ADVERTISEMENT

ವೇಶ್ಯಾವಾಟಿಕೆ ಜಾಲ: ಗುಜರಾತ್‌ನ ಗೆಜೆಟೆಡ್ ಅಧಿಕಾರಿ ಸುಲಿಗೆ

ಚರ್ಚ್‌ಸ್ಟ್ರೀಟ್‌ನಲ್ಲಿ ಘಟನೆ- ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2023, 0:45 IST
Last Updated 6 ಡಿಸೆಂಬರ್ 2023, 0:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಎಂ.ಜಿ. ರಸ್ತೆ, ಚರ್ಚ್‌ ಸ್ಟ್ರೀಟ್, ಬ್ರಿಗೇಡ್ ರಸ್ತೆ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿ ವೇಶ್ಯಾವಾಟಿಕೆ ಜಾಲ ಹರಡಿಕೊಂಡಿದ್ದು, ದೈಹಿಕ ಸಂಪರ್ಕದ ಆಸೆ ತೋರಿಸಿ ಜನರನ್ನು ಅಪಹರಿಸಿ ಸುಲಿಗೆ ಮಾಡಲಾಗುತ್ತಿದೆ. ಈ ಜಾಲಕ್ಕೆ ಸಿಲುಕಿ ಗುಜರಾತ್‌ನ ಸರ್ಕಾರಿ ಅಧಿಕಾರಿಯೊಬ್ಬರು ಹಣ ಕಳೆದುಕೊಂಡಿದ್ದು, ಈ ಸಂಬಂಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಇತ್ತೀಚೆಗೆ ನಗರಕ್ಕೆ ಬಂದಿದ್ದ ಗುಜರಾತ್‌ ರಾಜ್ಯದ ಸೂರತ್‌ನ ಗೆಜೆಟೆಡ್ ಅಧಿಕಾರಿಯೊಬ್ಬರು ಸುಲಿಗೆ ಸಂಬಂಧ ದೂರು ನೀಡಿದ್ದಾರೆ. ಇಬ್ಬರು ಲಿಂಗತ್ವ ಅಲ್ಪಸಂಖ್ಯಾತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳಿಬ್ಬರು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಅಧಿಕಾರಿ ರೀತಿಯಲ್ಲಿ ಯಾರಾದರೂ ವೇಶ್ಯಾವಾಟಿಕೆ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದರೆ ಠಾಣೆಗೆ ದೂರು ನೀಡಬಹುದು’ ಎಂದು ತಿಳಿಸಿದರು.

ADVERTISEMENT

ಪ್ರವಾಸಕ್ಕೆ ಬಂದಿದ್ದ ಅಧಿಕಾರಿ: ‘59 ವರ್ಷದ ಸರ್ಕಾರಿ ಅಧಿಕಾರಿ ಪ್ರವಾಸಕ್ಕೆಂದು ಬೆಂಗಳೂರಿಗೆ ನ. 29ರಂದು ಬಂದಿದ್ದರು. ಸ್ಥಳೀಯ ಹೋಟೆಲ್‌ನ ಕೊಠಡಿಯಲ್ಲಿ ಉಳಿದುಕೊಂಡಿದ್ದರು. ನ. 30ರಂದು ರಾತ್ರಿ 9 ಗಂಟೆ ಸುಮಾರಿಗೆ ಬ್ಯಾಗ್ ಖರೀದಿಸಲೆಂದು ಚರ್ಚ್‌ಸ್ಟ್ರೀಟ್‌ಗೆ ಹೋಗಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಅಧಿಕಾರಿಯನ್ನು ಪರಿಚಯಿಸಿಕೊಂಡಿದ್ದ ಆರೋಪಿ, ವೇಶ್ಯಾವಾಟಿಕೆಗೆ ಆಹ್ವಾನಿಸಿದ್ದರು. ಅವರ ಜೊತೆ ಕೆಲ ನಿಮಿಷ ಮಾತನಾಡಿದ್ದ ಅಧಿಕಾರಿ, ಕೊಠಡಿಯೊಂದಕ್ಕೆ ಹೋಗಲು ಒಪ್ಪಿಕೊಂಡಿದ್ದರು. ಅವಾಗಲೇ ಅಧಿಕಾರಿ ಹಾಗೂ ಆರೋಪಿ, ಆಟೊದಲ್ಲಿ ಇಂದಿರಾನಗರದಲ್ಲಿರುವ ಕೊಠಡಿಗೆ ಹೋಗಿದ್ದರು. ಅಲ್ಲಿ ಮತ್ತೊಬ್ಬ ಆರೋಪಿ ಇದ್ದರು’ ಎಂದು ತಿಳಿಸಿವೆ.

‘ದೂರುದಾರ ಅಧಿಕಾರಿ, ಇಬ್ಬರನ್ನು ಮಹಿಳೆಯರು ಎಂದು ತಿಳಿದಿದ್ದರು. ಆದರೆ, ಅವರಿಬ್ಬರು ಲಿಂಗತ್ವ ಅಲ್ಪಸಂಖ್ಯಾತರು ಎಂಬುದು ಕೊಠಡಿಯಲ್ಲಿ ಗೊತ್ತಾಗಿತ್ತು. ಅಧಿಕಾರಿ, ಕೊಠಡಿಯಿಂದ ಹೊರಡಲು ಮುಂದಾಗಿದ್ದರು. ಅದೇ ಸಂದರ್ಭದಲ್ಲಿ ಅವರನ್ನು ಒತ್ತಾಯದಿಂದ ಕೊಠಡಿಯಲ್ಲಿ ಕೂರಿಸಿದ್ದ ಆರೋಪಿಗಳು, ಜೀವ ಬೆದರಿಕೆಯೊಡ್ಡಿದ್ದರು.’

‘ಅಧಿಕಾರಿ ಬಳಿಯ ₹ 20 ಸಾವಿರ ಹಣವನ್ನು ಆರೋಪಿಗಳು ಕಿತ್ತುಕೊಂಡಿದ್ದರು. ನಂತರ, ಮೊಬೈಲ್ ಕಸಿದುಕೊಂಡಿದ್ದರು. ಅಧಿಕಾರಿಯನ್ನು ಬೆದರಿಸಿ ಪೇಟಿಎಂ ಮೂಲಕ ₹ 30 ಸಾವಿರವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದರು. ‘ಸುಲಿಗೆ ಸಂಗತಿಯನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುತ್ತೇವೆ’ ಎಂದು ಬೆದರಿಸಿ ಆರೋಪಿಗಳು ಪರಾರಿಯಾಗಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಘಟನೆಯಿಂದ ಹೆದರಿದ್ದ ಅಧಿಕಾರಿ, ಸಹೋದ್ಯೋಗಿಗಳು ಹಾಗೂ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದರು. ಮರುದಿನ ಪುನಃ ಚರ್ಚ್‌ಸ್ಟ್ರೀಟ್‌ಗೆ ಹೋಗಿದ್ದ ಅವರು, ಆರೋಪಿಗಳಿಗಾಗಿ ಹುಡುಕಾಡಿದ್ದರು. ಆದರೆ, ಅವರು ಸಿಕ್ಕಿರಲಿಲ್ಲ. ಬಳಿಕವೇ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದು ತಿಳಿಸಿವೆ.

‘ಜೀವ ಬೆದರಿಕೆ (ಐಪಿಸಿ 506), ಅಪರಾಧ ಸಂಚು (ಐಪಿಸಿ 34), ಶಾಂತಿ ಭಂಗವನ್ನುಂಟು ಮಾಡಲು ಪ್ರಚೋದನೆ (ಐಪಿಸಿ 504) ಹಾಗೂ ಸುಲಿಗೆ (ಐಪಿಸಿ 384) ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ತನಿಖೆ ಮುಂದುವರಿಸಿದೆ’ ಎಂದು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.