ADVERTISEMENT

ಪಾಕ್‌ ಪರ ಘೋಷಣೆ: ಸಯ್ಯದ್ ನಾಸೀರ್ ಹುಸೇನ್ ಅವರ ಬೆಂಬಲಿಗರ ಧ್ವನಿ ಮಾದರಿ ಸಂಗ್ರಹ

ಹಾವೇರಿಯ ಬ್ಯಾಡಗಿ ಬಳಿ ವಶಕ್ಕೆ- ಬೆಂಗಳೂರಿಗೆ ಕರೆತಂದು ವಿಚಾರಣೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2024, 0:45 IST
Last Updated 1 ಮಾರ್ಚ್ 2024, 0:45 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ‘ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕೂಗಲಾಗಿದೆ’ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ರಾಜ್ಯಸಭೆ ಸದಸ್ಯ ಸಯ್ಯದ್ ನಾಸೀರ್ ಹುಸೇನ್ ಅವರ ಬೆಂಬಲಿಗರನ್ನು ವಶಕ್ಕೆ ಪಡೆದು ಧ್ವನಿ ಮಾದರಿ ಸಂಗ್ರಹಿಸಿದ್ದಾರೆ.

ಹಾವೇರಿ ಜಿಲ್ಲೆಯ ಬ್ಯಾಡಗಿಯ ಮಹಮ್ಮದ್ ಶಫಿ ನಾಶಿಪುಡಿ, ನಿಜಾಮ್ ಸೇರಿದಂತೆ ಎಂಟು ಮಂದಿಯನ್ನು ವಿಚಾರಣೆ ನಡೆಸಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ಮೆಣಸಿಕಾಯಿ ವ್ಯಾಪಾರಿ ಆಗಿರುವ ಮಹಮ್ಮದ್ ಶಫಿ ನಾಶಿಪುಡಿ, ರಾಜ್ಯಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ನಂತರ, ತಮ್ಮೂರಾದ ಬ್ಯಾಡಗಿಗೆ ಹೋಗಿದ್ದರು. ಮೋಟೆಬೆನ್ನೂರ ಬಳಿಯ ಗೋದಾಮಿನಲ್ಲಿ ಬುಧವಾರ ರಾತ್ರಿ ವಶಕ್ಕೆ ಪಡೆದು ನಗರಕ್ಕೆ ಕರೆತರಲಾಯಿತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ವಿಡಿಯೊ ಆಧರಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಸ್ಥಳದಲ್ಲಿದ್ದವರು ಚಿತ್ರೀಕರಿಸಿದ್ದ ಎಲ್ಲ ವಿಡಿಯೊಗಳನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಈಗಾಗಲೇ ಕಳುಹಿಸಲಾಗಿದ್ದು, ವರದಿ ಬರುವುದು ಬಾಕಿ ಇದೆ.

‘ವಿಡಿಯೊದಲ್ಲಿರುವ ವ್ಯಕ್ತಿಗಳನ್ನು ಕರೆತಂದು ಧ್ವನಿ ಮಾದರಿ ಸಹ ಸಂಗ್ರಹಿಸಿ ವಾಪಸ್‌ ಕಳುಹಿಸಲಾಗುತ್ತಿದೆ. ಈ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಪರಿಶೀಲನೆ ಸಹ ನಡೆಸಲಿದ್ದಾರೆ. ವಿಡಿಯೊ ಹಾಗೂ ಧ್ವನಿ ಮಾದರಿ ಪರೀಕ್ಷೆ ವರದಿ ಬಂದ ನಂತರ ಪರಿಶೀಲಿಸಿ, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಮೂಲಗಳು ತಿಳಿಸಿವೆ.

ಘೋಷಣೆ ಕೂಗಿಲ್ಲವೆಂದು ವಾದ:

‘ವಶಕ್ಕೆ ಪಡೆದಿದ್ದ ವ್ಯಕ್ತಿಗಳು, ತಾವು ಪಾಕಿಸ್ತಾನ್ ಪರ ಘೋಷಣೆ ಕೂಗಿಲ್ಲವೆಂದು ವಾದಿಸುತ್ತಿದ್ದಾರೆ. ನಾಸೀರ್ ಸಾಬ್ ಜಿಂದಾಬಾದ್ ಎಂದು ಕೂಗಿರುವುದಾಗಿ ಹೇಳುತ್ತಿದ್ದಾರೆ. ಹೀಗಾಗಿ, ಪರೀಕ್ಷಾ ವರದಿಯಿಂದ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.