ಬೆಂಗಳೂರು: ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರ ಪದೋನ್ನತಿ ಕನಸು 15 ವರ್ಷದಿಂದ ಸಾಕಾರಗೊಳ್ಳಲೇ ಇಲ್ಲ.
2008, 2010 ಮತ್ತು 2012ನೇ ಸಾಲಿನಲ್ಲಿ ನೇಮಕಾತಿಯಾಗಿದ್ದ ಉಪನ್ಯಾಸಕರಿಗೆ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್‌ನ (ಎಐಸಿಟಿಇ) 6ನೇ ಮತ್ತು 7ನೇ ಶ್ರೇಣಿಗಳ ಅನ್ವಯ ಸಿಎಎಸ್ (ಕೆರಿಯರ್ ಅಡ್ವಾನ್ಸ್‌ಮೆಂಟ್ ಸ್ಕೀಂ) ವೃತ್ತಿ ಪದೋನ್ನತಿ ನೀಡಬೇಕಿತ್ತು. ಆದರೆ, 2015ರಿಂದ ಇಲ್ಲಿವರೆಗೆ ಪದೋನ್ನತಿ ನೀಡುವ ಪ್ರಕ್ರಿಯೆಯೇ ನಡೆದಿಲ್ಲ. 2015ರ ನವೆಂಬರ್ 7ಕ್ಕಿಂತ ಮೊದಲೇ 54 ಉಪನ್ಯಾಸಕರಿಗೆ ಬಡ್ತಿ ನೀಡಬೇಕಿತ್ತು. ಈ ಬಗ್ಗೆ ಪ್ರಸ್ತಾವನೆಯು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸಲ್ಲಿಸಿದ್ದರೂ ಇನ್ನೂ ಆರ್ಥಿಕ ವೆಚ್ಚದ ಮಾಹಿತಿಯನ್ನು ಸರ್ಕಾರಕ್ಕೆ ನೀಡದೇ ಇರುವುದರಿಂದ ಇಲಾಖೆಯಿಂದ ಬಡ್ತಿ ಪ್ರಕ್ರಿಯೆ ನಡೆದಿಲ್ಲ.
2019ರ ಮಾರ್ಚ್‌ಗೆ ಎಜಿಪಿ (ಅಕಾಡೆಮಿಕ್ ಗ್ರೇಡ್ ಪೇ) ಪಡೆಯಲು ಅರ್ಹತೆ ಹೊಂದಿರುವ 500 ಉಪನ್ಯಾಸಕರ ಪ್ರಸ್ತಾವನೆಗಳು ಇಲಾಖೆಯಿಂದ ಸರ್ಕಾರದ ಅನುಮೋದನೆಗೇ ಇನ್ನೂ ಕಳುಹಿಸಿಲ್ಲ. 2019ರ ಮಾರ್ಚ್ ನಂತರ ಎಜಿಪಿ ಅರ್ಹತೆ ಪಡೆದಿರುವ ಸುಮಾರು 1000 ಉಪನ್ಯಾಸಕರ ಪ್ರಸ್ತಾವನೆಯನ್ನೇ ಆಹ್ವಾನಿಸದೇ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಪಾಲಿಟೆಕ್ನಿಕ್ ಉಪನ್ಯಾಸಕರು ಅಸಮಾಧಾನ
ವ್ಯಕ್ತಪಡಿಸಿದ್ದಾರೆ.
‘ನಾನು ಎಂ.ಟೆಕ್, ಪಿಎಚ್.ಡಿ ಮುಗಿಸಿ 15 ವರ್ಷಗಳಿಂದ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ಪದೋನ್ನತಿಗಾಗಿ ಇಲಾಖೆಯ ಆಯುಕ್ತರಿಗೆ ಮತ್ತು ನಿರ್ದೇಶಕರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆರ್ಥಿಕ ವೆಚ್ಚ ಸಹಿತ ವಿವಿಧ ಮಾಹಿತಿಯನ್ನು ಸರ್ಕಾರದ ನಿರ್ದೇಶಕರ ಕಚೇರಿಯಿಂದ ಆಯುಕ್ತರ ಕಚೇರಿಗೆ ಪತ್ರಗಳು ಹೋಗಿವೆ. ಆದರೆ, ಆಯುಕ್ತರ ಕಚೇರಿಯಿಂದ ಯಾವುದೇ ಮಾಹಿತಿ ನೀಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ನಮಗೆ ಅನ್ಯಾಯವಾಗಿದೆ’ ಎಂದು ಉಪನ್ಯಾಸಕ ಸುರೇಶ್ ’ಪ್ರಜಾವಾಣಿ‘ ಜತೆಗೆ ಅಳಲು ತೋಡಿಕೊಂಡರು.
‘ಗೊಂದಲದ ಗೂಡು’
ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್ ಎಂಜಿನಿಯರಿಂಗ್ ಉಪನ್ಯಾಸಕರೂ ಸೇರಿದಂತೆ ಅನೇಕರು ಪದೋನ್ನತಿ ಪಡೆದಿದ್ದರು. ಇದು ನಿಯಮ ಪ್ರಕಾರ ನಡೆದಿಲ್ಲ. ಕೆಲವರು ನಿಯಮ ಉಲ್ಲಂಘನೆ ಮಾಡಿ ಪದೋನ್ನತಿ ಪಡೆದಿದ್ದಾರೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ಗೆ ಕೆಲವರು ಸಲ್ಲಿಸಿದ್ದರು. ಅಲ್ಲದೇ ಈ ಎಲ್ಲ ಪದೋನ್ನತಿಗಳ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ಮಾಡಿ ಎಂದು ಆರ್ಥಿಕ ಇಲಾಖೆ ವಾಪಸ್ ಮಾಡಿತ್ತು. ಈಗ ಪರಿಶೀಲನೆ ನಡೆಯುತ್ತಿದೆ. 54 ಉಪನ್ಯಾಸಕರ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ತಾಂತ್ರಿಕ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.