ಕೆ.ಆರ್. ಪುರ ಪೊಲೀಸ್ ಠಾಣೆಯಿಂದ ಕೊಳತ್ತೂರು ಜಂಕ್ಷನ್‌ವರೆಗೆ 15 ಕಿ.ಮೀ ಕ್ಯಾರಿಯೇಜ್‌ವೇ; ₹1,500 ಕೋಟಿ ವೆಚ್ಚ; ಶುಲ್ಕ ಪಾವತಿಸಿ ಸಂಚಾರ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಿರ್ಮಾಣ
ಬೆಂಗಳೂರು: ನಗರದಲ್ಲಿನ ಅತಿ ಉದ್ದವಾದ ಮೇಲ್ಸೇತುವೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ನಿರ್ಮಿಸಲು ಯೋಜಿಸಿದ್ದು, ಇದರಿಂದ ವಾಹನ ದಟ್ಟಣೆ ಸಾಕಷ್ಟು ಕಡಿಮೆಯಾಗುವುದಾಗಿ ಹೇಳಿದೆ.
ಕೆ.ಆರ್. ಪುರ ಪೊಲೀಸ್ ಠಾಣೆಯಿಂದ ಕೊಳತ್ತೂರು ಜಂಕ್ಷನ್‌ವರೆಗೆ ಮೇಲ್ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆ.
ಬೆಂಗಳೂರು ಪೂರ್ವ ಭಾಗದಲ್ಲಿ ಅತ್ಯಂತ ಹೆಚ್ಚಿನ ವಾಹನ ದಟ್ಟಣೆಯಿರುವ ಹಳೇ ಮದ್ರಾಸ್ ರಸ್ತೆ ಮೂಲಕ ಸಾಗುವ 15 ಕಿ.ಮೀ ಉದ್ದದ ಮೇಲ್ಸೇತುವೆ ಇದಾಗಲಿದೆ. ಟಿ.ಸಿ. ಪಾಳ್ಯ ಮತ್ತು ಭಟ್ಟರಹಳ್ಳಿಯ ಪ್ರಮುಖ ಜಂಕ್ಷನ್‌ಗಳ ವಾಹನ ದಟ್ಟಣೆಯನ್ನು ಈ ಮೇಲ್ಸೇತುವೆ ನಿವಾರಿಸಲಿದೆ.
‘ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇಗೆ ಸಂಪರ್ಕ ಕಲ್ಪಿಸುವ ಈ ಮೇಲ್ಸೇತುವೆ, ಹಳೆ ಮದ್ರಾಸ್ ರಸ್ತೆಯ ವಾಹನ ದಟ್ಟಣೆ ನಿವಾರಿಸುತ್ತದೆ. ಅಲ್ಲದೇ, ಈ ರಸ್ತೆಗೆ ಹೊಂದಿಕೊಂಡಿರುವ ಹಲವು ಭಾಗಗಳ ದಟ್ಟಣೆಯೂ ನಿವಾರಣೆಯಾಗಲಿದೆ’ ಎಂದು ಎನ್‌ಎಚ್‌ಎಐನ ಬೆಂಗಳೂರು ಯೋಜನಾ ನಿರ್ದೇಶಕ ಕೆ.ಬಿ. ಜಯಕುಮಾರ್ ತಿಳಿಸಿದರು.
‘ಹೊಸ ಮೇಲ್ಸೇತುವೆಯಲ್ಲಿ ಆರು ಪಥಗಳಲ್ಲಿರಲಿದ್ದು, ಇದು ನಗರದ ಉದ್ದವಾದ ಕ್ಯಾರಿಯೇಜ್ ವೇ ಆಗಲಿದೆ. ಹೊಸೂರು ರಸ್ತೆ (ರಾಷ್ಟ್ರೀಯ ಹೆದ್ದಾರಿ–4)ಯಲ್ಲಿರುವ ಎಲೆಕ್ಟ್ರಾನಿಕ್ ಸಿಟಿ ಎಕ್ಸ್‌ಪ್ರೆಸ್ 9.98 ಕಿ.ಮೀ ಉದ್ದವಿದ್ದು, ಇದು ಈವರೆಗಿನ ಅತಿದೊಡ್ಡ ಮೇಲ್ಸೇತುವೆಯಾಗಲಿದೆ’ ಎಂದು ಮಾಹಿತಿ ನೀಡಿದರು.
‘ಕೆ.ಆರ್. ಪುರದ ಕೇಬಲ್ ಮೇಲ್ಸೇತುವೆಯಿಂದ ಈ ಹೊಸ ಮೇಲ್ಸೇತುವೆಗೆ ಸಂಪರ್ಕ ನೀಡಬೇಕು ಎಂದು ಸ್ಥಳೀಯರು ಬಯಸುತ್ತಿದ್ದರೂ, ಅಧಿಕಾರಿಗಳು ಇದು ಸಾಧ್ಯವಿಲ್ಲ ಎಂದಿದ್ದಾರೆ. ಹಳೆ ಮದ್ರಾಸ್ ರಸ್ತೆಯಲ್ಲಿರುವ ಕಾಟಮಲ್ಲೂರು, ಹೊಸಕೋಟೆ ಜಂಕ್ಷನ್ ಮತ್ತು ಕೊಳತ್ತೂರು ಬಳಿಯ ಎಂವಿಜೆ ಆಸ್ಪತ್ರೆ ಬಳಿಯ ಮೂರು ಪ್ರಮುಖ ಕೆಳಸೇತುವೆಗಳನ್ನು ಈ ಹೊಸ ಮೇಲ್ಸೇತುವೆ ಸಂಪರ್ಕಿಸಲಿದೆ. ಈ ಮೂರು ಕೆಳಸೇತುವೆಗಳನ್ನು ತೆರವುಗೊಳಿಸುವುದಿಲ್ಲ, ಬದಲಿಗೆ ಅವುಗಳನ್ನು ಹೊಸ ಸೇತುವೆ ಜೊತೆಗೆ ಸೇರಿಸಿಕೊಳ್ಳಲಿದ್ದೇವೆ’ ಎಂದು ಜಯಕುಮಾರ್ ಹೇಳಿದರು.
‘ಹೊಸಕೋಟೆ ಟೋಲ್ ಪ್ಲಾಜಾ ಬಗ್ಗೆಯೂ ಚರ್ಚೆ ನಡೆಯುತ್ತಿದ್ದು, ಕೊಳತ್ತೂರಿಗೆ ಟೋಲ್ ಪ್ಲಾಜಾ ಸ್ಥಳಾಂತರಿಸಲು ಸಾಧ್ಯವಿಲ್ಲ. ಈ ಟೋಲ್ ಸಂಗ್ರಹ ಕೇಂದ್ರದ ಮೇಲೆ ಹೊಸ ಮೇಲ್ಸೇತುವೆ ಬರಲಿದೆ. ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ’ ಎಂದು ಅಧಿಕಾರಿಗಳು ತಿಳಿಸಿದರು.
‘ಮೇಲ್ಸೇತುವೆಯ ವೆಚ್ಚವನ್ನು ₹1,500 ಕೋಟಿ ಎಂದು ಅಂದಾಜಿಸಿದ್ದು, ಹೈಬ್ರಿಡ್ ಆ್ಯನ್ಯುಟಿ ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆ. ಎನ್‌ಎಚ್‌ಎಐ ಮತ್ತು ಗುತ್ತಿಗೆದಾರರು ವೆಚ್ಚವನ್ನು ಹಂಚಿಕೊಳ್ಳಲಿದ್ದಾರೆ. ಹೆಚ್ಚುವರಿ ಭೂಸ್ವಾಧೀನದ ಅಗತ್ಯ ಇಲ್ಲ’ ಎಂದು ಜಯಕುಮಾರ್ ಮಾಹಿತಿ ನೀಡಿದರು.
ಎನ್‌ಎಚ್‌ಎಐ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ಸಿದ್ಧಪಡಿಸುತ್ತಿದ್ದು, ಇದು 2024ರ ಮಾರ್ಚ್ ವೇಳೆಗೆ ಮುಗಿಯಲಿದೆ ಎಂದು ಹೇಳಿದರು.
‘ಪೂರ್ವ ಭಾಗದ ಬೆಂಗಳೂರಿಗೆ ಈ ಮೇಲ್ಸೇತುವೆ ಕೊಡುಗೆಯಾಗಲಿದೆ. ಶುಲ್ಕ ಪಾವತಿಸಿ ಮೇಲ್ಸೇತುವೆಯನ್ನು ಬಳಸಬೇಕಿದ್ದು, ಕೆಳಭಾಗದ ರಸ್ತೆ ಮುಕ್ತವಾಗಿರುತ್ತದೆ’ ಎಂದು ಸಂಸದ ಪಿ.ಸಿ. ಮೋಹನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.