ADVERTISEMENT

ಕೆಂಗೇರಿ | ಮೊಬೈಲ್‌ ಟವರ್ ನಿರ್ಮಾಣಕ್ಕೆ ವಿರೋಧ: ಗ್ರಾ.ಪಂ. ಕಚೇರಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2024, 16:18 IST
Last Updated 11 ನವೆಂಬರ್ 2024, 16:18 IST
<div class="paragraphs"><p>ಮೊಬೈಲ್‌ ಟವರ್ ನಿರ್ಮಾಣ ವಿರೋಧಿಸಿ ಸ್ಥಳೀಯರು ಅಗರ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು</p></div>

ಮೊಬೈಲ್‌ ಟವರ್ ನಿರ್ಮಾಣ ವಿರೋಧಿಸಿ ಸ್ಥಳೀಯರು ಅಗರ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು

   

ಕೆಂಗೇರಿ: ವಸತಿ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಮೊಬೈಲ್ ಟವರ್ ಕಾಮಗಾರಿಗೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಅಗರ ಗ್ರಾಮ ಪಂಚಾಯತಿ ಕಚೇರಿ ಮುಂದೆ ನೂರಾರು ಸ್ಥಳೀಯರು ಪ್ರತಿಭಟನೆ ನಡೆಸಿದರು.

ಯಶವಂತಪುರ ಕ್ಷೇತ್ರ, ಅಗರ ಗ್ರಾಮ ಪಂಚಾಯಿತಿಯ ತಾತಗುಣಿ ಗ್ರಾಮ, ಅರಸಪ್ಪ ಬಡಾವಣೆಯ ಮುಳ್ಳು ಕಟ್ಟಮ್ಮ ದೇವಾಲಯ ಬಳಿ 100 ಅಡಿ ಎತ್ತರದ ಅನಧಿಕೃತ ಮೊಬೈಲ್ ಟವರ್ ನಿರ್ಮಾಣ ಕಾಮಗಾರಿ ಆರಂಭಗೊಳ್ಳುತ್ತಿದೆ. ವಸತಿ‌ ಪ್ರದೇಶದಲ್ಲಿ ಟವರ್ ನಿರ್ಮಾಣ ಮಾಡಿದರೆ ಮಕ್ಕಳು, ವೃದ್ಧರಿಗೆ ಆರೋಗ್ಯ ಸಮಸ್ಯೆ ಎದುರಾಗಲಿದೆ. ಗರ್ಭಿಣಿಯರು ಹಾಗೂ ನವ ಜಾತ ಶಿಶುಗಳು ಮಾರಣಾಂತಿಕ ಕಾಯಿಲೆಗೆ ಒಳಗಾಗಲಿದ್ದಾರೆ ಎಂದು ಆರೋಪಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ನೂರಾರು ಮಂದಿ ಸ್ಥಳೀಯರು ದೂರು ಸಲ್ಲಿಸಿದ್ದಾರೆ. ಟವರ್ ನಿರ್ಮಾಣಕ್ಕೆ ಪಂಚಾಯಿತಿಯಿಂದ ತಡೆ ನೀಡಬೇಕೆಂದು ಅರಸಪ್ಪ ಲೇಔಟ್ ಹಾಗೂ ಸಾಯಿ ಲೇಔಟ್ ನಿವಾಸಿಗಳು ಆಗ್ರಹಿಸಿದ್ದಾರೆ.

ADVERTISEMENT

ಗ್ರಾಮಸ್ಥರ ಪ್ರತಿಭಟನೆಯಿಂದ ಎಚ್ಚೆತ್ತ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಟಿ.ವಿ.ವೀಣಾ., ಮೊಬೈಲ್ ಟವರ್ ನಿರ್ಮಾಣ ಕಾಮಗಾರಿಗೆ ಪಂಚಾಯಿತಿ ವತಿಯಿಂದ ಯಾರಿಗೂ ಅನುಮತಿ ನೀಡಿಲ್ಲ. ಹಿರಿಯ ಅಧಿಕಾರಿ ಬಳಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಹಿರಿಯ ಅಧಿಕಾರಿಗಳಿಗೂ ಅಹವಾಲು ಸಲ್ಲಿಸುವಂತೆ ಸೂಚಿಸಿದರು.

ಗ್ರಾಮಸ್ಥರಿಗೇ ತಾಕೀತು: ‘ಪಿಡಿಒ ಸಲಹೆ ಮೇರೆಗೆ ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಲತಾ.ಕೆ.ಎಸ್ ಅವರಿಗೆ ಅಹವಾಲು ಸಲ್ಲಿಸಲಾಯಿತು. ದೂರು ಸ್ವೀಕರಿಸಿದ ಕೆ.ಎಸ್.ಲತಾ ಟವರ್ ನಿರ್ಮಾಣದಿಂದ ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ ಬಗ್ಗೆ ಯಾವುದಾದರೂ ವೈದ್ಯಕೀಯ ವರದಿಗಳಿವೆಯೇ ಎಂದು ದೂರು ನೀಡಲು ಬಂದವರನ್ನೇ ಮರು ಪ್ರಶ್ನಿಸಿದರು’ ಎಂದು ಗ್ರಾಮಸ್ಥ ಕಿರಣ್ ಬೆಂಚಪ್ಪ ಅಲವತ್ತುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.