ಬೆಂಗಳೂರು: ತ್ಯಾಜ್ಯ ಆಯುವವರಿಗೆ ಗುರುತಿನ ಚೀಟಿ ನೀಡಿ, ಸೌಲಭ್ಯಗಳನ್ನು ಒದಗಿಸುವಂತೆ ನಗರದಲ್ಲಿ ಬುಧವಾರ ನಡೆದ ಹಸಿರು ಹಬ್ಬ ಕಾರ್ಯಕ್ರಮದಲ್ಲಿ ಒಕ್ಕೊರಲಿನಿಂದ ಆಗ್ರಹಿಸಲಾಯಿತು.
ಪರಿಸರ ಮತ್ತು ಆವರ್ತ ಆರ್ಥಿಕತೆಗೆ ಕೊಡುಗೆಗಳನ್ನು ನೀಡುತ್ತಾ ಬಂದಿರುವ ‘ತ್ಯಾಜ್ಯ ಶ್ರಮಿಕರು’ ರಾಜ್ಯದಲ್ಲಿ 4,23,606 ಮಂದಿ ಇದ್ದಾರೆ. ಅವರಿಗೆ ಸರ್ಕಾರದ ಯಾವುದೇ ಸವಲತ್ತುಗಳು ತಲುಪುತ್ತಿಲ್ಲ. ಕಾರ್ಮಿಕ ಇಲಾಖೆಯಿಂದ ಸಮೀಕ್ಷೆ ನಡೆಸಿ. ತ್ಯಾಜ್ಯ ಕಾರ್ಮಿಕರನ್ನು ಗುರುತಿಸಿ ಗುರುತಿನ ಚೀಟಿ ನೀಡಬೇಕು. ಸಾಮರ್ಥ್ಯ ಅಭಿವೃದ್ಧಿ ಮತ್ತು ಕೌಶಲ ತರಬೇತಿ ಒದಗಿಸಬೇಕು. ಉದ್ಯಮ ಸ್ಥಾಪಿಸಲು ಮತ್ತು ವಿಸ್ತರಿಸಲು ಹಣಕಾಸಿನ ನೆರವು ನೀಡಬೇಕು ಎಂದು ತ್ಯಾಜ್ಯ ಶ್ರಮಿಕರು ಒತ್ತಾಯಿಸಿದರು.
ತ್ಯಾಜ್ಯ ಶುಚಿಗೊಳಿಸುವ ಮತ್ತು ಆರೋಗ್ಯದ ಅಪಾಯಗಳಿಗೆ ಗುರಿಯಾಗುವ ಶ್ರಮಿಕರ ಮಕ್ಕಳಿಗೆ ಕೇಂದ್ರ ಸರ್ಕಾರ ₹3,000, ರಾಜ್ಯ ಸರ್ಕಾರ ₹2,000 ವಿದ್ಯಾರ್ಥಿವೇತನ ನೀಡಬೇಕು. ಜೀವವಿಮೆಯನ್ನು ತ್ಯಾಜ್ಯ ಶ್ರಮಿಕರಿಗೆ ವಿಸ್ತರಿಸಬೇಕು. ತಾಯಿಯ ಜಾತಿ ಆಧಾರದಲ್ಲಿ ಮಗುವಿಗೆ ಜಾತಿ ಪ್ರಮಾಣ ಪತ್ರ ನೀಡಬೇಕು. ಪಡಿತರ ಚೀಟಿ ನೀಡಬೇಕು ಎಂದು ಬೇಡಿಕೆ ಮುಂದಿಟ್ಟರು.
ಕೊಳೆಗೇರಿ ಮಂಡಳಿ ಗುರುತಿಸಿದ ಕೊಳೆಗೇರಿಗಳನ್ನು ಕೊಳಚೆ ಪ್ರದೇಶಗಳೆಂದು ಘೋಷಿಸಬೇಕು. ಹಿಡುವಳಿ ಭದ್ರತೆ ಖಚಿತಪಡಿಸಿ ಹಕ್ಕುಪತ್ರ ನೀಡಬೇಕು. ವಸತಿ ಘಟಕಗಳನ್ನು ಒದಗಿಸಬೇಕು. ನೀರು, ವಿದ್ಯುತ್, ನೈರ್ಮಲ್ಯಗಳಂಥ ಮೂಲ ಸೌಲಭ್ಯ ಒದಗಿಸಬೇಕು. ಪುನರ್ವಸತಿ ಕಲ್ಪಿಸಿದ ಬಳಿಕವಷ್ಟೇ ಕೊಳೆಗೇರಿಗಳನ್ನು ತೆರವು ಮಾಡಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ, ಮಾಜಿ ಶಾಸಕಿ ಸೌಮ್ಯಾ ರೆಡ್ಡಿ, ಸಹಾಯಕ ಕಾರ್ಮಿಕ ಆಯುಕ್ತ ಸಂತೋಷ್ ಹಿಪ್ಪರಗಿ, ಸೆಂಟರ್ ಫಾರ್ ಲೇಬರ್ ಸ್ಟಡೀಸ್ ಸಹನಿರ್ದೇಶಕ ಬಾಬು ಮ್ಯಾಥ್ಯು, ಹಸಿರು ದಳ ಕಾರ್ಯನಿರ್ವಾಹಕ ನಿರ್ದೇಶಕಿ ನಳಿನಿ ಶೇಖರ್, ವಕೀಲ ಹಸನ್, ತ್ಯಾಜ್ಯ ಶ್ರಮಿಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.