ADVERTISEMENT

ಕಂಟೈನ್‌ಮೆಂಟ್ ನಿವಾಸಿಗಳಿಗೆ ಕೊರತೆ ಆಗದಂತೆ ನೋಡಿಕೊಳ್ಳಿ: ಗೌತಮ್‌ ಕುಮಾರ್

ಮಹದೇವಪುರ ವಲಯದ ಕೋವಿಡ್ ಕಮಾಂಡ್ ಕಂಟ್ರೋಲ್ ಕೇಂದ್ರ ಪರಿಶೀಲಿಸಿದ ಮೇಯರ್‌

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 12:32 IST
Last Updated 23 ಜುಲೈ 2020, 12:32 IST
ಮೇಯರ್‌ ಎಂ.ಗೌತಮ್‌ ಕುಮಾರ್‌ ಅವರು ಮಹದೇವಪುರ ವಲಯದ ಕೋವಿಡ್‌ ಕಮಾಂಡ್‌ ಕಂಟ್ರೋಲ್‌ ಕೇಂದ್ರಕ್ಕೆ ಗುರುವಾರ ಪರಿಶೀಲಿಸಿದರು
ಮೇಯರ್‌ ಎಂ.ಗೌತಮ್‌ ಕುಮಾರ್‌ ಅವರು ಮಹದೇವಪುರ ವಲಯದ ಕೋವಿಡ್‌ ಕಮಾಂಡ್‌ ಕಂಟ್ರೋಲ್‌ ಕೇಂದ್ರಕ್ಕೆ ಗುರುವಾರ ಪರಿಶೀಲಿಸಿದರು   

ಬೆಂಗಳೂರು: ಕೋವಿಡ್‌ ನಿಯಂತ್ರಣದ ಸಲುವಾಗಿ ಗುರುತಿಸಿರುವ ಕಂಟೈನ್‌ಮೆಂಟ್ ಪ್ರದೇಶಗಳಲ್ಲಿ ನೆಲೆಸಿರುವ ನಾಗರಿಕರಿಗೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಮೇಯರ್‌ ಎಂ.ಗೌತಮ್‌ ಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದರು.

ಬಿಬಿಎಂಪಿಯ ಮಹದೇವಪುರ ವಲಯದಲ್ಲಿ ಲೌರಿ ಮೆಮೋರಿಯಲ್ ಹೈಸ್ಕೂಲಿನ ಲೌರಿ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್ ನಲ್ಲಿ ಸ್ಥಾಪಿಸಿರುವ ಕೋವಿಡ್ ಕಮಾಂಡ್ ಕಂಟ್ರೋಲ್ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿದ ಮೇಯರ್‌ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು.

‘ಸೋಂಕು ದೃಢಪಟ್ಟ ವ್ಯಕ್ತಿಗಳನ್ನು ತಕ್ಷಣವೇ ಕೋವಿಡ್ ಆಸ್ಪತ್ರೆಗೆ ಅಥವಾ ಕೋವಿಡ್ ಆರೈಕೆ ಕೇಂದ್ರಕ್ಕೆ ರವಾನಿಸಲು ವ್ಯವಸ್ಥೆ ಮಾಡಬೇಕು. ಇದಕ್ಕೆ ಆಂಬುಲೆನ್ಸ್‌ಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು’ ಎಂದರು.

ADVERTISEMENT

‘ಮನೆಯಲ್ಲೇ ಕೋವಿಡ್‌ ಆರೈಕೆಗೆ ಒಳಗಾಗುವವರಿಗೂ ಅಗತ್ಯ ಆರೋಗ್ಯ ಸೇವೆ ಒದಗಿಸಲು ಕ್ರಮ ವಹಿಸಬೇಕು. ಅಂತಹವರು ಮೆನೆಯಿಂದ ಹೊರಗೆ ಬಂದು ಅಡ್ಡಾಡದಂತೆ ನಿಗಾ ಇಡಬೇಕು. ಸೋಂಕಿತರ ಜೊತೆ ನೇರ ಹಾಗೂ ಪರೋಕ್ಷ ಸಂಪರ್ಕ ಹೊಂದಿರುವವರೂ ಮನೆಯಲ್ಲೇ ಕ್ವಾರಂಟೈನ್‌ಗೆ ಒಳಗಾಗುವಂತೆ ಸೂಚಿಸಬೇಕು. ಅವರು ಮನೆಯಿಂದಾಚೆ ಬಂದು ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಸೂಚನೆ ನೀಡಿದರು.

‘ಸಹಾಯವಾಣಿಗೆ ಸಾರ್ವಜನಿಕರು ಕರೆ ಮಾಡಿದಾಗ ಕೂಡಲೆ ಸ್ಪಂದಿಸಬೇಕು. ಈ ಸಲುವಾಗಿ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಬೇಕು’ ಎಂದರು.

ವಲಯದ ಜಂಟಿ ಆಯುಕ್ತ ವೆಂಕಟಾಚಲಪತಿ ಹಾಗೂ ಮುಖ್ಯ ಎಂಜಿನಿಯರ್‌ ಪರಮೇಶ್ವರ್‌ ಅವರು ಕಮಾಂಡ್ ಕಂಟ್ರೋಲ್ ಸೆಂಟರ್‌ನ ಕಾರ್ಯನಿರ್ವಹಣೆ ಕುರಿತು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.