ಬೆಂಗಳೂರು: ‘ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ’ ಎಂದು ಆರೋಪಿಸಲಾದ ಪ್ರಕರಣದ ವಿಡಿಯೊಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಿರುವ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು, ಪೊಲೀಸ್ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿರುವುದಾಗಿ ಗೊತ್ತಾಗಿದೆ.
‘ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದ ಹಾಗೂ ಘಟನಾ ಸ್ಥಳದಲ್ಲಿದ್ದವರು ಚಿತ್ರೀಕರಿಸಿದ್ದ ವಿಡಿಯೊಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ವೈಜ್ಞಾನಿಕವಾಗಿ ಪರೀಕ್ಷೆ ನಡೆಸಿದ್ದ ತಜ್ಞರು, ಎಲ್ಲ ವಿಡಿಯೊಗಳು ಅಸಲಿ ಎಂಬುದಾಗಿ ವರದಿ ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ವಿಡಿಯೊ ತಿರುಚಿರುವ ಬಗ್ಗೆ ಆರಂಭದಲ್ಲಿ ಅನುಮಾನವಿತ್ತು. ಎಲ್ಲ ವಿಡಿಯೊಗಳು ಅಸಲಿ ಎಂಬುದು ಇದೀಗ ಗೊತ್ತಾಗಿದೆ. ಸ್ಥಳದಲ್ಲಿದ್ದ ವ್ಯಕ್ತಿ, ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದು ಮೇಲ್ನೋಟಕ್ಕೆ ತಿಳಿದುಬಂದಿದೆ. ವಿಡಿಯೊದಲ್ಲಿರುವ ವ್ಯಕ್ತಿಗಳನ್ನು ಈಗಾಗಲೇ ವಿಚಾರಣೆ ನಡೆಸಲಾಗಿದೆ. ಮತ್ತೊಮ್ಮೆ ವಿಚಾರಣೆಗೆ ಕರೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿವೆ.
ಧ್ವನಿ ಮಾದರಿ ವರದಿ: ರಾಜ್ಯಸಭೆ ಸದಸ್ಯ ಸಯ್ಯದ್ ನಾಸಿರ್ ಹುಸೇನ್ ಅವರ ಸಂಭ್ರಮಾಚರಣೆ ವೇಳೆ ಹಾಜರಿದ್ದ ಹಾವೇರಿ ಜಿಲ್ಲೆಯ ಬ್ಯಾಡಗಿಯ ಮಹಮ್ಮದ್ ಶಫಿ ನಾಶಿಪುಡಿ ಹಾಗೂ ನಿಜಾಮ್ ಸೇರಿ ಎಂಟು ಮಂದಿಯನ್ನು ವಶಕ್ಕೆ ಪಡೆದು ಧ್ವನಿ ಮಾದರಿ ಸಂಗ್ರಹಿಸಲಾಗಿತ್ತು. ವಿಧಿವಿಜ್ಞಾನ ಪ್ರಯೋಗಾಲಯದಿಂದ ಇದರ ವರದಿ ಬರಬೇಕಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಕೆಲ ಬೆಂಬಲಿಗರ ಧ್ವನಿಗೂ ಹಾಗೂ ವಿಡಿಯೊದಲ್ಲಿರುವ ಧ್ವನಿಗೂ ಹೋಲಿಕೆಯಾದರೆ, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.