ADVERTISEMENT

‘ಆಡಿಯೊ ದೊಂಬರಾಟ ನಿಲ್ಲಿಸಿ, ರೈತರ ಬಗ್ಗೆ ಮಾತನಾಡಿ’

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2019, 20:07 IST
Last Updated 13 ಫೆಬ್ರುವರಿ 2019, 20:07 IST

ಬೆಂಗಳೂರು: ಷರತ್ತುರಹಿತ ಸಾಲಮನ್ನಾ, ಬೆಳೆಗಳಿಗೆ ಸೂಕ್ತ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ 'ಕರ್ನಾಟಕ ರೈತ ಸಂಘ' ನೇತೃತ್ವದಲ್ಲಿ ರೈತರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ರೈತ ನಾಯಕ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರ 83ನೇ ಜನ್ಮದಿನದ ಅಂಗವಾಗಿ ಈ ಪ್ರತಿಭಟನೆ ಹಮ್ಮಿಕೊಂಡಿದ್ದರು. ಬೆಳಿಗ್ಗೆ ನಗರದ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಮೆರವಣಿಗೆ ನಡೆಸಿದ ರೈತರು, ಬಹಿರಂಗ ಸಭೆ ನಡೆಸಿದರು.

‘ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಂಥ ಸಮಸ್ಯೆಗಳ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಪ್ರತಿಯೊಬ್ಬರು ರೈತರಿಗೂ ವಿಧಾನಸೌಧ ಪ್ರವೇಶಕ್ಕೆ ಮುಕ್ತ ಅವಕಾಶ ನೀಡಬೇಕು’ ಎಂದು ರೈತರು ಆಗ್ರಹಿಸಿದರು.

ADVERTISEMENT

’ಸ್ವಾಮಿನಾಥನ್ ವರದಿ ಜಾರಿಗೆ ತರಬೇಕು. ಕಳಸಾ ಬಂಡೂರಿ, ಮಹದಾಯಿ ಮತ್ತು ಮೇಕೆದಾಟು ಯೋಜನೆಗಳನ್ನು ತ್ವರಿತವಾಗಿ ಪ್ರಾರಂಭಿಸಿ ಪೂರ್ಣಗೊಳಿಸಬೇಕು. ರೈತರ ಸಮಸ್ಯೆ ಈಡೇರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ವಹಿಸಿದರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ’ ಎಂದು ಎಚ್ಚರಿಸಿದರು.

ಸಂಘದ ಜಿ.ಎ.ಲಕ್ಷ್ಮಿನಾರಾಯಣಗೌಡ, ‘ಜನಪ್ರತಿನಿಧಿಗಳು, ಆಡಿಯೊ ವಿಚಾರ ಮುಂದಿಟ್ಟುಕೊಂಡು ಅಧಿವೇಶನದ ಸಮಯವನ್ನು ವ್ಯರ್ಥ ಮಾಡುತ್ತ ದೊಂಬರಾಟ ಆಡುತ್ತಿದ್ದಾರೆ. ಕಿತ್ತಾಡುವುದನ್ನು ಬಿಟ್ಟು ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಅಧಿವೇಶನದಲ್ಲಿ ಚರ್ಚೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಸಚಿವರ ಭೇಟಿ: ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದ ಸಚಿವ ಬಂಡೆಪ್ಪ ಕಾಶೆಂಪೂರ, ‘ರೈತರೊಂದಿಗೆ ಸಭೆ ನಡೆಸುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ತಿಳಿಸುತ್ತೇನೆ’ ಎಂದು ಭರವಸೆ ನೀಡಿದರು. ಬಳಿಕವೇ ರೈತರು ಪ್ರತಿಭಟನೆ ಕೈಬಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.