ಬೆಂಗಳೂರು: ರಾಜ್ಯದಲ್ಲಿ ಸ್ಥಿರಾಸ್ತಿ ನೋಂದಣಿಯಲ್ಲಿ ಭಾರಿ ಏರಿಕೆಯಾಗಿದ್ದು, ಬುಧವಾರ ಒಂದೇ ದಿನ ದಾಖಲೆಯ ₹ 312 ಕೋಟಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹವಾಗಿದೆ.
‘ಬುಧವಾರ ಒಟ್ಟು 26,058 ದಸ್ತಾವೇಜುಗಳನ್ನು ನೋಂದಣಿ ಮಾಡಲಾಗಿದೆ. ಇದು ದಿನವೊಂದರಲ್ಲಿ ನಡೆದ ಅತ್ಯಧಿಕ ದಸ್ತಾವೇಜುಗಳ ನೋಂದಣಿಯ ದಾಖಲೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಇತಿಹಾಸದಲ್ಲೇ ಒಂದೇ ದಿನ ಅತ್ಯಧಿಕ ಮೊತ್ತದ ಶುಲ್ಕ ಸಂಗ್ರಹವಾಗಿದೆ’ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ಟೋಬರ್ 1ರಿಂದ ರಾಜ್ಯದಾದ್ಯಂತ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರಗಳು ಜಾರಿಗೆ ಬರಲಿವೆ. ಮಾರ್ಗಸೂಚಿ ದರಗಳಲ್ಲಿ ಶೇಕಡ 30ರಷ್ಟು ಹೆಚ್ಚಳವಾಗಲಿದ್ದು, ಅದಕ್ಕೆ ಸಮನಾಗಿ ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಪ್ರಮಾಣವೂ ಏರಿಕೆಯಾಗಲಿದೆ. ಈ ಕಾರಣದಿಂದ ಕೆಲವು ದಿನಗಳಿಂದ ಸ್ಥಿರಾಸ್ತಿ ನೋಂದಣಿ ಪ್ರಮಾಣದಲ್ಲಿ ಭಾರಿ ಏರಿಕೆಯಾಗಿದೆ. ಉಪ ನೋಂದಣಿ ಕಚೇರಿಗಳಲ್ಲಿ ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೂ ದಸ್ತಾವೇಜುಗಳ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.
ಶುಕ್ರವಾರ 12,955 ದಸ್ತಾವೇಜುಗಳ ನೋಂದಣಿಯಾಗಿದ್ದು, ₹ 130.87 ಕೋಟಿ ಶುಲ್ಕ ಸಂಗ್ರಹವಾಗಿತ್ತು. ಸೋಮವಾರ 15,936 ದಸ್ತಾವೇಜುಗಳ ನೋಂದಣಿಯಿಂದ ₹ 158.28 ಕೋಟಿ ಸಂಗ್ರಹವಾಗಿತ್ತು. ಮಂಗಳವಾರ ಕೂಡ ₹ 150 ಕೋಟಿಗಿಂತ ಹೆಚ್ಚು ಶುಲ್ಕ ಸಂಗ್ರಹವಾಗಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿಗಳು ವಿವರ ನೀಡಿದ್ದಾರೆ.
ಕಾವೇರಿ–2 ತಂತ್ರಾಂಶ ಯಶಸ್ವಿ: ಕಾವೇರಿ–2 ತಂತ್ರಾಂಶ ಅಳವಡಿಕೆಯಿಂದ ದಸ್ತಾವೇಜುಗಳ ನೋಂದಣಿ ಸುಲಲಿತವಾಗಿ ನಡೆಯುತ್ತಿದೆ. ಒಂದೇ ದಿನ ಗರಿಷ್ಠ ಪ್ರಮಾಣದ ನೋಂದಣಿಯು ತಂತ್ರಾಂಶದ ಕಾರ್ಯಕ್ಷಮತೆಯನ್ನು ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.