ಬೆಂಗಳೂರು: ಸಾಮಾಜಿಕ ಹೋರಾಟಗಾರ್ತಿ, ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದ್ದ ಆರೋಪಿಗಳನ್ನು ಹಿಂದೂಪರ ಸಂಘಟನೆಗಳು ಸನ್ಮಾನಿಸಿರುವುದನ್ನು ಖಂಡಿಸಿ ಗೌರಿ ಸ್ಮಾರಕ ಟ್ರಸ್ಟ್ ಹಾಗೂ ಗೌರಿ ಬಳಗದ ಸದಸ್ಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಆರೋಪಿಗಳನ್ನು ಸನ್ಮಾನಿಸುವ ಮೂಲಕ ಗೌರಿ ಲಂಕೇಶ್ ಅವರ ಹತ್ಯೆಯನ್ನು ಬೆಂಬಲಿಸಲಾಗಿದೆ. ಇದರಿಂದ, ಸಮಾಜಕ್ಕೆ ಕೆಟ್ಟ ಸಂದೇಶ ಹೋಗಲಿದೆ. ಗೌರಿ ಹತ್ಯೆ ಆರೋಪಿಗಳಿಗೆ ಮಂಜೂರು ಮಾಡಿರುವ ಜಾಮೀನನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
‘ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿಸಿದ್ದ ಆರೋಪಿಗಳಾದ ಪರಶುರಾಮ್ ವಾಗ್ಮೋರೆ, ಮನೋಹರ್ ಯಡವೆ ಜಾಮೀನು ಪಡೆದು ಹೊರಗಡೆ ಬಂದಿದ್ದಾರೆ. ಈ ಆರೋಪಿಗಳಿಗೆ ಹಿಂದೂಪರ ಸಂಘಟನೆಗಳು ವಿಜಯಪುರದಲ್ಲಿ ಸನ್ಮಾನಿಸಲಾಗಿದೆ. ಮತ್ತೊಬ್ಬ ಆರೋಪಿ ಶ್ರೀಕಾಂತ್ ಪಾಂಗಾರ್ಕರ್ ಮಹಾರಾಷ್ಟ್ರದಲ್ಲಿ ಶಿವಸೇನೆ (ಶಿಂಧೆ ಬಣ) ಪಕ್ಷಕ್ಕೆ ಸೇರ್ಪಡೆಯಾಗಿದ್ದಾನೆ. ಇದು ಮತ್ತೊಷ್ಟು ಕೊಲೆಗಳಿಗೆ ಪ್ರಚೋದಿಸಿದಂತಾಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಗೌರಿ ಹಂತಕರಿಗೆ ಸನ್ಮಾನ ಮಾಡಿರುವ ವ್ಯಕ್ತಿಗಳ ಮೇಲೆ ಕೊಲೆ ಪ್ರಚೋದನೆ ನೀಡಿರುವ ಆರೋಪದ ಮೇಲೆ ಪ್ರಕರಣದ ದಾಖಲಿಸಬೇಕು. ಹಿಂಸೆ ಮತ್ತು ದ್ವೇಷಕ್ಕೆ ಪ್ರಚೋದನೆ ನೀಡುತ್ತಿರುವ ಕೋಮುವಾದಿ ಸಂಘಟನೆಗಳ ವಿರುದ್ಧ ಕ್ರಮ ಜರುಗಿಸಬೇಕು. ಗೌರಿ ಕೊಲೆ ಪ್ರಕರಣದ ವಿಚಾರಣೆಯನ್ನು ತ್ವರಿತಗೊಳಿಸಿ ಹಂತಕರಿಗೆ ಶಿಕ್ಷೆ ಆಗುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಗೌರಿ ಟ್ರಸ್ಟ್‌ನ ಅಧ್ಯಕ್ಷ ವಿ.ಎಸ್. ಶ್ರೀಧರ್ ಮಾತನಾಡಿ, ‘ಗೌರಿ ಹತ್ಯೆ ಆರೋಪಿಗಳಿಗೆ ಜಾಮೀನು ಮಾತ್ರ ಸಿಕ್ಕಿದೆ. ಅವರು ಇನ್ನೂ ಆರೋಪ ಮುಕ್ತರಾಗಿಲ್ಲ. ಜಾಮೀನು ಸಿಕ್ಕ ಕಾರಣಕ್ಕೆ ಆರೋಪಿಗಳನ್ನು ಸನ್ಮಾನಿಸಿರುವುದು ದುರಂತ. ಸನ್ಮಾನದ ಮೂಲಕ ಗೌರಿ ಹತ್ಯೆಯ ಹಿಂದೆ ನಾವೇ ಇದ್ದೇವೆ ಎಂದು ಸಂಘ ಪರಿವಾರ ಒಪ್ಪಿಕೊಳ್ಳುತ್ತಿದೆ’ ಎಂದು ಆರೋಪಿಸಿದರು.
ಸಾಮಾಜಿಕ ಚಿಂತಕ ಶಿವಸುಂದರ್ ಮಾತನಾಡಿ, ‘ಆರೋಪಿಗಳಿಗೆ ಸನ್ಮಾನ ಮಾಡುವ ಮೂಲಕ ಗೌರಿ ಹತ್ಯೆ ಹಿಂದೆ ನಾವೇ ಇದ್ದೇವೆ ಎಂದು ಸಂಘ ಪರಿವಾರ ಬಹಿರಂಗವಾಗಿ ಒಪ್ಪಿಕೊಂಡಿದೆ. ಗೌರಿ ಹತ್ಯೆ ಪ್ರಕರಣದ ವಿಚಾರಣೆ ವಿಳಂಬವಾಗುತ್ತಿದೆ. ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದರೂ, ನ್ಯಾಯಾಲಯದ ಪ್ರಕ್ರಿಯೆಗಳು ವಿಳಂಬವಾಗಿವೆ. ಆದ್ದರಿಂದ, ಈ ಪ್ರಕರಣದ ತ್ವರಿತ ವಿಚಾರಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಕಾರ್ಮಿಕ ನಾಯಕಿ ಎಸ್. ವರಲಕ್ಷ್ಮಿ, ಶ್ರೀಪಾದ್ ಭಟ್, ಹನುಮೇಗೌಡ, ಪೂರ್ಣ, ಐಶ್ವರ್ಯ, ವಿನಯ್ ಶ್ರೀನಿವಾಸ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.