ADVERTISEMENT

ಬೆಂಗಳೂರು: ಒಳಮೀಸಲಾತಿ ಜಾರಿ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 15:33 IST
Last Updated 21 ಅಕ್ಟೋಬರ್ 2024, 15:33 IST
ಒಳಮೀಸಲಾತಿ ಜಾರಿಗೊಳಿಸುವುದನ್ನು ವಿರೋಧಿಸಿ ಸೋಮವಾರ ಬಂಜಾರ ಧರ್ಮಗುರುಗಳ ಮಹಾಸಭಾ ಸದಸ್ಯರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು. 
ಒಳಮೀಸಲಾತಿ ಜಾರಿಗೊಳಿಸುವುದನ್ನು ವಿರೋಧಿಸಿ ಸೋಮವಾರ ಬಂಜಾರ ಧರ್ಮಗುರುಗಳ ಮಹಾಸಭಾ ಸದಸ್ಯರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.    

ಬೆಂಗಳೂರು: ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಪ್ರಸ್ತಾವವನ್ನು ವಿರೋಧಿಸಿ ಬಂಜಾರ ಧರ್ಮಗುರುಗಳ ಮಹಾಸಭಾದ ಸದಸ್ಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.  

ರಾಜ್ಯದಲ್ಲಿರುವ ಸಮುದಾಯಗಳ ವೈಜ್ಞಾನಿಕವಾಗಿ ದತ್ತಾಂಶವನ್ನು ಸಂಗ್ರಹಿಸದೆ ತರಾತುರಿಯಲ್ಲಿ ಮೀಸಲಾತಿ ವರ್ಗೀಕರಣ ಮಾಡಬಾರದು. ಪರಿಶಿಷ್ಟರ ಜಾತಿ ಪಟ್ಟಿಯಲ್ಲಿರುವ ವಿವಿಧ ಸಮುದಾಯದವರಿಗೆ ‌ಶಿಕ್ಷಣ ಮತ್ತು ಉದ್ಯೋಗದಲ್ಲಿ ದೊರಕಿರುವ ಅವಕಾಶಗಳು, ಆರ್ಥಿಕ ಸ್ಥಿತಿಗಳು, ರಾಜಕೀಯ ಸ್ಥಾನಮಾನ ಆಧರಿಸಿಯೇ ಒಳಮೀಸಲು ಹಂಚಿಕೆ ನಿರ್ಧಾರ ಕೈಗೆತ್ತಿಕೊಳ್ಳಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

‘ನ್ಯಾಯ ಸಮ್ಮತ ಮತ್ತು ಸಂವಿಧಾನತ್ಮಕ ಅಂಶಗಳ ದೃಷ್ಟಿಯಿಂದ ಸರ್ಕಾರ ಹೊಸದಾಗಿ ಅಧ್ಯಯನ ಮಾಡಬೇಕು. ಅದಕ್ಕಾಗಿ ಎಲ್ಲಾ ಸಮುದಾಯಗಳನ್ನು ಒಳಗೊಂಡ ನೂತನ ಆಯೋಗ ರಚಿಸಬೇಕು. ಸಮುದಾಯಗಳಲ್ಲಿ ಸಮಾನ ನ್ಯಾಯ ಮತ್ತು ಏಕತೆ ಉಳಿಸಿಕೊಳ್ಳುವ ದೃಷ್ಟಿಯಿಂದ ಆತುರದ ನಿರ್ಣಯ ಕೈಗೊಳ್ಳಬಾರದು’ ಎಂದು ಮಹಾಸಭಾದ ಅಧ್ಯಕ್ಷ ಸೈನಾ ಭಗತ್  ತಿಳಿಸಿದರು.

ADVERTISEMENT

‘ಸೂಕ್ತ ಅಧ್ಯಯನ ಮತ್ತು ಪ್ರಾತಿನಿಧ್ಯದ ಕೊರತೆ ಸಾಬೀತು ಪಡಿಸುವ ದತ್ತಾಂಶಗಳು ಲಭ್ಯವಾಗುವವರೆಗೂ ಒಳ ವರ್ಗೀಕರಣ ಮಾಡಬಾರದು’ ಎಂದು ಒತ್ತಾಯಿಸಿದರು. 

‘2011ರ ನಂತರ ಜನಗಣತಿ ನಡೆದಿಲ್ಲ‌. ಜನಸಂಖ್ಯಾ ಮಾಹಿತಿ ಇಲ್ಲದೇ ಮತ್ತು ಜಾತಿ ಗಣತಿ ನಡೆಯದೆ ಒಳಮೀಸಲಾತಿ ಮತ್ತು ವರ್ಗೀಕರಣದ ವಿಚಾರ ಸಮಂಜಸವಾಗಿರುವುದಿಲ್ಲ. ಪರಿಶಿಷ್ಟ ಸಮುದಾಯಗಳ ನಡುವೆ ಒಳಮೀಸಲಾತಿ ಹಾಗೂ ವರ್ಗೀಕರಣ ವಿಷಯಗಳಲ್ಲಿ ಹುಟ್ಟುತ್ತಿರುವ ಭಿನ್ನಾಭಿಪ್ರಾಯಗಳನ್ನು ಸರಿಪಡಿಸುವುದು. ಮತ್ತು ಸಮುದಾಯಗಳ ನಡುವೆ ಯಾವುದೇ ಧಕ್ಕೆ ತರದಂತೆ ಎಲ್ಲ ಪರಿಶಿಷ್ಟರ ಹಿತವನ್ನು ಕಾಪಾಡಲು ಸರ್ಕಾರ ಸರಿಯಾದ ಕ್ರಮವಹಿಸಬೇಕು’ ಎಂದು ಮನವಿ ಮಾಡಿದರು.

ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಬಂಜಾರ ಸಮುದಾಯದ ಮುಖಂಡ ಬಾಬು ನಾಯಕ, ಅಂಬೇಡ್ಕರ್ ಸಿದ್ದಾಂತ ವೇದಿಕೆಯ ಮಹಿಳಾ ಅಧ್ಯಕ್ಷೆ ಚಂದ್ರಿಕಾ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.