ಬೆಂಗಳೂರು: ‘ಸರಕು ತುಂಬಿಸಲು ಹಾಗೂ ಇಳಿಸುವಾಗ ಲಾರಿ ಮಾಲೀಕರು ಹಮಾಲಿಗಳಿಗೆ ಕೂಲಿ ಹಣ ನೀಡುವುದಿಲ್ಲ. ಇನ್ನು ಮುಂದೆ ವರ್ತಕರೇ ಹಮಾಲಿಗಳಿಗೆ ಮಾಮೂಲಿ ನೀಡಬೇಕು’ ಎಂದು ಒತ್ತಾಯಿಸಿಯಶವಂತಪುರ ಲಾರಿ ಮಾಲೀಕರ ಸಂಘದ ನೇತೃತ್ವದಲ್ಲಿ ಲಾರಿ ಮಾಲೀಕರು ಗುರುವಾರ ಪ್ರತಿಭಟನೆ ನಡೆಸಿದರು.
‘ನಿಮ್ಮ ಸರಕಿಗೆ ನಿಮ್ಮ ಹಮಾಲಿ ಮಾಮೂಲಿ’ ಎಂಬ ಫಲಕ ಹಿಡಿದು, ಯಶವಂತಪುರದ ಗೊರಗುಂಟೆ ಪಾಳ್ಯ ಮುಖ್ಯ ರಸ್ತೆಯಿಂದಎಂಪಿಎಂಸಿವರೆಗೆ ಪ್ರತಿಭಟನಾ ಜಾಥಾ ನಡೆಸಿದರು. ಬಳಿಕ ಎಪಿಎಂಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಯಶವಂತಪುರ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಮೋಹನ್,‘ಕೈಗಾರಿಕೆಗಳು ಹಾಗೂ ವರ್ತಕರು ತಮ್ಮ ಸರಕುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಲು ಲಾರಿಗಳನ್ನು ಬಾಡಿಗೆಗೆ ಪಡೆಯುತ್ತಾರೆ. ಆದರೆ, ಸರಕನ್ನು ತುಂಬಲು ಮತ್ತು ಇಳಿಸಲು ‘ವಾರ್ನಿ ಮಾಮೂಲಿ’ ಎಂದು ಹಮಾಲಿಗಳು ಲಾರಿಯವರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಲಾರಿ ಮಾಲೀಕರಿಗೆ ನಷ್ಟವಾಗುತ್ತಿದೆ’ ಎಂದು ದೂರಿದರು.
‘ಲಾರಿ ಮಾಲೀಕರ ಸಂಘದ ಬೈಲಾ ನಿಯಮ ಪ್ರಕಾರ ಲಾರಿ ಮಾಲೀಕರು ಹಮಾಲಿ ಕೂಲಿ ನೀಡುವ ಬಗ್ಗೆ ಉಲ್ಲೇಖವಿಲ್ಲ. ತಿಂಗಳಿಗೆ ಒಂದು ಲಾರಿಗೆ ₹15 ಸಾವಿರಕ್ಕೂ ಹೆಚ್ಚು ಖರ್ಚು ಬೀಳುತ್ತದೆ. ಇದರ ಜೊತೆಗೆ ಹಮಾಲಿಗಳಿಗೆ ಕೂಲಿ ನೀಡುವುದರಿಂದಹೆಚ್ಚುವರಿ ನಷ್ಟವನ್ನು ಮಾಲೀಕರು ಅನುಭವಿಸಬೇಕಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಹರಿಯಾಣ, ಪಂಜಾಬ್ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಯಾವುದೇ ಲಾರಿ ಮಾಲೀಕರು ಹಮಾಲಿಗಳಿಗೆ ಹಣ ಕೊಡುತ್ತಿಲ್ಲ. ರಾಜ್ಯದಲ್ಲೂ ಆ.16ರಿಂದ ಹಮಾಲಿಗಳಿಗೆ ಮಾಮೂಲಿ ಹಣ ಕೊಡದಿರಲು ನಿರ್ಧರಿಸಿದ್ದೇವೆ. ವರ್ತಕರೇ ತಮ್ಮ ಸರಕಿಗೆ ಮಾಮೂಲಿ ನೀಡಲಿ’ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕೆಜಿಟಿಎ, ಎಪಿಎಂಸಿ ಲಾರಿ ಅಸೋಸಿಯೇಷನ್, ಬಿಸಿಎಲ್‌ಟಿಎ, ಕೆಜಿಎಫ್, ಎಫ್‌ಜಿಓಎ, ಕೆಎಸ್‌ಟಿಎ, ಬೆಂಗಳೂರು ಜಿಲ್ಲೆಯ ಎಲ್ಲ ಲಾರಿ ಮಾಲೀಕರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.