ಬೆಂಗಳೂರು: ನಿವೃತ್ತಿಯಾಗಿರುವ ಅನುದಾನಿತ ಶಾಲಾ–ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಪಿಂಚಣಿ ಸೌಲಭ್ಯ ಕಲ್ಪಿಸುವಂತೆ ‘2006ರ ಪೂರ್ವದ ಕರ್ನಾಟಕ ರಾಜ್ಯ ಅನುದಾನಿತರ ಶಾಲಾ–ಕಾಲೇಜುಗಳ ಪಿಂಚಣಿ ವಂಚಿತರ ವೇದಿಕೆ’ ಒತ್ತಾಯಿಸಿದೆ.
‘ವಯೋ ನಿವೃತ್ತಿ ನಂತರ ಪಿಂಚಣಿ ರಹಿತವಾಗಿ ಜೀವನ ಸಾಗಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ. ಅನುದಾನಿತ ಶಾಲೆಗಳ ನಿವೃತ್ತ ಶಿಕ್ಷಕರನ್ನು ಉಪವಾಸಗೆಡಿಸಿ ಶಿಕ್ಷಕರ ದಿನಾಚರಣೆ ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ’ ಎಂದು ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಡಾ.ಜಿ.ಆರ್. ಹೆಬ್ಬೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ರಾಜ್ಯದಲ್ಲಿ ಜಾರಿಗೊಳಿಸಿರುವ ನೂತನ ಪಿಂಚಣಿ ಯೋಜನೆಯೇ (ಎನ್‌ಪಿಎಸ್) ಇದಕ್ಕೆ ಕಾರಣವಾಗಿದೆ. ಎನ್‌ಪಿಎಸ್ ನಮಗೆ ಅನ್ವಯಿಸುವುದಿಲ್ಲ ಮತ್ತು ಸಂಬಂಧವೇ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
‘2006ರ ಏಪ್ರಿಲ್ 1ರ ಪೂರ್ವದಲ್ಲಿ ಅನುದಾನ ರಹಿತವಾಗಿ ನೇಮಕಾತಿಯಾಗಿ ವೇತನ ಪಡೆದು ಸುಮಾರು 10 ವರ್ಷಗಳಿಂದ ಪಿಂಚಣಿ ಇಲ್ಲದೆಯೇ ಊಟ ಮತ್ತು ಔಷಧ ಖರೀದಿಗೂ ಹಣವಿಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾವು ಹಳೆ ಪಿಂಚಣಿ ವ್ಯವಸ್ಥೆಗೆ ಸೇರಿದ್ದೇವೆ. ಶಾಲೆಗಳ ಶಾಶ್ವತ ಅನುದಾನ ರಹಿತ ಅವಧಿಯ ಸೇವೆಯನ್ನು ಪರಿಗಣಿಸಿದರೆ ಮಾತ್ರ ವಯೋನಿವೃತ್ತಿ ಪಿಂಚಣಿ ಪಡೆಯಲು ಸಾಧ್ಯ’ ಎಂದು ತಿಳಿಸಿದ್ದಾರೆ.
‘ಈ ಹೊಸ ಪಿಂಚಣಿ ವ್ಯವಸ್ಥೆಯಲ್ಲಿ ಉದ್ಯೋಗದಾತನಿಂದ ಶೇ 10 ರಷ್ಟು ಮತ್ತು ಸರ್ಕಾರ ಶೇ 14ರಷ್ಟು ಹಣ ಕೊಡಬೇಕು. ಈ ಮೊತ್ತವನ್ನು ಸರ್ಕಾರ ಬೇರೊಂದು ಕಡೆಗೆ ಹೂಡಿಕೆ ಮಾಡಿ ಅದರಿಂದ ಪಿಂಚಣಿ ನೀಡಲಾಗುತ್ತದೆ. ಈ ವ್ಯವಸ್ಥೆ 2006ರ ಏಪ್ರಿಲ್ 1ರಿಂದ ಜಾರಿಯಾಗಿದೆ. ಆದರೆ, ಶಿಕ್ಷಣ ಇಲಾಖೆಯಲ್ಲಿ ಅನುದಾನಿತ ಹಾಗೂ ಅನುದಾನರಹಿತ ಎಂಬ ವ್ಯವಸ್ಥೆ ಇರುವುದರಿಂದ ಈ ಸಮಸ್ಯೆ ಎದುರಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಸೇವೆಯನ್ನು ಪರಿಗಣಿಸಿ ವಯೋನಿವೃತ್ತಿ ಪಿಂಚಣಿ ಬಿಡುಗಡೆಗೊಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.
‘ಸುಮಾರು ಐದು ಸಾವಿರ ಜನರಿಗೆ ಪಿಂಚಣಿ ಸಮಸ್ಯೆಯಾಗಿದೆ. ಪಿಂಚಣಿ ಇಲ್ಲದೆಯೇ ನಿಕೃಷ್ಟವಾಗಿ ಜೀವನ ನಡೆಸುತ್ತಿದ್ದೇವೆ. ಜತೆಗೆ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದೇವೆ. ಔಷಧಿ ಪಡೆಯಲು ಹಣವಿಲ್ಲ, ಬಿಪಿಎಲ್ ಕಾರ್ಡ್ ಸಹ ಸಿಗುತ್ತಿಲ್ಲ. ಶಿಕ್ಷಕರಾದ ನಮಗೆ ಭಿಕ್ಷೆ ಬೇಡಲು ಆಗುತ್ತಿಲ್ಲ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.