ADVERTISEMENT

‘ಲೈಂಗಿಕ ಅಲ್ಪಸಂಖ್ಯಾತರಿಗೂ ಉಚಿತ ಪ್ರಯಾಣ ಕಲ್ಪಿಸಿ’

​ಪ್ರಜಾವಾಣಿ ವಾರ್ತೆ
Published 1 ಜೂನ್ 2023, 0:40 IST
Last Updated 1 ಜೂನ್ 2023, 0:40 IST

ಬೆಂಗಳೂರು: ‘ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೂ ಉಚಿತ ಬಸ್‌ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ಗ್ರೀನ್‌ಪೀಸ್‌ ಇಂಡಿಯಾ ಮನವಿ ಮಾಡಿದೆ.

‘ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಲು ಹೊಸ ಸರ್ಕಾರವು ಇಡುತ್ತಿರುವ ಹೆಜ್ಜೆಯೂ ಉತ್ತಮವಾದದ್ದು. ಅದೇ ರೀತಿ ಸಾರಿಗೆ ನಿಗಮಗಳಲ್ಲಿ ಹಲವು ಸುಧಾರಣೆ ಕ್ರಮ ಕೈಗೊಳ್ಳಬೇಕು. ಜತೆಗೆ, ಲೈಂಗಿಕ ಅಲ್ಪಸಂಖ್ಯಾತರಿಗೂ ಅವಕಾಶ ಸಿಗಬೇಕು’ ಎಂದು ಕೋರಿದೆ.

‘ಪಂಜಾಬ್, ತಮಿಳುನಾಡು, ದೆಹಲಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಇದೆ. ಆ ರಾಜ್ಯಗಳ ನೀತಿಗಳಿಂದ ಸ್ಫೂರ್ತಿ ಪಡೆದಂತೆಯೇ ಅಲ್ಲಿ ಎದುರಿಸಿದ ಸವಾಲು ಹಾಗೂ ನ್ಯೂನತೆಗಳಿಂದಲೂ ಪಾಠ ಕಲಿಯಬೇಕಿದೆ. ದೆಹಲಿಯ ಕೆಲವು ಬಸ್ ಚಾಲಕರು ಉದ್ದೇಶಪೂರ್ವಕವಾಗಿಯೇ ಮಹಿಳಾ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿರಾಕರಿಸುತ್ತಿದ್ದಾರೆ. ಇದು ಆಘಾತಕಾರಿ ಘಟನೆ’ ಎಂದು ಗ್ರೀನ್‌ಪೀಸ್‌ ಇಂಡಿಯಾ ಹೇಳಿದೆ.

ADVERTISEMENT

‘ಮಹಿಳೆಯರಿಗೆ ಉಚಿತ ಬಸ್‌ಗಳು ಸುಲಭವಾಗಿ ಸಿಗಬೇಕು. ಮಹಿಳೆಯರ ಜತೆಗೆ ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೂ ಉಚಿತ ಬಸ್ ಸೌಲಭ್ಯ ಇರಬೇಕು. ಬಸ್‌ಗಳಲ್ಲಿ ಮಹಿಳೆಯರು ಮತ್ತು ವೃದ್ಧರಿಗೆ ಮಾತ್ರವಲ್ಲದೆ ಲೈಂಗಿಕ ಅಲ್ಪಸಂಖ್ಯಾತರಿಗೂ ಮೀಸಲು ಸೀಟುಗಳಿರಬೇಕು. ಸುರಕ್ಷತಾ ಸಹಾಯವಾಣಿ ಸಂಖ್ಯೆಗಳನ್ನು ಬಸ್‌ ಮತ್ತು ಬಸ್‌ ತಂಗುದಾಣ, ನಿಲ್ದಾಣಗಳಲ್ಲಿ ಎಲ್ಲರಿಗೂ ಕಾಣುವಂತೆ ಪ್ರದರ್ಶಿಸಬೇಕು ಎಂದು ಮನವಿ ಮಾಡಿದೆ.

‘ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನೇ ನಿರ್ವಾಹಕರು, ಚಾಲಕರು ಹಾಗೂ ಸಿಬ್ಬಂದಿಗಳನ್ನಾಗಿ ನೇಮಿಸಿಕೊಳ್ಳಬೇಕು’ ಎಂದು ಎಂದು ಕೋರಿದೆ.

‘ಎಲ್ಲ ಬಸ್ ನಿಲ್ದಾಣಗಳಲ್ಲಿ ಶೌಚಾಲಯಗಳು, ಬೆಳಕಿನ ವ್ಯವಸ್ಥೆ, ಮಾಹಿತಿ ವ್ಯವಸ್ಥೆ ಮುಂತಾದ ಸೌಕರ್ಯಗಳನ್ನು ಅಳವಡಿಸಬೇಕು. ಪ್ರಯಾಣಿಕರು, ವಿಶೇಷವಾಗಿ ಮಹಿಳೆಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ವಾತಾವರಣ ಸೃಷ್ಟಿಸುತ್ತದೆ’ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.