ಬೆಂಗಳೂರು: ಮನೆಯ ಮುಂದಿನ ಗುಲ್‌ಮೊಹರ್ ಮರದ ಕೆಳಗೆ ಕಸ ಹಾಕುತ್ತಿರುವವರಿಗೆ ಕಡಿವಾಣ ಹಾಕಲು ಪುಟ್ಟ ಗಿಡಗಳ ಮೊರೆ ಹೋಗಿದ್ದಾರೆ ಶೈಲಜಾ ಶ್ರೀನಿವಾಸನ್.
–ಬನಶಂಕರಿ ಮೊದಲ ಹಂತದ 5ನೇ ಕ್ರಾಸ್ ನಿವಾಸಿಯಾದ ಇವರ ಮನೆ ಮುಂದಿನ ಮರದಡಿಯಲ್ಲಿ ಸುತ್ತಮುತ್ತಲಿನವರು ಬಂದು ಕಸ ಎಸೆಯುತ್ತಿದ್ದರು. ಮನೆಯ ಬಾಗಿಲು ತೆರೆದರೆ ಕಸದ ರಾಶಿ ಕಣ್ಣಿಗೆ ರಾಚುತ್ತಿತ್ತು. ಕಸ ಹಾಕಬೇಡಿ ಎಂದು ಕೋರಿದ್ದಾಯಿತು. ಮರದ ಮೇಲೆ ಬರೆದದ್ದೂ ಆಯಿತು. ಕಸ ಎಸೆಯುವವರಿಗೆ ಅದು ನಾಟಲೇ ಇಲ್ಲ. ಕಸ ಎತ್ತಿ ಪದೇ ಪದೇ ಸ್ವಚ್ಛಗೊಳಿಸಿದರೂ ಕಸ ಹಾಕುವವರಿಗೆ ಏನೂ ಅನಿಸಲಿಲ್ಲ. ಕೊನೆಗೆ ಪುಟ್ಟ ಗಿಡಗಳ ಮೊರೆ ಹೋಗಬೇಕಾಯಿತು ಎಂದು ನಿಟ್ಟುಸಿರುಬಿಟ್ಟರು ಶೈಲಜಾ.
ಮಾಡಿದ್ದೇನು?: ಗುಲ್‌ಮೊಹರ್ ಮರದ ಬೇರುಗಳನ್ನೇ ಕುಂಡದ ಮಾದರಿಯಲ್ಲಿ ಬಳಸಿದರು. ಅದಕ್ಕೆ ಮಣ್ಣು, ಗೊಬ್ಬರ ತುಂಬಿ ಅಲಂಕಾರಿಕ ಗಿಡ ನೆಟ್ಟರು. ಆರಂಭದಲ್ಲಿ ಅದಕ್ಕೂ ವಿಘ್ನ ಬಂತು. ಕಿಡಿಗೇಡಿಗಳು ಗಿಡಗಳನ್ನೂ ಕಿತ್ತುಹಾಕಿದರು. ಆದರೆ ಪ್ರಯತ್ನ ಬಿಡಲಿಲ್ಲ. ಗಿಡಗಳ ರಕ್ಷಣೆಗಾಗಿ ಹಾಕಲಾದ ಇಟ್ಟಿಗೆಗಳನ್ನೂ ಕಿತ್ತು ಹಾಕಿದ ಘಟನೆಯೂ ನಡೆಯಿತು.ಮತ್ತೆ ಗಿಡ ನೆಟ್ಟು ಕಣ್ಣಿಟ್ಟರು. ಗಿಡಗಳು ಸುಂದರವಾಗಿ ಬೆಳೆಯುತ್ತಿದ್ದಂತೆಯೇ ಕಸ ಸುರಿಯುವವರಿಗೂ ಕರುಣೆ ಬಂತು. ‘ಮೂರು ತಿಂಗಳುಗಳಿಂದ ಕಸ ಸುರಿಯುವುದು ನಿಂತಿದೆ. ಆಸುಪಾಸಿನ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶ್ರಮಕ್ಕೆ ಪ್ರತಿಫಲ ಸಿಕ್ಕಿದಂತಾಗಿದೆ’ ಎಂದು ಶೈಲಜಾ ಅವರು ಖುಷಿಪಟ್ಟರು.
‘ಇದರಲ್ಲಿ ನನ್ನ ಜತೆ ಮಗಳು ಅರುಂಧತಿ, ಮನೆ ಕೆಲಸಕ್ಕೆ ಬರುವ ಭಾಗ್ಯ, ವೆಂಕಟಲಕ್ಷ್ಮೀ ಅವರೂ ಕೈಜೋಡಿಸಿದ್ದಾರೆ. ಗಿಡಗಳ ಪಾತಿ ಮಾಡುವ, ಗೊಬ್ಬರ ಹಾಕುವ ಕೆಲಸಕ್ಕೆ ಅವರು ಬಂದಿದ್ದಾರೆ. ಪತಿಯ ಬೆಂಬಲವೂ ಇತ್ತು’ ಎಂದರು ಅವರು.
ಸಸಿ ಮೇಲೆ ಪ್ರೀತಿ: ‘ಇದಕ್ಕೂ ಮೊದಲು ಮನೆಯಲ್ಲಿ ತಾರಸಿ ಉದ್ಯಾನ ಮಾಡುತ್ತಿದ್ದೆ. ಮನೆಯ ಆವರಣದಲ್ಲಿಪುಟ್ಟ ಬೋನ್ಸಾಯಿ ಗಿಡಗಳು, ಆರ್ಕಿಡ್ ಗಿಡಗಳು ಇವೆ. ಪ್ರಧಾನಿಯವರ ಸ್ವಚ್ಛ ಭಾರತ ಅಭಿಯಾನವೂ ಈ ದಿಸೆಯಲ್ಲಿ ಪ್ರೇರಣೆ ನೀಡಿತು. ಅದೆಲ್ಲಕ್ಕಿಂತಲೂ ಮುಖ್ಯವಾಗಿ ರಸ್ತೆಯಲ್ಲಿ ಓಡಾಡುವ ಜನ ಆಹ್ಲಾದಕತೆ ಅನುಭವಿಸುತ್ತಿದ್ದಾರೆ. ಅದಕ್ಕಿಂತ ಖುಷಿ ಏನಿದೆ ಹೇಳಿ’ ಎಂದು ಅವರು ಪ್ರಶ್ನಿಸಿದರು.
ಈಚಲು ಗಿಡ ನೆಟ್ಟರು ಅಭಿಮಾನಿಗಳು
ವಿದ್ಯಾರಣ್ಯಪುರದಲ್ಲಿ ಕೆಲವು ದಿನಗಳ ಹಿಂದೆ ಹಾಲಿನ ವಾಹನ ಡಿಕ್ಕಿ ಹೊಡೆದು ಉರುಳಿಬಿದ್ದ ಈಚಲು ಮರದ ಸ್ಥಳದಲ್ಲಿ ಸೋಮವಾರ ಶ್ರೀಗಂಧ ಕನ್ನಡ ಅಭಿಮಾನಿಗಳ ಸಂಘದಿಂದ ಹೊಸ ಈಚಲು ಗಿಡ ನೆಡಲಾಯಿತು.
‘ಈಚಲು ಮರದ ಬಸ್ ನಿಲ್ದಾಣ’ದ ಹೆಸರು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತೆ ಅದೇ ಸ್ಥಳದಲ್ಲಿ ಹೊಸ ಈಚಲು ಗಿಡವನ್ನು ನೆಡಲಾಗಿದೆ. ಸುಮಾರು 40 ವರ್ಷಗಳ ಇತಿಹಾಸವಿದ್ದ ಈಚಲು ಮರ ಕಳೆದ ಕೆಲವು ತಿಂಗಳ ಹಿಂದೆ ಸಂಪೂರ್ಣವಾಗಿ ಗೆದ್ದಲು ತುಂಬಿ ಬೀಳುವ ಸ್ಥಿತಿಯಲ್ಲಿತ್ತು. ಅದಕ್ಕೆ ಇದೇ ಸಂಘದ ಸದಸ್ಯರು ಔಷಧಿ ಸಿಂಪಡಿಸಿದ್ದರು. ಆದರೆ ಅಪಘಾತದಿಂದ ಮರ ಇಲ್ಲವಾಗಿತ್ತು. ಶ್ರೀಗಂಧ ಕನ್ನಡ ಅಭಿಮಾನಿಗಳ ಈ ಯತ್ನ ಬಡಾವಣೆಯ ನಿವಾಸಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
‘ಗಿಡವನ್ನು ತುಂಬಾ ಜತನದಿಂದ ಬೆಳೆಸುತ್ತೇವೆ. ಬಸ್ ನಿಲ್ದಾಣಕ್ಕೂ ಈಚಲು ಮರಕ್ಕೂ ಇರುವ ನಂಟನ್ನು ಹಾಗೇ ಉಳಿಸಿಕೊಳ್ಳುತ್ತೇವೆ’ ಎಂದು ಗಿಡ ನೆಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಕಾರ್ಯಕರ್ತರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.