ಬೆಂಗಳೂರು: ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ವತಿಯಿಂದ ‘ನಿರ್ಭಯಾ, ದಿಶಾ...ನಾನು’ ಎಂಬ ಬ್ಯಾನರ್‌ನಡಿ ಪುರಭವನದ ಮುಂಭಾಗದಲ್ಲಿ ಭಾನುವಾರ ಪ್ರತಿಭಟನೆ ನಡೆಯಿತು.
ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದು ಏಳು ವರ್ಷ ತುಂಬಿದ ಹಾಗೂ ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆಯಿತು.
ಬೃಹತ್ ಗಾತ್ರದ ಬ್ಯಾನರ್‌ನಲ್ಲಿ ಸಹಿ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಕಾರರು, ‘ಇಂಥ ಪ್ರಕರಣಗಳ ಇತ್ಯರ್ಥಕ್ಕೆ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ತ್ವರಿತವಾಗಿ ಸ್ಪಂದಿಸಲು ಪೂರಕವಾಗುವಂತೆ ತುರ್ತು ಸಹಾಯವಾಣಿ ಆರಂಭಿಸಬೇಕು. ಪೊಲೀಸ್ ಇಲಾಖೆಯಲ್ಲಿ ಶೇ 33ರಷ್ಟು ಮಹಿಳಾ ಮೀಸಲಾತಿ ಕಡ್ಡಾಯಗೊಳಿಸಬೇಕು...’ಎಂಬ ಮತ್ತು ಇತರ ಬೇಡಿಕೆಗಳನ್ನು ಮುಂದಿಟ್ಟರು.
ಹೋರಾಟಗಾರ್ತಿ ಬೃಂದಾ ಅಡಿಗೆ ಮಾತನಾಡಿ, ‘ಮಹಿಳೆಯರಿಗೆ ರಕ್ಷಣೆ ನೀಡುವುದು ರಾಜ್ಯ ಸರ್ಕಾರದ ಉತ್ತರದಾಯಿತ್ವ ಮತ್ತು ಹೊಣೆಗಾರಿಕೆ. ಚುನಾಯಿತ ಜನಪ್ರತಿನಿಧಿಗಳು ಮಹಿಳೆಯ ಸುರಕ್ಷತೆ ವಿಚಾರದಲ್ಲಿ ಸರ್ಕಾರ ಕೈಗೊಳ್ಳುವ ಕ್ರಮಗಳಿಗೆ ಬೆಂಬಲ ನೀಡಬೇಕು’ ಎಂದು ಸಲಹೆ ನೀಡಿದರು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ನಟಿ ಶ್ರುತಿ ಹರಿಹರನ್, ‘ಪಶುವೈದ್ಯೆ ಮತ್ತು ನಿರ್ಭಯಾ
ಪ್ರಕರಣಗಳಿಂದ ಎಚ್ಚೆತ್ತುಕೊಂಡು ಇಂದು ನಾವೆಲ್ಲ ಒಟ್ಟಾಗಿದ್ದೇವೆ. ಆದರೆ, ವ್ಯವಸ್ಥೆಯ ವಿರುದ್ಧ ಧ್ವನಿ
ಎತ್ತಲು ಇಂಥ ಘಟನೆಗಳು ನಡೆಯಬೇಕೇ. ಇಂಥ ಪ್ರಕರಣಗಳಲ್ಲಿ ಭಾಗಿಯಾದವರಿಗೆ ನ್ಯಾಯಾಲಯಗಳು ಕಠಿಣ ಶಿಕ್ಷೆ ನೀಡಬೇಕು. ಮಹಿಳೆಯರು ನಿರ್ಭೀತಿಯಿಂದ ಬದುಕಲು ಪೂರಕವಾದ ವಾತಾವರಣ ಬೇಕಿದೆ’ ಎಂದರು.
ನಟ ಚೇತನ್, ‘ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ತ್ವರಿತ ನ್ಯಾಯವನ್ನು ನಾವು ಬಯಸುತ್ತೇವೆ. ಅಲ್ಲದೆ, ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ನಮ್ಮ ಪೊಲೀಸ್ ವ್ಯವಸ್ಥೆಯಲ್ಲಿಸಮಗ್ರ ಬದಲಾವಣೆ ಮಾಡಬೇಕಿದೆ. ಲಿಂಗ ಸಂವೇದನಾಶೀಲ ಪೊಲೀಸ್ ವ್ಯವಸ್ಥೆಯು ಬರಬೇಕಿದೆ’ ಎಂದು ಅವರು ಪ್ರತಿಪಾದಿಸಿದರು.
ಸಾಮಾಜಿಕ ಹೋರಾಟಗಾರರಾದ ತಾರಾ ಕೃಷ್ಣಸ್ವಾಮಿ, ಮೀರಾ ಮುಕುಂದ್, ರುತ್ ಮನೋರಮಾ ಮತ್ತಿತರರುಪ್ರತಿಭಟನೆಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.