ಬೆಂಗಳೂರು: ದೇಶದಲ್ಲಿ ಅಣಬೆ ಬೇಡಿಕೆ ಮತ್ತು ಪೂರೈಕೆಯಲ್ಲಿ ಭಾರಿ ಅಂತರವಿದ್ದು, ಇದನ್ನು ಸರಿದೂಗಿಸಲು ಅಣಬೆ ಉತ್ಪಾದನೆಗೆ ಹೆಚ್ಚು ಒತ್ತು ನೀಡುವ ಅಗತ್ಯವಿದೆ ಎಂದು ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ (ಐಸಿಎಆರ್) ತೋಟಗಾರಿಕೆ ವಿಭಾಗದ ಉಪ ಮಹಾ ನಿರ್ದೇಶಕ ಸಂಜಯ್ ಕುಮಾರ್ ಸಿಂಗ್ ಅಭಿಪ್ರಾಯಪಟ್ಟರು.
ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ (ಐಐಎಚ್‌ಆರ್) ಗುರುವಾರ ಆರಂಭವಾದ ಎರಡು ದಿನಗಳ ಅಣಬೆ ಕುರಿತ ಅಖಿಲ ಭಾರತ ಸಂಯೋಜಿತ ಸಂಶೋಧನಾ ಯೋಜನೆಯ 26ನೇ ವಾರ್ಷಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಸುಸ್ಥಿರ ವಿಧಾನದ ಮೂಲಕ ಅಣಬೆ ಕೃಷಿ ಕೈಗೊಳ್ಳಲು ಉತ್ತೇಜಿಸಬೇಕು. ಅಣಬೆ ಉತ್ಪಾದನೆಗೆ ಕೃಷಿ ತ್ಯಾಜ್ಯಗಳನ್ನು ಮಾಧ್ಯಮವಾಗಿ ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಐಐಎಚ್‌ಆರ್ ನಿರ್ದೇಶಕ ಟಿ.ಕೆ.ಬೆಹೆರಾ, ‘ಅಣಬೆ ಉತ್ಪಾದನೆಯಲ್ಲಿ ಸುಧಾರಣೆ ತರಲು ನೂತನ ತಂತ್ರಜ್ಞಾನ ಹಾಗೂ ಸಾಧನಗಳನ್ನು ಬಳಸಿಕೊಳ್ಳಬೇಕು. ಈ ತಂತ್ರಜ್ಞಾನಗಳನ್ನು ಕೃಷಿ ವಿಜ್ಞಾನ ಕೇಂದ್ರಗಳ ಜಾಲದ ಮೂಲಕ ಹಳ್ಳಿಗಳಿಗೆ ತಲುಪಿಸಿ, ಗ್ರಾಮೀಣ ಯುವಕರ ಆದಾಯ ಹೆಚ್ಚಿಸಲು ಸಾಧ್ಯವಿದೆ‘ ಎಂದು ಅಭಿಪ್ರಾಯಪಟ್ಟರು.
ಎರಡು ದಿನಗಳ ಕಾರ್ಯಾಗಾರದಲ್ಲಿ ದೇಶದ ವಿವಿಧ ಭಾಗಗಳಿಂದ 40 ಅಣಬೆ ಸಂಶೋಧಕರು ಪಾಲ್ಗೊಂಡಿದ್ದಾರೆ. ಹೊಸ ಅಣಬೆಯ ಜರ್ಮ್‌ಪ್ಲಾಸಂ, ಅಣಬೆ ಬೆಳೆ ಉತ್ಪಾದನೆ, ಸುಧಾರಣೆ, ಕೃಷಿ ವಿಸ್ತರಣೆಯಲ್ಲಿನ ಇತ್ತೀಚೆಗಿನ ಬೆಳವಣಿಗೆಯ ಕುರಿತು ಚರ್ಚೆ ನಡೆಯಲಿದೆ. ವಿಜ್ಞಾನಿಗಳು ಮತ್ತು ರೈತರೊಂದಿಗೆ ಸಂವಾದ ನಡೆಯಲಿದೆ. 50 ಯಶಸ್ವಿ ಅಣಬೆ ಕೃಷಿಕರು ಮತ್ತು ಅಣಬೆ ಉದ್ಯಮಿಗಳು ವಿಜ್ಞಾನಿಗಳೊಂದಿಗೆ ಚರ್ಚಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.