ಬೆಂಗಳೂರು: ‘ಸಂಪ್ರದಾಯ ಮತ್ತು ಧರ್ಮ ಮನುಜನನ್ನು ಪ್ರಕೃತಿಯಿಂದ ಬೇರ್ಪಡಿಸಿವೆ. ಇದರಿಂದ ಪರಿಸರದ ಭಾಗವಾಗಿ ಎಲ್ಲರಲ್ಲೂ ಎಲ್ಲದರಲ್ಲೂ ಮಿಳಿತಗೊಂಡು ಬಾಳಬೇಕಾದ ಮಾನವ ಜಂಜಾಟದಲ್ಲಿ ಸಿಲುಕಿಕೊಂಡಿದ್ದಾನೆ’ ಎಂದು ಪ್ರೊ. ಜಿ.ಕೆ.ಗೋವಿಂದರಾವ್ ಆತಂಕ ವ್ಯಕ್ತಪಡಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರ ಹಾಗೂ ರಾಜ್ಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ನಡೆದ 'ಮಹಾತ್ಮ ಗಾಂಧಿ ಅವರ ತತ್ವ ಮತ್ತು ಚಿಂತನೆ' ಕುರಿತ ವಿಚಾರಸಂಕಿರಣದಲ್ಲಿ ಮಾತನಾಡಿದರು.
ಭಾರತವು ಸಮಾನತೆ, ಶಾಂತಿ ಹಾಗೂ ಸಾಮೂಹಿಕ ಜವಾಬ್ದಾರಿಯ ಪರಿಕಲ್ಪನೆ ಹೊಂದಿರುವ ಪ್ರಜಾಪ್ರಭುತ್ವ ರಾಷ್ಟ್ರವಾಗಿ 8 ದಶಕಗಳು ಕಳೆದಿವೆ. ಆದರೆ ಆ ಮೊದಲೇ ಆರಂಭಗೊಂಡಿದ್ದ ಸ್ವಾತಂತ್ರ್ಯ ಚಳವಳಿಯನ್ನು ಪ್ರಜಾಸತ್ತಾತ್ಮಕ ವ್ಯವಸ್ಥೆಯಡಿಯಲ್ಲಿ ಮುನ್ನಡೆಸಿದ ಹಿರಿಮೆ ಗಾಂಧೀಜಿ ಅವರಿಗೆ ಸಲ್ಲುತ್ತದೆ. ಅತ್ಯಂತ ಹುರುಪಿನಿಂದ ಸಾಗುತ್ತಿದ್ದ ಚೌರಿ ಚೌರ ಚಳವಳಿ ಹಿಂಸಾತ್ಮಕ ಸ್ವರೂಪ ಕಂಡುಕೊಂಡ ಮರುಕ್ಷಣವೇ ಚಳವಳಿಯನ್ನು ಗಾಂಧೀಜಿ ಸ್ಥಗಿತಗೊಳಿಸಿದರು. ಇಂತಹ ಮೇರು ವ್ಯಕ್ತಿತ್ವವನ್ನು ಎಲ್ಲರೂ ಅನುಸರಿಸಬೇಕು. ಸಂಸ್ಕೃತಿ ಮತ್ತು ಧರ್ಮ ಕಾಲ ಕಾಲಕ್ಕೆ ಬದಲಾಗಬೇಕಿರುವ ವಿಷಯಗಳು. ಜಡ್ಡುಗಟ್ಟಿ ನಿಂತರೆ ಅಪಾಯ ಎಂದು ಹೇಳಿದರು.
ತಮ್ಮ ಶೈಕ್ಷಣಿಕ ಅವಧಿಯಲ್ಲಿ ಗಾಂಧಿ ಕಾಪಿ ಮಾಡಲು ನಿರಾಕರಿಸಿದ್ದರು. ಇಂದು ಕೆಲ ಕಾಲೇಜುಗಳ ಮೇಲೆಯೇ ಸಾಮೂಹಿಕವಾಗಿ ಕಾಪಿ ಹೊಡೆಸಿದ ಆರೋಪಗಳು ಕೇಳಿ ಬರುತ್ತಿವೆ. ಇದು ಶಿಕ್ಷಣ ವ್ಯವಸ್ಥೆ ಹಾಗೂ ಶಿಕ್ಷಕರ ಮನಸ್ಥಿತಿಯನ್ನು ಬಿಂಬಿಸುತ್ತಿದೆ. ಇಂತಹ ಬೆಳವಣಿಗೆಗಳು ಸಮಾಜಕ್ಕೆ ಮಾರಕವಾಗಲಿವೆ ಎಂದು ಅವರು ಎಚ್ಚರಿಸಿದರು. ಹಿಂಸೆ ಎಂಬುದು ಕೇವಲ ದೈಹಿಕ ದಂಡನೆಯಲ್ಲ. ನೋಡುವ ನೋಟ, ನಡತೆಯೂ ಕೆಲವೊಮ್ಮೆ ಹಿಂಸೆಗೆ ಗುರಿ ಮಾಡಬಹುದು. ಅಸಹನೆಯೂ ಹಿಂಸೆಯ ಮತ್ತೊಂದು ಸ್ವರೂಪವಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.