ADVERTISEMENT

ಬಿಬಿಎಂಪಿ ವ್ಯಾಪ್ತಿಯ ಆಸ್ತಿ ಮಾಲೀಕರಿಗೆ ‘ಮೊಬೈಲ್‌ ನೋಟಿಸ್‌’ ಜಾರಿ

₹3 ಸಾವಿರ ಕೋಟಿ ಸಂಗ್ರಹ; ಕಳೆದ ಸಾಲಿಗೆ ಹೋಲಿಸಿದರೆ ದಾಖಲೆ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2023, 15:54 IST
Last Updated 6 ನವೆಂಬರ್ 2023, 15:54 IST
ಆಸ್ತಿ ಮಾಲೀಕರಿಗೆ ಸಿಗುತ್ತಿಲ್ಲ ‘ಎ’ ಖಾತಾ
ಆಸ್ತಿ ಮಾಲೀಕರಿಗೆ ಸಿಗುತ್ತಿಲ್ಲ ‘ಎ’ ಖಾತಾ   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ಏರಿಕೆ ಕಂಡಿದೆ. ಪೂರ್ಣ ಗುರಿ ಸಾಧಿಸುವ ಹಿನ್ನೆಲೆಯಲ್ಲಿ ಮಾಲೀಕರಿಗೆ ‘ಮೊಬೈಲ್‌ ನೋಟಿಸ್‌’ ಜಾರಿ ಮಾಡಲಾಗುತ್ತಿದೆ.

ಅ.31ರ ಅಂತ್ಯಕ್ಕೆ ಶೇ 64.50ರಷ್ಟು ತೆರಿಗೆ ಸಂಗ್ರಹವಾಗಿದ್ದು, ಬಜೆಟ್‌ನಲ್ಲಿ ದಾಖಲಿಸಿರುವ ಗುರಿಯಂತೆ ಇನ್ನೂ ₹1,619 ಕೋಟಿ ಸಂಗ್ರಹವಾಗಬೇಕಿದೆ. ಕಳೆದ ಆರ್ಥಿಕ ವರ್ಷಕ್ಕಿಂತಲೂ ₹372 ಕೋಟಿ ಹೆಚ್ಚಿನ ಗುರಿಯನ್ನು ಈ ವರ್ಷ ಹೊಂದಲಾಗಿದೆ. 

2022–23ನೇ ಸಾಲಿನಲ್ಲಿ ಜನವರಿ ವೇಳೆಗೆ ₹2,890 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಲಾಗಿತ್ತು. ಈ ವರ್ಷ ಅಕ್ಟೋಬರ್‌ ಅಂತ್ಯಕ್ಕೆ ₹3 ಸಾವಿರ ಕೋಟಿಯ ಗಡಿ ತಲುಪಲಾಗಿದೆ. ಇದು ದಾಖಲೆ ಸಂಗ್ರಹವಾಗಿದ್ದರೂ, ₹1500 ಕೋಟಿ ಇನ್ನೂ ಬಾಕಿ ಇದೆ. 

ADVERTISEMENT

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾಲೀಕರ ಮೊಬೈಲ್‌ಗೆ ಒಂದು ಬಾರಿ ಸಂದೇಶ ಕಳುಹಿಸಲಾಗುತ್ತಿತ್ತು. ಆದರೆ, ಈ ವರ್ಷ ಪದೇಪದೇ ಮೊಬೈಲ್‌ಗೆ ಎಸ್‌ಎಂಎಸ್ ಕಳುಹಿಸಿ, ತೆರಿಗೆ ಪಾವತಿಸಲು ಮನವಿ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ, ನಿಯಮಗಳಂತೆ ಮುಂದಿನ ಕ್ರಮ ಕೈಗೊಳ್ಳಲೂ ವಲಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.

‘ಆಸ್ತಿ ತೆರಿಗೆಯು ನಗರ ಪಾಲಿಕೆಯ ಪ್ರಾಥಮಿಕ ಮತ್ತು ಪ್ರಮುಖ ಆದಾಯದ ಮೂಲವಾಗಿದೆ. ಎಲ್ಲ ಆಸ್ತಿ ಮಾಲೀಕರು ತಮ್ಮ ಸ್ವತ್ತಿಗೆ ತೆರಿಗೆಯನ್ನು ತ್ವರಿತವಾಗಿ ಪಾವತಿಸಬೇಕು. ಬಾಕಿ ಉಳಿಸಿಕೊಂಡಿರುವ ಮಾಲೀಕರಿಗೆ ಎಸ್‌ಎಂಎಸ್‌ ಸಂದೇಶ ಮತ್ತು ಪತ್ರಗಳು/ ನೋಟಿಸ್‌ಗಳನ್ನು ಕಳುಹಿಸಲಾಗುತ್ತಿದೆ’ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದರು.

ಆಸ್ತಿತೆರಿಗೆ ಪಾವತಿಸಲು ಆನ್‌ಲೈನ್ ಲಿಂಕ್ https://bbmptax.karnataka.gov.in ಅನ್ನು ಬಳಸಬಹುದು. ಯಾವುದೇ ಪ್ರಶ್ನೆಗಳಿದ್ದರೆ, ಮಾಹಿತಿಯ ಅಗತ್ಯವಿದ್ದರೆ ಸಹಾಯವಾಣಿ 1533 ಕರೆ ಮಾಡಬಹುದು ಎಂದು ಹೇಳಿದರು.

ಆಸ್ತಿ ತೆರಿಗೆ ಪರಿಶೀಲನೆ ಆರಂಭ

ನಗರದಲ್ಲಿರುವ ಆಸ್ತಿಗಳನ್ನು ಭೌತಿಕವಾಗಿ ಪರಿಶೀಲಿಸಿ, ಅದಕ್ಕೆ ಸರಿಯಾದ ತೆರಿಗೆಯನ್ನು ಪಾವತಿಸುವಂತೆ ‘ಡಿಮಾಂಡ್ ನೋಟಿಸ್‌’ ನೀಡುವ ಕಾರ್ಯವನ್ನು ನ.1ರಿಂದಲೇ ಬಿಬಿಎಂಪಿ ಆರಂಭಿಸಿದೆ.

ಸ್ವಯಂ ಘೋಷಿತ ತೆರಿಗೆ ಪದ್ಧತಿಯಲ್ಲಿ ಮಾಲೀಕರು ತೆರಿಗೆ ಪಾವತಿಸುತ್ತಿದ್ದಾರೆ. ಆದರೆ, ಇದರಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಆದ್ದರಿಂದ ಬಿಬಿಎಂಪಿಯ ಕಂದಾಯ ಅಧಿಕಾರಿಗಳು ಪ್ರತಿ ಕಟ್ಟಡವನ್ನು ಭೌತಿಕವಾಗಿ ಪರಿಶೀಲಿಸಿ, ಅದರ ತೆರಿಗೆ ನಿಗದಿ ಮಾಡಿ ಡಿಜಿಟಲೀಕರಣ ‌ಮಾಡುತ್ತಿದ್ದಾರೆ. ವಲಯವಾರು ನಿಗದಿಯಾಗುವ ಈ ತೆರಿಗೆಯನ್ನೇ ಪಾವತಿಸಬೇಕು ಎಂದು ಸೂಚಿಸಲಾಗುತ್ತಿದೆ.

‘ಕಟ್ಟಡದ ತೆರಿಗೆಯನ್ನು ಮರುನಿಗದಿ ಮಾಡಿದಾಗ ಅದು ಮಾಲೀಕರ ಲಾಗಿನ್‌ನಲ್ಲಿ ಕಾಣುತ್ತಿಲ್ಲ. ‘ಡಿಮಾಂಡ್ ನೋಟಿಸ್’ನಲ್ಲಿರುವುದು ಆನ್‌ಲೈನ್‌ ಬದಲಾಗುತ್ತಿಲ್ಲ. ಹೀಗಾಗಿ ಗೊಂದಲ ಸೃಷ್ಟಿಯಾಗಿದೆ. ಮಾಲೀಕರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದಗಳು ನಡೆಯುತ್ತಿವೆ’ ಎಂದು ಅಧಿಕಾರಿಗಳು ಹೇಳಿದರು.

‘ಕಂದಾಯ ನಿರೀಕ್ಷಕ (ಆರ್‌ಐ) ಹಾಗೂ ತೆರಿಗೆ ನಿರೀಕ್ಷಕರು (ಟಿಐ) ಪ್ರತಿ ದಿನ ತಲಾ 25 ಆಸ್ತಿಗಳನ್ನು ಪರಿಶೀಲಿಸಿ, ವಾಸ್ತವದ ತೆರಿಗೆಯನ್ನು ನಿಗದಿಪಡಿಸಬೇಕು ಎಂದು ಗುರಿ ನೀಡಲಾಗಿದೆ. ಆರು ಸಾವಿರ ಆಸ್ತಿಗಳಿಗೆ ಒಂದು ವೃತ್ತವನ್ನಾಗಿಸಿದ್ದು, ಅದನ್ನು ಆರ್‌ಐ ಮತ್ತು ಟಿಐ ನಿರ್ವಹಿಸಬೇಕು. ಇದರ ಜೊತೆಗೆ ವಿಧಾನಪರಿಷತ್‌ ಚುನಾವಣೆ, ಲೋಕಸಭೆ ಚುನಾವಣೆಗೆ ಮತದಾರರ ಪಟ್ಟಿ ತಯಾರಿಕೆ ಕೆಲಸ, ಆಸ್ತಿ– ಜಾಹೀರಾತು ವಿಭಾಗದ ಕೆಲಸವೂ ನಮಗಿದೆ. ಒತ್ತಡದ ಕಾರ್ಯವಾಗಿದ್ದು, ರಾತ್ರಿ 10ರವರೆಗೆ ಕೆಲಸ ಮಾಡಲಾಗುತ್ತಿದೆ’ ಎಂದು ಬಿಬಿಎಂಪಿ ಕಂದಾಯ ವಿಭಾಗದ ಸಿಬ್ಬಂದಿ ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.