ADVERTISEMENT

ಜೇಷ್ಠತೆ ಇದ್ದ ಶಿಕ್ಷಕರಿಗೆ ಹಿಂಬಡ್ತಿ ಸರಿಯಲ್ಲ:ವಿಧಾನ ಪರಿಷತ್ ಸದಸ್ಯ ರಾಮೋಜಿ ಗೌಡ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2024, 16:24 IST
Last Updated 23 ಸೆಪ್ಟೆಂಬರ್ 2024, 16:24 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೊಮ್ಮನಹಳ್ಳಿ: ‘ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೇವಾ ಜೇಷ್ಠತೆ ಹೊಂದಿರುವ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪಿ.ಎಸ್.ಟಿ ಶಿಕ್ಷಕರು ಎಂದು ಗುರುತಿಸಿರುವುದು ಅನ್ಯಾಯವಾಗಿದೆ, ಪದವಿ ಹೊಂದಿದ ಶಿಕ್ಷಕರಿಗೂ ಹಿಂಬಡ್ತಿ ನೀಡಿರುವುದು ಸರಿಯಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ರಾಮೋಜಿ ಗೌಡ ಹೇಳಿದರು.

ಬೆಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ, ಪ್ರೌಢ ಮತ್ತು ಅನುದಾನಿತ ಶಾಲಾ ಶಿಕ್ಷಕರ ಸಂಘದ ವತಿಯಿಂದ ಸದ್ದುಗುಂಟೆಪಾಳ್ಯದಲ್ಲಿ ಆಯೋಜಿಸಿದ್ದ 2024- 25 ನೇ ಸಾಲಿನ ಶಿಕ್ಷಕರ ದಿನಾಚರಣೆ ಶೈಕ್ಷಣಿಕ ಕಾರ್ಯಗಾರ ಮತ್ತು ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು.

ADVERTISEMENT

ಈ ಬಗ್ಗೆ ಶಿಕ್ಷಣ ಇಲಾಖೆಯ ಸಚಿವರ ಜತೆಗೆ ಚರ್ಚಿಸಿ, ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಗಿರುವ ಅನ್ಯಾಯವನ್ನು ಇನ್ನೆರಡು ತಿಂಗಳಲ್ಲಿ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ‘ಶಿಕ್ಷಕ ವೃತ್ತಿಯಲ್ಲಿರುವವರು ಮಾತೆ ಸಾವಿತ್ರಿಬಾಯಿ ಫುಲೆ ಮತ್ತು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಇಂತಹ ಮಹನೀಯರ ತ್ಯಾಗದ ಕಾರಣಕ್ಕಾಗಿಯೇ ನಾವು ಇಂದಿಗೂ ಅವರನ್ನು ಸ್ಮರಿಸುತ್ತೇವೆ. ಶಿಕ್ಷಕ ವೃತ್ತಿ ಕೇವಲ ವೃತ್ತಿಯಲ್ಲ, ಬದಲಾಗಿ ಭವಿಷ್ಯದ ಸಮಾಜವನ್ನು ರೂಪಿಸುವ ವಾಸ್ತುಶಿಲ್ಪಿಯಂತೆ’ ಎಂದರು.

ಕ್ಷೇತ್ರಶಿಕ್ಷಣಾಧಿಕಾರಿ ಆರ್ ಎನ್ ಶಶಿಕಲಾ, ಡಿ.ಎಸ್.ಆರ್.ಟಿ ಹಿರಿಯ ನಿರ್ದೇಶಕ ಕೆ.ವಿಶ್ವನಾಥ್, ಡಿಡಿಪಿಐ ನಿಂಗರಾಜ್, ಪಾಲಿಕೆ ಮಾಜಿ ಸದಸ್ಯ ಜಿ.ಮಂಜುನಾಥ್ , ಶಿಕ್ಷಕರ ಸಂಘದ ನಿಕಟಪೂರ್ವ ರಾಜ್ಯ ಅಧ್ಯಕ್ಷ ವಿ.ಎಂ ನಾರಾಯಣಸ್ವಾಮಿ, ಜಿಲ್ಲಾ ಗೌರವ ಅಧ್ಯಕ್ಷ ಸಿ ಸಿದ್ದಪ್ಪ ತಾಲ್ಲೂಕು ಅಧ್ಯಕ್ಷ ಚಂದ್ರಪ್ಪ ಕಾರ್ಯದರ್ಶಿ ರಂಗಸ್ವಾಮಿ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಣ್ಣವೀರಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.