ADVERTISEMENT

ಹಿಂದಿ ದಿವಸ ಆಚರಣೆ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 21:51 IST
Last Updated 6 ಸೆಪ್ಟೆಂಬರ್ 2021, 21:51 IST

ಬೆಂಗಳೂರು: ಸೆಪ್ಟೆಂಬರ್ 14ರಂದು ಹಿಂದಿ ದಿವಸ ಆಚರಣೆ ವಿರೋಧಿಸಿ ಎಲ್ಲ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಗ್ರಾಮೀಣ ಬ್ಯಾಂಕ್‌ಗಳ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಿಳಿಸಿದೆ.

‘ಕನ್ನಡಿಗರ ತೆರಿಗೆ ಹಣದಲ್ಲಿ ಹಿಂದಿ ದಿವಸ ಆಚರಣೆ ನಡೆಸುವುದು ಸರಿಯಲ್ಲ. ಭಾಷಾ ವೈವಿಧ್ಯತೆಯ ಭಾರತದಲ್ಲಿ ಒಂದು ಭಾಷೆಯನ್ನು ಹೊತ್ತು ಮೆರೆಸುವ ಅಗತ್ಯವಿಲ್ಲ. ಭಾರತೀಯ ಭಾಷೆಗಳಲ್ಲಿ ಹಿಂದಿಯೂ ಒಂದು. ಅದಕ್ಕೆ ವಿಶೇಷ ಮಹತ್ವ ಮತ್ತು ಪ್ರೋತ್ಸಾಹ ನೀಡುವುದು ಅನ್ಯಾಯ’ ಎಂದು ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಹಿಂದಿ ಭಾಷಿಕರಿಗೆ ಎಲ್ಲ ರಾಜ್ಯಗಳಲ್ಲೂ ಅಗತ್ಯ ಸೇವೆಗಳನ್ನು ಕಲ್ಪಿಸುವುದೇ ಇದರ ಹಿಂದಿನ ಉದ್ದೇಶ. ಆ ಮೂಲಕ ಇತರ ಭಾಷಿಕರಿಗೆ ಇಲ್ಲದ ಸೌಲಭ್ಯ ಹಿಂದಿ ಭಾಷಿಕರಿಗೆ ಒದಗಿಸಲಾಗುತ್ತಿದೆ. ಇದು ಸಂವಿಧಾನದ ಸಮಾನತೆಯ ಆಶಯಗಳಿಗೆ ವಿರುದ್ಧ’ ಎಂದಿದ್ದಾರೆ.

ADVERTISEMENT

ಹಿಂದಿ ಹೇರಿಕೆಯ ಪರಿಣಾಮವಾಗಿ ಕೇಂದ್ರ ಸರ್ಕಾರದ ಉದ್ಯೋಗಗಳು ಹಿಂದಿ ಭಾಷಿಕರ ಪಾಲಾಗುತ್ತಿವೆ. ಕನ್ನಡದ ಮಕ್ಕಳು ನಿರುದ್ಯೋಗದ ಸಮಸ್ಯೆ ಎದುರಿಸುವಂತಾಗಿದೆ. ಕರ್ನಾಟಕಕ್ಕೆ ಉತ್ತರದ ರಾಜ್ಯಗಳಿಂದ ವಲಸೆ ವಿಪರೀತವಾಗಿದ್ದು, ಕನ್ನಡಿಗರ ಅಸ್ಮಿತೆ, ಸಂಸ್ಕೃತಿ, ಪರಂಪರೆ ಮತ್ತು ಬದುಕು ಅಪಾಯಕ್ಕೆ ಸಿಲುಕಿದೆ ಎಂದು ಹೇಳಿದ್ದಾರೆ.

ಈ ಎಲ್ಲ ಕಾರಣಗಳಿಂದ ಹಿಂದಿ ದಿವಸ ವಿರೋಧಿಸಿ 14ರಂದು ಬ್ಯಾಂಕ್‌ಗಳ ಎದುರು ಸಾವಿರಾರು ಸಂಖ್ಯೆಯಲ್ಲಿ ಕನ್ನಡಿಗರು ಪ್ರತಿರೋಧ ವ್ಯಕ್ತಪಡಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.