ಬೆಂಗಳೂರು: ಪಿಎಸ್‌ಐ 545 ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿ ಶಾಸಕರಾದ ಸಿ.ಎನ್. ಅಶ್ವತ್ಥನಾರಾಯಣ್, ಬಸನಗೌಡ ಪಾಟೀಲ ಯತ್ನಾಳ, ಮಾಜಿ ಶಾಸಕ ಬಸವರಾಜ ಧಡೇಸೂಗುರು ಸೇರಿದಂತೆ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ.
ಪಿಎಸ್‌ಐ ನೇಮಕಾತಿ ಅಕ್ರಮದ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದ ಏಕಸದಸ್ಯ ಆಯೋಗ ವಿಚಾರಣೆ ನಡೆಸುತ್ತಿದೆ. ಪ್ರಕರಣದ ಬಗ್ಗೆ ಮಾಹಿತಿ ಕಲೆಹಾಕುವುದಕ್ಕಾಗಿ ಸಮನ್ಸ್ ಜಾರಿ ಮಾಡಿರುವುದಾಗಿ ಗೊತ್ತಾಗಿದೆ.
ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದ ಆರೋಪದಡಿ ಕಾನ್‌ಸ್ಟೆಬಲ್ ಸಿ.ಎಸ್. ನಾಗೇಶ್ ಗೌಡನನ್ನು ಸಿಐಡಿ ಪೊಲೀಸರು ಬಂಧಿಸಿದ್ದರು. ಈತ, ಸಿ.ಎನ್. ಅಶ್ವತ್ಥನಾರಾಯಣ ಅವರ ಸಂಬಂಧಿ ಎಂಬುದಾಗಿ ಸುದ್ದಿಯಾಗಿತ್ತು. ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಹಾಗೂ ಬಸನಗೌಡ ಪಾಟೀಲ ಯತ್ನಾಳ ಅವರು ಅಕ್ರಮದ ಬಗ್ಗೆ ಮಾತನಾಡಿದ್ದರು. ಅಕ್ರಮದಲ್ಲಿ ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಸವರಾಜ ಧಡೇಸೂಗುರು ಭಾಗಿಯಾದ ಬಗ್ಗೆ ವಿಡಿಯೊಗಳು ಹರಿದಾಡಿದ್ದವು.
‘ಪಿಎಸ್‌ಐ ಅಕ್ರಮದ ಬಗ್ಗೆ ಕುಮಾರಸ್ವಾಮಿ, ಅಶ್ವತ್ಥನಾರಾಯಣ್ ಹಾಗೂ ಅವರ ಸೋದರ ಸತೀಶ್, ಯತ್ನಾಳ, ಬಸವರಾಜ ಧಡೇಸೂಗುರು ಇತರರನ್ನು ವಿಚಾರಣೆ ನಡೆಸಬೇಕು’ ಎಂದು ಕೋರಿ ಕೆಲ ವಕೀಲರು ಆಯೋಗಕ್ಕೆ ದೂರು ನೀಡಿದ್ದರು. ಅದನ್ನು ಆಧರಿಸಿ, ಎಲ್ಲರಿಗೂ ಇದೀಗ ಸಮನ್ಸ್ ನೀಡಲಾಗಿದೆ.
ಆಯೋಗದ ಎದುರು ಬುಧವಾರ ಬೆಳಿಗ್ಗೆ ಖುದ್ದಾಗಿ ಅಥವಾ ವಕೀಲರ ಜೊತೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ನಲ್ಲಿ ತಿಳಿಸಿರುವುದಾಗಿ ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.