಾಯಿತು. ಈ ವಿಚಾರ ಪ್ರಶ್ನಿಸಿದಾಗ ಆಕೆಯ ಜತೆಗಿದ್ದ ಖಾಸಗಿ ಫೋಟೊ ಹಾಗೂ ವಿಡಿಯೊವನ್ನು ನನ್ನ ಮೊಬೈಲ್‌ಗೆ ಕಳುಹಿಸಿ, ಅವುಗಳನ್ನು ನನ್ನ ಕುಟುಂಬಸ್ಥರಿಗೆ ಕಳಿಸುವುದಾಗಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೆದರಿಕೆ ಹಾಕಿದಳು. ತಬಸ್ಸುಮ್, ಆಕೆಯ ಸಹೋದರ ಅಜೀಂ ಉದ್ದೀನ್ ಮತ್ತು ಪೊಲೀಸ್ ಮತ್ತು ವಕೀಲರೆಂದು ಪರಿಚಯಿಸಿಕೊಂಡು ಕರೆ ಮಾಡುತ್ತಿದ್ದ ಆನಂದ್ ಹಾಗೂ ಅಭಿಷೇಕ್ ಸೇರಿಕೊಂಡು ಹಂತ ಹಂತವಾಗಿ ಒಟ್ಟು ₹2.25 ಕೋಟಿ ವಸೂಲಿ ಮಾಡಿದ್ದಾರೆ. ಆರೋಪಿಗಳಿಗೆ ಹಣ ನೀಡಲು ಕೋಟ್ಯಂತರ ರೂಪಾಯಿ ಸಾಲ ಮಾಡಿದ್ದು, ಆರ್ಥಿಕ ಸಂಕಷ್ಟದಲ್ಲಿದ್ದೇನೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಆರು ದಿನ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಆರಂಭದಲ್ಲಿ ಉದ್ಯಮ ಆರಂಭಿಸಲು ಪ್ರಾಧ್ಯಾಪಕನಿಂದ ಹಣ ಪಡೆದುಕೊಳ್ಳಲಾಗಿದೆ. ನಂತರ ಖಾಸಗಿ ವಿಡಿಯೊ, ಫೋಟೊ ಕಳುಹಿಸಿ, ಹನಿಟ್ರ್ಯಾಪ್ ಮಾಡಿ, ಹಣ ವಸೂಲು ಮಾಡಲಾಗಿದೆ. ₹ 3 ಕೋಟಿಗೂ ಅಧಿಕ ಸುಲಿಗೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಆರೋಪಿಗಳು ಇತರರಿಗೂ ವಂಚನೆ ಮಾಡಿದ್ದಾರೆಯೇ ಎಂಬುದರ ಬಗ್ಗೆಯೂ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.